ನಾನೊಬ್ಬ ಮಾತಾಡುವಾಗ ಬಿಜೆಪಿಯ 20 ಜನ ಮಾತಾಡ್ತಾರೆ, ನಮ್ಮವರು ಯಾರೂ ಮಾತಾಡಲ್ಲ: ಸಿದ್ದರಾಮಯ್ಯ

Prasthutha|

ಕೇಂದ್ರದಲ್ಲಿ 60 ಲಕ್ಷ, ರಾಜ್ಯದಲ್ಲಿ 2.59 ಲಕ್ಷ ಸರ್ಕಾರಿ ಉದ್ಯೋಗ ಖಾಲಿ

- Advertisement -

ಅಡುಗೆ ಮಾಡುವ ಬ್ರಾಹ್ಮಣನಿಗೆ ಸಿಗುವ ಗೌರವ ವಿದ್ಯಾವಂತ ದಲಿತನಿಗೆ ಸಿಗುತ್ತಿಲ್ಲ

ಬೆಂಗಳೂರು: ಕೇಂದ್ರ ಸರ್ಕಾರದ 60 ಲಕ್ಷ ಹುದ್ದೆಗಳ ಖಾಲಿ ಇದ್ದು, ಕರ್ನಾಟಕ ಒಂದರಲ್ಲೇ 2 ಲಕ್ಷ 59 ಸಾವಿರ ಹುದ್ದೆಗಳು ಖಾಲಿ ಇವೆ. 72 ವರ್ಷ ಆದರೂ ಈ ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ಸಿಗುತ್ತಿಲ್ಲ. ಕೂಡಲೇ ಸೂಕ್ತ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸುವ ಕೆಲಸ ಆಗಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರು 17.1% ಇದ್ದಾರೆ, ಪರಿಶಿಷ್ಟ ವರ್ಗದವರು 7% ಇದ್ದಾರೆ. ಅಂದರೆ ಮೀಸಲಾತಿ ಪ್ರಮಾಣ 24.1% ಆಗಬೇಕಲ್ಲವೆ. ನಮಗಿನ್ನೂ ಗುಲಾಮಗಿರಿ ಮನಸ್ಥಿತಿಯೇ ಹೋಗಿಲ್ಲ. ಅಡುಗೆ ಮಾಡುವ ಒಬ್ಬ ಬ್ರಾಹ್ಮಣನಿಗೆ ನೀಡುವ ಗೌರವವನ್ನು ವಿದ್ಯಾವಂತ, ಶ್ರೀಮಂತ ದಲಿತನಿಗೆ ನೀಡಲ್ಲ. ಒಬ್ಬರಿಗೆ ನಮಸ್ಕಾರ ಸ್ವಾಮಿ ಎನ್ನುತ್ತೇವೆ, ಇನ್ನೊಬ್ಬರಿಗೆ ಏಕ ವಚನದಲ್ಲಿ ಮಾತನಾಡಿಸುತ್ತೇವೆ ಎಂದು ವಿಷಾದಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ್ ಬರೆದಿರುವ ಮೀಸಲಾತಿ “ಭ್ರಮೆ ಮತ್ತು ವಾಸ್ತವ” ಕೃತಿ ಬಿಡುಗಡೆಗೊಳಿಸಿ, ಮಾತನಾಡಿದ ಅವರು, ನಾಗಮೋಹನ್ ದಾಸ್ ನ್ಯಾಯಮೂರ್ತಿಯಾಗಿದ್ದು, ಸಂವಿಧಾನದ ಬಗ್ಗೆ ಹೆಚ್ಚು ಓದಿಕೊಂಡು, ಜ್ಞಾನ ಹೊಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಂವಿಧಾನ ಓದು ಎಂಬ ಕಿರುಹೊತ್ತಿಗೆಯನ್ನು ಬರೆದಿದ್ದರು. ನಾನೂ ಅದನ್ನು ಓದಿದ್ದೇನೆ. ದೇಶದ ಪ್ರತಿಯೊಬ್ಬ ಪ್ರಜೆ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಇದನ್ನು ಒಂದು ಪುಸ್ತಕವಾಗಿ ಮಾತ್ರವಲ್ಲ ಒಂದು ಅಭಿಯಾನವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಆ ಸಂದರ್ಭದಲ್ಲಿ ಮೀಸಲಾತಿ ಬಗ್ಗೆ ಬಹಳಷ್ಟು ಪ್ರಶ್ನೆಗಳು ಬರುತ್ತಿದ್ದವು ಎಂಬುದನ್ನು ಅವರು ಹೇಳಿದರು. ಇದರ ಅರ್ಥ ಮೀಸಲಾತಿ ಯಾಕೆ ಹುಟ್ಟಿತು, ಅದರ ಉದ್ದೇಶ ಮತ್ತು ಅನಿವಾರ್ಯತೆ ಬಗ್ಗೆ ಜನರಿಗೆ ಮಾಹಿತಿ ಕೊರತೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ನಾವು ಉತ್ತರ ನೀಡಿದರೂ ಕೆಲವರು ಮೀಸಲಾತಿಯನ್ನು ವಿಕೃತವಾಗಿ ನೋಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಸಮಾಜ ಜಾತಿ ವ್ಯವಸ್ಥೆ ಕಾರಣಕ್ಕಾಗಿ ಅಸಮಾನತೆ ಇಂದ ಕೂಡಿದೆ. ಇದು ಅವಕಾಶ ವಂಚಿತ ಜನರಿಂದ ಆದದ್ದಲ್ಲ. ಈ ಅಸಮಾನತೆ ಉಂಟಾಗಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಾರಣ. ಇವರು ತಮ್ಮ ಸ್ವಾರ್ಥಕ್ಕಾಗಿ ಸಮಾಜದಲ್ಲಿ ಜಾತಿ ವ್ಯವಸ್ಥೆ ಗಟ್ಟಿಗೊಳಿಸಿ, ರಾಜಕೀಯ, ಆರ್ಥಿಕ ಅಸಮಾನತೆ ಸೃಷ್ಟಿಸಿದ್ದಾರೆ. ಚತುರ್ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣರು, ಕ್ಷತ್ರಿಯರು ಹಾಗೂ ವೈಶ್ಯರಿಗೆ ಓದಲು, ಸಂಪತ್ತನ್ನು ಅನುಭವಿಸಲು, ಅಧಿಕಾರ ನಡೆಸಲು ಅವಕಾಶ ಇತ್ತು. ಇದು ಮೀಸಲಾತಿ ಅಲ್ಲವೇ? ಬಹುಸಂಖ್ಯಾತ ಶೂದ್ರರನ್ನು ಅಕ್ಷರ ಸಂಸ್ಕೃತಿಯಿಂದ ವಂಚಿಸಿ, ಅವರೇ ಉತ್ಪಾದನೆ ಮಾಡಿದ ಸಂಪತ್ತನ್ನು ಅನುಭವಿಸಲು ಅವಕಾಶ ನೀಡದೆ ಇದ್ದದ್ದು ಅನ್ಯಾಯ ಅಲ್ಲವೇ? ಎಂದು ಪ್ರಶ್ನಿಸಿದರು.

ಇದೇ ಕಾರಣಕ್ಕೆ ಬಸವಾದಿ ಶರಣರು ಕಾಯಕ ದಾಸೋಹ ತತ್ವವನ್ನು ಸಾರಿದರು. ಶೂದ್ರ ಜನರಿಗೆ ಕೊಳಕು ಕೆಲಸಗಳನ್ನು ಮಾತ್ರ ಬಿಟ್ಟು, ಸಂಪತ್ತನ್ನು ಅನುಭವಿಸಿದವರು ಯಾರು? ಕೆಲಸ ಮಾಡುವವರು ಯಾರೋ ಆದರೆ ಬಂದ ಸಂಪತ್ತನ್ನು ಅನುಭವಿಸುತ್ತಾ ಕುಳಿತವರು ಯಾರೋ? ಇದು ಅಲಿಖಿತ ಮೀಸಲಾತಿ, ಇದನ್ನು ಮಾಡಿದ್ದು ಯಾರು? ಇಂದು ಅವರೇ ಮೀಸಲಾತಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಮೀಸಲಾತಿ ಎಷ್ಟು ವರ್ಷ ಬೇಕು? ಯಾಕಿರಬೇಕು? ಇದರಿಂದ ಪ್ರತಿಭೆ ಹಾಳಾಗಲ್ವಾ? ಹೀಗೆಲ್ಲಾ ಕೇಳುತ್ತಿರುವವರು ಸಮಾಜದಲ್ಲಿ ಅಸಮಾನತೆ ನಿರ್ಮಾಣ ಮಾಡಲು ಕಾರಣಕರ್ತರಾದವರೇ. ಕೆನೆಪದರ ಎಲ್ಲರಿಗೂ ಏಕೆ ಇಲ್ಲ? ಎಂದು ಪ್ರಶ್ನಿಸುತ್ತಾರೆ.

ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಬಿ. ರಾಚಯ್ಯನವರು ಶಿಕ್ಷಣ ಸಚಿವರಾಗಿದ್ದರು. ಆಗ ರಾಚಯ್ಯನವರು ರಾಮಕೃಷ್ಣ ಹೆಗ್ಡೆಯವರನ್ನು ನೀವು ಮಹಾನ್ ಮೇಧಾವಿಗಳು ಎಂದು ಹೊಗಳಿದ್ರು, ಆಗ ಜೆ.ಹೆಚ್ ಪಟೇಲರು ಎದ್ದು ನಿಂತು ʼ ಅವರು ಚತುರರಾಗಿರಲೇಬೇಕು ಕಾರಣ ಅವರಿಗೆ 5000 ವರ್ಷಗಳ ಇತಿಹಾಸ ಇದೆ, ನನಗೆ ಬಸವಣ್ಣ ಬಂದ ಮೇಲಿನ 800 ವರ್ಷಗಳ ಇತಿಹಾಸ ಇದೆ, ನಿಮಗೆ ಸಂವಿಧಾನ ಬಂದ ಮೇಲೆ ಇತಿಹಾಸ ಆರಂಭವಾದುದ್ದು ಎಂದರು. ಇದು ರಾಚಯ್ಯನವರಿಗೆ ಅರ್ಥವಾಗದೆ ಸುಮ್ಮನಾದರು.
ಶಿಕ್ಷಣ, ಅಧಿಕಾರ ಮತ್ತು ಸಂಪತ್ತು ಯಾವುದೇ ಜನಾಂಗದ ಜಾತಿಯ ಸ್ವತ್ತಲ್ಲ. ಅಂಬೇಡ್ಕರ್ ಅವರು ಓದದೆ ಹೋಗಿದ್ದರೆ ಸಂವಿಧಾನ ರಚನೆ ಮಾಡಲು ಆಗುತ್ತಿತ್ತಾ? ಅಸ್ಪ್ರಶ್ಯ ಜನಾಂಗದಲ್ಲಿ ಹುಟ್ಟಿದ ಅಂಬೇಡ್ಕರ್ ಅವರು ಬುದ್ದಿವಂತಿಕೆಯಲ್ಲಿ ಯಾರಿಗಿಂತಲಾದರೂ ಕಡಿಮೆಯಿರಲಿಲ್ಲ. ಈ ದೇಶದ ಕೆಲವೇ ಮೇಧಾವಿ ರಾಜಕಾರಣಿ, ಬುದ್ದಿವಂತರಲ್ಲಿ ಅಂಬೇಡ್ಕರ್ ಒಬ್ಬರು. ಇಲ್ಲದಿದ್ದರೆ ಇಂಥಾ ಸಂವಿಧಾನ ಸಿಗಲು ಸಾಧ್ಯವಾಗುತ್ತಿತ್ತಾ? ಭಾರತದಲ್ಲಿ 4635 ಜಾತಿಗಳು ಇವೆ ಎಂದು ಪುಸ್ತಕದಲ್ಲಿ ಆಧಾರ ಸಮೇತ ಹೇಳಿದ್ದಾರೆ. ಇದನ್ನು ಹುಟ್ಟುಹಾಕಿದ್ದು ಯಾರಪ್ಪ? ಅವರೇ ಇಂದು ಮೀಸಲಾತಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಚಾರ ಹೇಳಿದರೆ ನನ್ನ ಮೈಮೇಲೆ ಬೀಳುತ್ತಾರೆ. ಸತ್ಯ ಹೇಳೋದು ಕಷ್ಟವಾಗಿದೆ. ಆರ್ಯನ್ನರು ಮಧ್ಯಪ್ರಾಚ್ಯದಿಂದ ಬಂದವರು ಎಂದು ನಾನು ಹೇಳಿದ್ರೆ ಏನ್ರೀ ನಮ್ಮನ್ನೇ ಪ್ರಶ್ನೆ ಮಾಡ್ತೀರ ಎಂದು ಮೈಮೇಲೆ ಬರ್ತಾರೆ. ನಾವೆಲ್ಲ ದ್ರಾವಿಡರು, ನಮ್ಮ ಮೇಲೆ ದೌರ್ಜನ್ಯ ಮಾಡಿದ್ರು ಎಂದು ಹೇಳಿದ್ರೆ ಕೆಲವರಿಗೆ ಕೋಪ ಬರುತ್ತದೆ. ಇದಕ್ಕೆ ನಮ್ಮ ಕಡೆ ಇದ್ದದ್ದನ್ನು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ ಎಂಬ ಗಾದೆ ಮಾತು ಹೇಳುತ್ತಾರೆ ಎಂದು ಹೇಳಿದರು.

