ವಿಮ್ಸ್ ಆಸ್ಪತ್ರೆಯಲ್ಲಿ ಮೂವರು ರೋಗಿಗಳು ಸಾವು: 25 ಲಕ್ಷ ರೂ. ಪರಿಹಾರ ನೀಡಲು ಸಿದ್ದರಾಮಯ್ಯ ಒತ್ತಾಯ

Prasthutha|

ಬೆಂಗಳೂರು: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆಯ ಸಮಸ್ಯೆಯಿಂದಾಗಿ ಮೂವರು ರೋಗಿಗಳು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಆರೋಗ್ಯ ಇಲಾಖೆಯು ಮೂವರು ರೋಗಿಗಳ ಸಾವಿನ ಹೊಣೆ ಹೊತ್ತು ಘಟನೆಗೆ ಕಾರಣರಾದ ಎಲ್ಲಾ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ದುರ್ದೈವಿಗಳ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

- Advertisement -

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಬಳ್ಳಾರಿಯ ವಿಜಯನಗರ ಮೆಡಿಕಲ್ ಕಾಲೇಜಿನಲ್ಲಿ ನಿನ್ನೆ ಬೆಳಗ್ಗೆ 8 -10 ಗಂಟೆವರೆಗೆ ವಿದ್ಯುತ್ ಇರಲಿಲ್ಲ, ಇದೇ ಸಮಯದಲ್ಲಿ ಜನರೇಟರ್ ಕೂಡ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ರೋಗಿಗಳು ವೆಂಟಿಲೇಟರ್ ಮೂಲಕ ಆಮ್ಲಜನಕ ಪೂರೈಕೆಯಾಗದೆ ಸಾವನ್ನಪ್ಪಿದ್ದಾರೆ ಎಂದರು.

ಈ ಘಟನೆಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೇ ನೇರ ಹೊಣೆ. ಜನರೇಟರ್ ಹಾಳಾಗಿರುವುದು ಗೊತ್ತಿದ್ದೂ ಜಿಲ್ಲಾಧಿಕಾರಿಗಳು ಬದಲಿ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ತೋರಿದ್ದರಿಂದ ಮೂವರು ಅಮಾಯಕರು ಬಲಿಯಾಗಿದ್ದಾರೆ. ಘಟನೆಗೆ ಕಾರಣರಾದ ವೈದ್ಯಕೀಯ ಕಾಲೇಜಿನ ನಿರ್ದೇಶಕರು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ಏನಿದರ ಅರ್ಥ ಎಂದು ಪ್ರಶ್ನಿಸಿದರು.

- Advertisement -

ರಾಜ್ಯ ಸರ್ಕಾರ ಇದರ ಹೊಣೆ ಹೊರಬೇಕು. ವೈದ್ಯಕೀಯ ಕಾಲೇಜಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಆದಾಗ ಬದಲಿ ವ್ಯವಸ್ಥೆ ಇಲ್ಲವೆಂದರೆ ಹೇಗೆ? ವರ್ಷಪೂರ್ತಿ ವಿದ್ಯುತ್ ಅನ್ನೇ ನಂಬಿಕೊಂಡು ಚಿಕಿತ್ಸೆ ಕೊಡಲು ಆಗುತ್ತಾ? ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಈ ವಿಚಾರ ಬಂದಿದೆಯೋ ಇಲ್ವೋ ನನಗೆ ಗೊತ್ತಿಲ್ಲ. ಜನರೇಟರ್ ಅನ್ನು ಸುಸ್ಥಿತಿಯಲ್ಲಿಡುವುದು ವೈದ್ಯಕೀಯ ಕಾಲೇಜಿನ ಜವಾಬ್ದಾರಿ. ಜನರೇಟರ್ ಹಾಳಾಗಿದ್ದರೆ ಬೇರೆ ಖರೀದಿ ಮಾಡೋಕೆ ಜಿಲ್ಲಾಧಿಕಾರಿಗಳ ಬಳಿ ಅನುದಾನ ಇರುತ್ತದೆ ಎಂದ ಸಿದ್ದರಾಮಯ್ಯ, ಅನುಮತಿ ಕೊಡೋಕೆ ಅಸಿಸ್ಟೆಂಟ್ ಕಮಿಷನರ್ ನೇತೃತ್ವದ ಸಮಿತಿ ಇರುತ್ತೆ. ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಮೃತರ ಸಂಬಂಧಿಕರು ನೋವಿನಿಂದ ಗೋಳಾಡುತ್ತಿದ್ದಾರೆ. ಇವು ಸಹಜವಾದ ಅಥವಾ ರೋಗದಿಂದ ಉಂಟಾದ ಸಾವುಗಳಲ್ಲ. ಆಡಳಿತ ವ್ಯವಸ್ಥೆಯ ತಪ್ಪಿನಿಂದ ಇವರು ಸತ್ತಿರುವುದು. ಹಾಗಾಗಿ ಮೃತರ ಕುಟುಂಬಕ್ಕೆ ಸರ್ಕಾರ ನೆರವಿಗೆ ನಿಲ್ಲಲೇಬೇಕು. ಆರೋಗ್ಯ ಇಲಾಖೆಯು ಮೂವರು ರೋಗಿಗಳ ಸಾವಿನ ಹೊಣೆಹೊತ್ತು ಘಟನೆಗೆ ಕಾರಣರಾದ ಎಲ್ಲಾ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ದುರ್ದೈವಿಗಳ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

Join Whatsapp