ಸಿ.ಎಂ ಕ್ಷೇತ್ರದಲ್ಲೆ ಅಸ್ಪೃಶ್ಯತೆ ಜೀವಂತ: 23 ಜನರ ಮೇಲೆ ಅಟ್ರಾಸಿಟಿ ಕೇಸು

Prasthutha|

ಶಿವಮೊಗ್ಗ, ಜು.25: ಮುಖ್ಯಮಂತ್ರಿಗಳ ಸ್ವಕ್ಷೇತ್ರ ಶಿಕಾರಿಪುರದ ಮಾಯತ್ತಮ್ಮನ ಮುಚ್ಚಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳ ಮೇಲೆ ಸವರ್ಣೀಯರ ದೌರ್ಜನ್ಯ ಮುಂದುವರೆದಿದ್ದು, ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ 23 ಜನರ ಸವರ್ಣಿಯರ ವಿರುದ್ಧ ಅಟ್ರಾಸಿಟಿ ಕೇಸು ದಾಖಲಾಗಿದೆ.

- Advertisement -

ಶಿಕಾರಿಪುರದಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಇಲ್ಲಿನ ಮಾಯತ್ತಮ್ಮ ಮುಚ್ಚಡಿ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯಗಳ ಕಾಲೋನಿ ಜಲಮಯವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಸಾಮಾನು ಸರಂಜಾಮುಗಳು ನೀರುಪಾಲಾಗಿ ಕೇರಿಯ ಜನರು ಪರದಾಡುವಂತಾಗಿತ್ತು.

ಮನೆಯೊಳಗಿದ್ದ ನೀರನ್ನು ಹೊರ ಹಾಕಲು ಪೂರಕವಾಗಿ ಗ್ರಾಮಪಂಚಾಯ್ತಿ ಪಿಡಿಓ ಮತ್ತು ಸದಸ್ಯರ ಅನುಮತಿ ಪಡೆದ ಪರಿಶಿಷ್ಟ ಕಾಲೋನಿಯ ಯುವಕರು ಕಾಲುವೆ ತೆಗೆದಿದ್ದು ಗ್ರಾಮದ ಲಿಂಗಾಯಿತ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ. ಲಿಂಗಾಯಿತ ಸಮುದಾಯ ಬಸವರಾಜಪ್ಪ, ಮಲ್ಲೇಶಪ್ಪ ನೇತೃತ್ವದಲ್ಲಿ 50- 60 ಜನ ಗುಂಪು ಕಟ್ಟಿಕೊಂಡು ಕಾಲುವೆ ತೆಗೆಯಲು ಅಡ್ಡಿಪಡಿಸಿದ್ದಲ್ಲದೆ. ಜಾತಿ ನಿಂದನೆ ಮಾಡಿ‌ಜೀವ ಬೆದರಿಕೆ ಹಾಕಿದ್ದಾರೆಂದು ದಲಿತ ಕಾಲೋನಿಯ ವಿರೇಶ್ ದೂರು ನೀಡಿದ್ದಾರೆ.

- Advertisement -

ಅಸ್ಪೃಶ್ಯತೆ ಜೀವಂತ

ಮಾಯತ್ತಮ್ಮನ ಮುಚ್ಚಡಿ ಗ್ರಾಮದಲ್ಲಿ ‌ಲಿಂಗಾಯಿತ ಸಮುದಾಯ ಬಲಾಢ್ಯವಾಗಿದ್ದು ಕಡಿಮೆ ಸಂಖ್ಯೆಯಲ್ಲಿರುವ ದಲಿತ ಕುಟುಂಬಗಳು ಜೀವನೋಪಾಯಕ್ಕೆ ಮೇಲ್ಜಾತಿಯವರ ಜಮೀನನ್ನೇ ಆಶ್ರಯಿಸಬೇಕಾಗಿದೆ. ಮೊದಲಿನಿಂದಲೂ ಲಿಂಗಾಯಿತರು ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಿಸುತ್ತಾ ಬಂದಿದ್ದು ಹಲವಾರು ಬಾರಿ ಸಂಘರ್ಷಗಳು ನಡೆದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿವೆ. ಆದರೆ ಜಾತಿಯೇತೆಯನ್ನು ನಿವಾರಿಸುವಲ್ಲಿ ಪೊಲೀಸ್ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಪ್ರಯತ್ನ ಮಾಡಿಲ್ಲ.

ಕಳೆದ ತಿಂಗಳ ಜೂನ್ ನಲ್ಲೂ ದಲಿತರ ಸಾಗುವಳಿ ಭೂಮಿಯನ್ನು ತೆರವುಗೊಳಿಸುವ ಹುನ್ನಾರ ನಡೆದಿದ್ದು, ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆ ಮತ್ತು ಪೊಲೀಸರು ಗ್ರಾಮದಲ್ಲಿ ಶಾಂತಿ ಸಭೆ ಕರೆದರು. ಈ ಸಭೆಗೆ ಮೇಲ್ಜಾತಿಯವರು ಆಗಮಿಸದೆ ತಾಲ್ಲೂಕು ಆಡಳಿತಕ್ಕೆ ಸವಾಲು ಹಾಕಿದ್ದರು.

ಮುಖ್ಯಮಂತ್ರಿಗಳಾಗಿರುವ ಬಿ.ಎಸ್ ಯಡಿಯೂರಪ್ಪನವ ಸ್ವಕ್ಷೇತ್ರದಲ್ಲೆ ಅಸ್ಪೃಶ್ಯತೆ ಆಚರಣೆ ಜೀವಂತವಾಗಿರುವುದು, ಜಾತಿಯೇತೆಯ ದ್ವೇಷದಿಂದ ಪದೇ ಪದೇ ಇಂತಹ‌ಘಟನೆಗಳು ಮರುಕಳುಹಿಸುತ್ತಲೆ ಇರುವುದು ಜಿಲ್ಲಾಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿ ಆಗಿದೆ.

Join Whatsapp