ಮೀಸಲಾತಿ ಬಂದು ಕರ್ನಾಟಕದಲ್ಲಿ ನೂರು ವರ್ಷ ಆಗಿದೆ. ಮಹಾರಾಷ್ಟ್ರದಲ್ಲಿ ಸಾಹೋ ಮಹರಾಜ್, ತಮಿಳುನಾಡಿನಲ್ಲಿ ಜಸ್ಟೀಸ್ ಪಾಂಡ್ಯನ್ ಅವರು ಇದಕ್ಕಾಗಿ ಹೋರಾಟ ಮಾಡಿದ್ರು. ದಕ್ಷಿಣ ಭಾರತದಲ್ಲಿ ಮೀಸಲಾತಿ ಜಾರಿಯಾದರೂ ಉತ್ತರ ಭಾರತದಲ್ಲಿ ಆಗಿರಲಿಲ್ಲ. 1955 ರಲ್ಲಿ ಕಾಕಾ ಕಾಲೇಟ್ಕರ್ ಅವರ ವರದಿ ತಿರಸ್ಕಾರ ಆದಮೇಲೆ ಇನ್ನೊಂದು ಸಮಿತಿ ರಚನೆ ಮಾಡಿ ಎಂದು ದೇಶದಲ್ಲಿ ಹೋರಾಟವೇ ನಡೆದಿಲ್ಲ. 22 ವರ್ಷಗಳ ವರೆಗೆ ಈ ದೇಶದಲ್ಲಿ ಇನ್ನೊಂದು ಸಮಿತಿ ರಚನೆಯ ಕೂಗು ಕೇಳಲೇ ಇಲ್ಲ. ಅಷ್ಟರ ಮಟ್ಟಿಗೆ ನಾವು ಮೌನಿಗಳಾಗಿದ್ದೇವೆ, ಅನ್ಯಾಯವನ್ನು ಸಹಿಸಿಕೊಂಡಿದ್ದೇವೆ. 1977 ರಲ್ಲಿ ಅಂದಿನ ಜನತಾ ಸರ್ಕಾರ ಮಂಡಲ್ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡುವುದಾಗಿ ಘೋಷಿಸಿ, 1980 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಯಿತು. 1990 ರಲ್ಲಿ ವಿಪಿ ಸಿಂಗ್ ಬರುವವರೆಗೆ ವರೆಗೆ ಅದು ಜಾರಿಯಾಗಿರಲಿಲ್ಲ. ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಸಂವಿಧಾನದಲ್ಲಿ ಅಂಬೇಡ್ಕರ್ ಮೀಸಲಾತಿ ನೀಡಿದ್ರು, ಆದರೆ ಹಿಂದುಳಿದ ಜಾತಿಗಳಿಗೆ ಸಂವಿಧಾನ ಬಂದು 40 ವರ್ಷಗಳಾಗುವರೆಗೆ ಮೀಸಲಾತಿ ಸಿಕ್ಕಿರಲಿಲ್ಲ. ವಿ.ಪಿ. ಸಿಂಗ್ ಅವರು ಉದ್ಯೋಗದಲ್ಲಿ 27% ಮೀಸಲಾತಿ ನೀಡಿದ್ರು. ಇದನ್ನು ವಿರೋಧ ಮಾಡಿದ್ದು ಯಾರು? ರಥಯಾತ್ರೆ ಮಾಡಿದ್ದು ಯಾರು? ಅವರನ್ನು ಬಂಧಿಸಿದ್ದು ಯಾರು? ಮೀಸಲಾತಿ ಬಗೆಗಿನ ಸಂಪೂರ್ಣ ಮಾಹಿತಿ ತಿಳಿಸಲು ನಾಗಮೋಹನ್ ದಾಸ್ ಅವರು ಪುಸ್ತಕ ರೂಪದಲ್ಲಿ ಬರೆದಿದ್ದಾರೆ.

