ತನ್ನನ್ನು ಬೆಂಬಲಿಸಿದ ಪಾಕ್ ಮಾಜಿ ಸಚಿವ ವಿರುದ್ಧ ಕೇಜ್ರಿವಾಲ್ ಗರಂ

Prasthutha|

ನವದೆಹಲಿ: ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ವಿರುದ್ಧ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ವಾಗ್ದಾಳಿ ನಡೆಸಿದ್ದಾರೆ.‌ ನೀವು ನಿಮ್ಮ ದೇಶದ ಸಮಸ್ಯೆಗಳನ್ನು ನೋಡಿಕೊಳ್ಳಿ, ಭಾರತದ ಸಮಸ್ಯೆ ನಾವು ನೋಡಿಕೊಳ್ಳುತ್ತೇವೆ ಎಂದು ಪಾಕ್​​​​​​​​​​​​​​​​ ಮಾಜಿ ಸಚಿವನಿಗೆ ಕೇಜ್ರಿವಾಲ್​ ತಿರುಗೇಟು ನೀಡಿದ್ದಾರೆ.

- Advertisement -

ಇಂದು ತಮ್ಮ ಕುಟುಂಬ ವೋಟ್​ ಮಾಡಿದ ಬಳಿಕ ಕೇಜ್ರಿವಾಲ್ ಫೋಟೋವನ್ನು ಪೋಸ್ಟ್ ಮಾಡಿದ್ದರು. ನಾನು ಇಂದು ನನ್ನ ತಂದೆ, ಹೆಂಡತಿ ಮತ್ತು ಮಕ್ಕಳೊಂದಿಗೆ ಮತ ಚಲಾಯಿಸಿದ್ದೇನೆ. ನಾನು ಸರ್ವಾಧಿಕಾರ, ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧ ಮತ ಹಾಕಿದ್ದೇನೆ. ನೀವೂ ಹೋಗಿ ಮತ ಹಾಕಿ ಎಂದು ಕೇಜ್ರಿವಾಲ್ ಕರೆ ನೀಡಿದ್ದರು. ಕೇಜ್ರಿವಾಲ್​ ಅವರ ಪೋಸ್ಟ್​​ಗೆ ಪ್ರತಿಕ್ರಿಯಿಸಿದ ಫವಾದ್ ಹುಸೇನ್, ಶಾಂತಿ ಮತ್ತು ಸಾಮರಸ್ಯವು ದ್ವೇಷ ಮತ್ತು ಉಗ್ರವಾದದ ಶಕ್ತಿಗಳನ್ನು ಸೋಲಿಸಲಿ ಎಂದು ಪೋಸ್ಟ್​ ಮಾಡಿದ್ದರು. ಇದು ಕೇಜ್ರಿವಾಲ್‌ರನ್ನು ಕೆರಳಿಸಿದೆ.

ಚೌಧರಿ ಸಾಹಿಬ್, ನಾನು ಮತ್ತು ನನ್ನ ದೇಶದ ಜನರು ನಮ್ಮ ಸಮಸ್ಯೆಗಳನ್ನು ನಿಭಾಯಿಸಲು ಸಂಪೂರ್ಣವಾಗಿ ಸಮರ್ಥರಾಗಿದ್ದೇವೆ. ನಿಮ್ಮ ಟ್ವೀಟ್ ಅಗತ್ಯವಿಲ್ಲ. ಈಗ ಪಾಕಿಸ್ತಾನದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನೀವು ನಿಮ್ಮ ದೇಶವನ್ನು ನೋಡಿಕೊಳ್ಳಿ ಎಂದು ಕೇಜ್ರಿವಾಲ್ ಎಕ್ಸ್​ ಪೋಸ್ಟ್​ ಮೂಲಕ ತಿರುಗೇಟು ನೀಡಿದರು. ಭಾರತದಲ್ಲಿ ನಡೆಯುತ್ತಿರುವ ಚುನಾವಣೆಗಳು ನಮ್ಮ ಆಂತರಿಕ ವಿಷಯ. ಭಯೋತ್ಪಾದನೆಯ ದೊಡ್ಡ ಪ್ರಾಯೋಜಕರ ಹಸ್ತಕ್ಷೇಪವನ್ನು ಭಾರತ ಸಹಿಸುವುದಿಲ್ಲ ಎಂದು ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.

- Advertisement -

ಇದಕ್ಕೂ ಮೊದಲು ಬಿಜೆಪಿ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನದ ರಾಜಕಾರಣಿಗಳು ಭಾರತೀಯ ರಾಜಕಾರಣಿಯನ್ನು ಬೆಂಬಲಿಸುವುದನ್ನು ನೋಡುವುದು ಆಘಾತಕಾರಿಯಾಗಿದೆ ಎಂದಿದೆ. ಶಾಕಿಂಗ್! ಪಾಕಿಸ್ತಾನ ಏಕೆ ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತಿದೆ ಮತ್ತು ಅವರಿಗೆ ಹೆಚ್ಚಿನ ಅಧಿಕಾರವನ್ನು ಬಯಸುತ್ತಿದೆ? ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

Join Whatsapp