ಕಾಂಗ್ರೆಸ್ ಪಕ್ಷದ್ದು ಗ್ಯಾರಂಟಿ ಕಾರ್ಡ್ ಅಲ್ಲ ಡೂಪ್ಲಿಕೇಟ್ ಕಾರ್ಡ್: ಎಚ್.ಡಿ.ಕುಮಾರಸ್ವಾಮಿ ಟೀಕೆ

Prasthutha|

ಮೈಸೂರು: ಜನರಿಗೆ ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿ ಕಾರ್ಡ್ ಬಗ್ಗೆ ಟಾಂಗ್ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಅದು ಗ್ಯಾರಂಟಿ ಕಾರ್ಡ್ ಅಲ್ಲ ಡೂಪ್ಲಿಕೇಟ್ ಕಾರ್ಡ್ ಎಂದು ವ್ಯಂಗ್ಯವಾಡಿದರು.

- Advertisement -


ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ಆ ಗ್ಯಾರಂಟಿ ಕಾರ್ಡ್ ಗಳಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಹಿ ಬೇರೆ ಹಾಕಿದ್ದಾರೆ. ಅವರ ಈ ಎಲ್ಲಾ ಯೋಜನೆಗಳಿಗೆ 25 ಸಾವಿರ ಕೋಟಿ ಬೇಕು. ಆ ಹಣವನ್ನು ಎಲ್ಲಿಂದ ಹೊಂದಿಸುತ್ತಾರೆ ಎಂದು ಪ್ರಶ್ನಿಸಿದರು.
ಪಂಚರತ್ನ ಯೋಜನೆ ಜಾರಿಗೆ 2.50 ಲಕ್ಷ ಕೋಟಿ ರೂ. ಹಣ ಬೇಕು. ಈ ಹಣ ಹೊಂದಿಸುವುದು ನನಗೆ ಕಷ್ಟವಿಲ್ಲ. ಸಾಲ ಮನ್ನಾಕ್ಕೆ 25 ಸಾವಿರ ಕೋಟಿ ರೂ. ಹೊಂದಿಸಿದ ದಾಖಲೆ ನನ್ನದು. ನನ್ನ ಗುರಿ, ಕನಸು ಸಾಕಾರಗೊಳಿಸಲು ಅವಕಾಶ ಇದೆ. ಆದರೆ, ಕಾಂಗ್ರೆಸ್ ಗ್ಯಾರಂಟಿ ಹಾಗಿಲ್ಲ, ಅವರು ಅಧಿಕಾರಕ್ಕೆ ಬರುವ ಗ್ಯಾರಂಟಿಯೇ ಇಲ್ಲ. ಆದರೂ ಕಾಂಗ್ರೆಸ್ ನಾಯಕರು ನಾಲ್ಕನೇ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತಿನ ಯುದ್ಧ ನಡೆಯುತ್ತಿದೆ. ಅವರಲ್ಲಿ ಅಭಿವೃದ್ಧಿ ವಿಷಯ ಇಲ್ಲ. ಪರಸ್ಪರ ಟೀಕೆ ಮಾಡಿಕೊಳ್ಳುವುದರಲ್ಲಿಯೇ ಅವರು ಕಾಲ ವೃಥಾ ಮಾಡುತ್ತಿದ್ದಾರೆ. ಇದಕ್ಕೆ ಹೊರತಾಗಿ ಅಭಿವೃದ್ಧಿ ವಿಷಯ ಇಟ್ಟುಕೊಂಡು ನಾವು ಜನರ ಬಳಿಗೆ ಹೋಗುತ್ತಿದ್ದೇವೆ. ನಾನು ದಿನಕ್ಕೆ 100 ಕಿ.ಮೀ. ಪ್ರವಾಸ ಮಾಡುತ್ತಿದ್ದೇನೆ. ನನ್ನ ಯೋಜನೆ, ಕಾರ್ಯಕ್ರಮಗಳಿಗೆ ಒಂದು ಅವಕಾಶ ಕೊಡಿ ಅಂತ ಜನರನ್ನು ಕೇಳುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.


