ರಾಜ್ಯ ಸರ್ಕಾರದ ಅಪಘಾತ ಸಂತ್ರಸ್ತರ ಯೋಜನೆ: ಇಲ್ಲಿಯವರೆಗೆ ತುರ್ತು ಚಿಕಿತ್ಸೆ ಪಡೆದವರೆಷ್ಟು?

Prasthutha|

ಬೆಂಗಳೂರು: ರಾಜ್ಯ ಸರ್ಕಾರದ ಅಪಘಾತ ಸಂತ್ರಸ್ತರ ಯೋಜನೆಯಡಿ ಇಲ್ಲಿಯವರೆಗೆ 550 ಜನ ಗಾಯಾಳುಗಳು ಚಿಕಿತ್ಸೆ ಪಡೆದಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಆಕ್ಸಿಡೆಂಟ್‌ ಝೋನ್‌ನಲ್ಲಿ ಬರುವ ಖಾಸಗಿ ಆಸ್ಪತ್ರೆಯಲ್ಲಿ ಈ ಯೋಜನೆ ಅಡಿ ತುರ್ತು ಚಿಕಿತ್ಸೆ ಪಡೆಯಬಹುದಾಗಿದೆ. ಅಪಘಾತದ ಗೋಲ್ಡನ್‌ ಅವರ್‌ನಲ್ಲಿ ಮತ್ತು 48 ಗಂಟೆಗಳವರೆಗೆ ಗಾಯಾಳುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.

- Advertisement -

ಅಪಘಾತ ಸಂತ್ರಸ್ತರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಕಳೆದ ವರ್ಷ ಏಪ್ರಿಲ್ 8 ರಂದು ಮುಖ್ಯಮಂತ್ರಿ ಸಾಂತ್ವನ ಹರೀಶ್​ ಯೋಜನೆ (MSHY) ಅನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ ರಸ್ತೆ ಅಪಘಾತದ ಸಂತ್ರಸ್ತರಿಗೆ ತುರ್ತಾಗಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಎಪಿಎಲ್​, ಬಿಪಿಎಲ್​ ಎನ್ನದೇ ರಸ್ತೆ ಅಪಘಾತದಲ್ಲಿ ಗಾಯಗೊಂಡ ಎಲ್ಲ ಸಂತ್ರಸ್ತರು ಈ ಯೋಜನೆಯಡಿ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ. ಈ ಯೋಜನೆ ಅಡಿ ಖಾಸಗಿ ಆಸ್ಪತ್ರೆಯವರು ಚಿಕಿತ್ಸೆ ನೀಡಿದರೆ 1 ಲಕ್ಷದವರೆಗೆ ಕ್ಲೈಮ್‌ ಮಾಡಬಹುದು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಪಘಾತ ವಲಯಗಳಲ್ಲಿನ ಖಾಸಗಿ ಆಸ್ಪತ್ರೆಗಳನ್ನು ಈ ಯೋಜನೆಯಡಿ ಸೇರಿಸಲಾಗುವುದು. ಇದರಿಂದ ಅಪಘಾತ ಸಂತ್ರಸ್ತರಿಗೆ ತುರ್ತು ಚಿಕಿತ್ಸೆ ದೊರೆಯುತ್ತದೆ. ಈ ಮೂಲಕ ಅಪಘಾತ ಸಂತ್ರಸ್ತ ಯೋಜನೆಯನ್ನು ಮತ್ತಷ್ಟು ಜನರು ಲಾಭ ಪಡೆಯುವರು. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಡಿ ಬರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ.

- Advertisement -

ಇಲ್ಲಿಯವರೆಗೆ 550 ಗಾಯಾಳುಗಳಿಗೆ ಚಿಕಿತ್ಸೆ ನೀಡಿದ 25 ಆಸ್ಪತ್ರೆಗಳಿಗೆ 91.5 ಲಕ್ಷ ರೂ. ಮರುಪಾವತಿ ಮಾಡಲಾಗಿದೆ ಚಿಕಿತ್ಸೆ ಪಡೆದ 550 ಪ್ರಕರಣಗಳಲ್ಲಿ ಸುಮಾರು 200 ಗಂಭೀರ ಪ್ರಕರಣವಾಗಿದ್ದವು. ಇವರಿಗೆ ಈ ಯೋಜನೆ ಅಡಿ ಗೋಲ್ಡನ್​ ಅವರ್​ನಲ್ಲಿ ತುರ್ತು ಚಿಕಿತ್ಸೆ ನೀಡುವ ಮೂಲಕ ಅವರ ಜೀವವನ್ನು ಉಳಿಸಲಾಯಿತು. ಸದ್ಯಕ್ಕೆ ರಾಜ್ಯದ 2955 ಸರ್ಕಾರಿ ಮತ್ತು 515 ಖಾಸಗಿ ಆಸ್ಪತ್ರೆಗಳನ್ನು ಈ ಯೋಜನೆಗೆ ಸೇರಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ರಂದೀಪ್​ ಡಿ ಹೇಳಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಪಘಾತ ವಲಯಗಳನ್ನು ಪಟ್ಟಿ ಮಾಡಿ ಅದರ ವ್ಯಾಪ್ತಿಗೆ ಒಳಪಡುವ ಖಾಸಗಿ ಆಸ್ಪತ್ರೆಗಳನ್ನು ಈ ಯೋಜನೆಯಡಿ ಸೇರಿಸಲಾಗಿದೆ. ಈ ಬಗ್ಗೆ ಖಾಸಗಿ ಆಸ್ಪತ್ರೆಗಳಿಗೂ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದರು.

Join Whatsapp