ಬಹುಮತದ ಸರಕಾರ ಬಾರದೆ ಇದ್ದರೂ ನಾನು ಎರಡು ಸಲ ಮುಖ್ಯಮಂತ್ರಿಯಾದೆ. 37 ಶಾಸಕರನ್ನು ಇಟ್ಟುಕೊಂಡು ಕಾಂಗ್ರೆಸ್ ಭಾಗ್ಯಗಳನ್ನು ಮುಂದುವರಿಸಿದೆ. ಇದರ ನಡುವೆಯೂ ಸಾಲ ಮನ್ನಾ ಮಾಡಿದೆ ಎಂದು ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆಗೆ ಫಲಾನುಭವಿಗಳನ್ನು ಕರೆದುಕೊಂಡು ಬರುತ್ತಿದ್ದಾರೆ. ಸರಕಾರಿ ಅಧಿಕಾರಿಗಳ ಮೂಲಕ ಜನರನ್ನು ಸಭೆಗಳಿಗೆ ಕರೆಸುತ್ತಿದ್ದಾರೆ. ಬಿಜೆಪಿಯವರು ಈಗಲೂ ರೈತರ ಸಾಲ ಮನ್ನಾ ಯೋಜನೆಗೆ 1800 ಕೋಟಿ ರೂ. ಕೊಟ್ಟಿಲ್ಲ. ಬದಲಿಗೆ ಸುಳ್ಳು ಭರವಸೆಗಳನ್ನು ಕೊಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಅದು ಗ್ಯಾರಂಟಿ ಕಾರ್ಡ್ ಅಲ್ಲ, ಡ್ಯುಪ್ಲಿಕೇಟ್ ಕಾರ್ಡ್. ಗೃಹ ಲಕ್ಷ್ಮಿ ಕಾರ್ಡ್‌ಗೆ 25 ಸಾವಿರ ಕೋಟಿ ರೂ. ಬೇಕು.
ಆದರೆ ನನ್ನ ಕಾರ್ಯಕ್ರಮ ಸರ್ಕಾರದ ಆದಾಯ ಹೆಚ್ಚಿಸುವ ಕಾರ್ಯಕ್ರಮ. ಒಂದು ಅವಧಿಯ ಸರಕಾರ ಕೊಡಿ ಅಂತ ಕೇಳುತ್ತಿದ್ದೇನೆ ಎಂದು ಅವರು ತಿಳಿಸಿದರು.

- Advertisement -

ಸರ್ಕಾರದ ಆಸ್ತಿಯನ್ನ ದ್ವಿಗುಣ ಮಾಡುವ ಯೋಜನೆ ನಮ್ಮದಾಗಿದೆ. ಗ್ಯಾರೆಂಟಿ ಕಾರ್ಡ್ ಬಗ್ಗೆ ಸುರ್ಜೆವಾಲ ಬಿಜೆಪಿ ಪಡೆಯುವ 40% ಹಣವನ್ನ ಹಾಕುತ್ತೇವೆ ಎನ್ನುತ್ತಾರೆ. 5 ವರ್ಷದ ಆಡಳಿತಕ್ಕೆ ನಮ್ಮ ಪಕ್ಷಕ್ಕೆ ಅವಕಾಶ ನೀಡಿ ಎಂದು ಕೇಳಿಕೊಳ್ಳುತ್ತೇನೆ. ಬಿಜೆಪಿ, ಕಾಂಗ್ರೆಸ್ ನವರು ಹೇಳುತ್ತಿರುವ ಅಂತೇ ಕಂತೆಗಳು ಮೇ ನಂತರ ಗೊತ್ತಾಗಲಿದೆ ಎಂದರು ಅವರು.


ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟದ ಬಗ್ಗೆ ಅನುಕಂಪ ಇದೆ:
ಪೂರ್ಣಾವಧಿ ಮುಖ್ಯಮಂತ್ರಿ ಆಗಿದ್ದವರು, ಉಪ ಮುಖ್ಯಮಂತ್ರಿ ಆಗಿದ್ದವರು, 13 ಬಜೆಟ್ ಮಂಡಿಸಿದವರು ಅವರು. ಅಂತಹವರಿಗೆ ಒಂದು ಸುರಕ್ಷಿತ ಕ್ಷೇತ್ರ ಹುಡುಕಿಕೊಳ್ಳಲು ಆಗುತ್ತಿಲ್ಲ. ಇದರ ಬಗ್ಗೆ ನಾನು ವ್ಯಂಗ್ಯ ಮಾಡಲ್ಲ, ಬದಲಿಗೆ ಅನುಕಂಪ ಬರುತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕೋಲಾರ ಕ್ಷೇತ್ರವೂ ಸೇರಿ ಜಿಲ್ಲೆಯಲ್ಲಿ 6 ಸ್ಥಾನಗಳ ಪೈಕಿ ಕಡೆ ನಾವು ಮುಂದೆ ಇದ್ದೇವೆ. ಅಲ್ಲೆಲ್ಲಾ ನಮ್ಮ ಅಭ್ಯರ್ಥಿಗಳು ಗೆದ್ದೆ ಗೆಲ್ಲುತ್ತಾರೆ. ಹೈ ಕಮಾಂಡ್ ಹೆಸರೇಳಿ ಸ್ಪರ್ಧೆಯಿಂದ ಸಿದ್ದರಾಮಯ್ಯ ಹಿಂದೆ ಸರಿದಿರಬಹುದು. ಆದರೆ 5 ವರ್ಷದ ಸಂಪೂರ್ಣ ಅವಧಿ ಮುಗಿಸಿರುವ ಸಿಎಂ ಕಳೆದ ಒಂದು ವರ್ಷದಿಂದ ಸ್ಪರ್ಧೆಯ ಬಗ್ಗೆ ಕ್ಷೇತ್ರ ಹುಡುಕಾಡುತ್ತಿದ್ದಾರೆ. ಇದನ್ನು ನೋಡಿ ನನಗೆ ಅನುಕಂಪ ಬರುತ್ತಿದೆ. ಅನುಭವಿ ರಾಜಕಾರಣಿ, ನಾಯಕನಿಗೆ ಆತಂಕವನ್ನು ಅವರೇ ಸೃಷ್ಟಿ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿ ಬೇಕಿತ್ತಾ? ಎಂದು ಅವರು ಪ್ರಶ್ನಿಸಿದರು.


ದೇವೇಗೌಡರು ಚೆನ್ನಾಗಿದ್ದಾರೆ:
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಆರೋಗ್ಯ ಚೆನ್ನಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು; ನಮ್ಮ ತಂದೆ ಅವರ ಆರೋಗ್ಯದ ಬಗ್ಗೆ, ಜನರ ಸಂಕಷ್ಟದ ಬಗ್ಗೆ ನಾನು ಕಣ್ಣೀರು ಹಾಕಿರುವುದು ಹೌದು. ಮನುಷ್ಯತ್ವ ಇರುವವರಿಗೆ ಕಣ್ಣೀರು ಬರುತ್ತದೆ. ಕಟುಕರಿಗೆ ಕಣ್ಣೀರು ಬರುವುದಿಲ್ಲ. ಕಣ್ಣೀರು ದೌರ್ಬಲ್ಯ ಅಲ್ಲ, ಅದು ನನ್ನ ಕಣ್ಣೀರು ಮನದಾಳದಿಂದ ಬಂದಿದೆ ಎಂದರು.
ಉರಿಗೌಡ ನಂಜೇಗೌಡ ಚರ್ಚೆ ವಿಚಾರ ಬಿಜೆಪಿ ನಾಯಕರಿಗೆ ತಿರುಗುಬಾಣವಾಗಿದೆ. ಹುಡುಗಾಟಿಕೆ ಆಡುತ್ತಿದ್ದವರಿಗೆ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರು ಬುದ್ದಿ ಹೇಳಿದ್ದಾರೆ. ಇದಕ್ಕಾಗಿ ನಾನು ಶ್ರೀಗಳನ್ನು ಅಭಿನಂದಿಸುತ್ತೇನೆ. ಈ ಬಗ್ಗೆ ನಾನು ಸಹಾ ಏನು ಮಾತನಾಡುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

Join Whatsapp