ಮಂಡಲ್ ಕಮಿಷನ್ ವರದಿ ಬಂದಾಗ ಹಿಂದುಳಿದವರು ಸಂಭ್ರಮಾಚರಣೆ ಮಾಡುವ ಬದಲು ವಿರೋಧ ಮಾಡುತ್ತಿದ್ದ ಜನರ ಜೊತೆಗೆ ಸೇರಿಕೊಂಡರು. ನಾನು ಆಗ ಜನತಾ ಪಕ್ಷದಲ್ಲಿದ್ದೆ, ಮಂಡಲ್ ಕಮಿಷನ್ ವರದಿ ವಿರುದ್ಧ ಮೆರವಣಿಗೆ ಹೋಗುತ್ತಾ ಇತ್ತು, ಅದರಲ್ಲಿ ನೋಡಿದ್ರೆ ನಮ್ಮವರೇ ಇದ್ರು. ನಾನು ಅವರನ್ನು ಕರೆದು ಯಾಕಪ್ಪ ನೀನು ಪ್ರತಿಭಟನೆಗೆ ಹೋಗಿದಿಯಾ ಎಂದು ಕೇಳಿದೆ. ಅದಕ್ಕವನು ವರದಿ ಜಾರಿಯಾದ್ರೆ ನಮಗೆಲ್ಲ ಕೆಲಸ ಸಿಗಲ್ವಂತಲ್ಲ ಸಾರ್ ಎಂದ. ಪರಿಸ್ಥಿತಿ ಇಂದೂ ಹಾಗೆಯೇ ಇದೆ. ಆದ್ದರಿಂದ ಇಂದು ನಾಗಮೋಹನ್ ದಾಸ್ ಅವರು ಹೊರತಂದಿರುವ ಪುಸ್ತಕದ ಅಗತ್ಯ ಸಾಕಷ್ಟು ಇದೆ. ಬಹಳ ಶ್ರಮ ಪಟ್ಟು ಅಂಕಿ ಅಂಶಗಳನ್ನು ಸಂಗ್ರಹಿಸಿದ್ದಾರೆ. ಇದು ಅತ್ಯಂತ ಉಪಯುಕ್ತ ಪುಸ್ತಕ. ಇಂಥಾ ಅನೇಕ ವಿಚಾರಗಳು ತಮ್ಮಿಂದ ಜನರಿಗೆ ಮುಂದೆಯೂ ತಲುಪಲಿ ಎಂದು ಹಾರೈಸಿದರು.

ಬಹಳಷ್ಟು ಜನ ವಿದ್ಯಾವಂತರು ಸಂವಿಧಾನದ ಪೀಠಿಕೆಯನ್ನೂ ಓದಿಕೊಂಡಿಲ್ಲ. ಕನಿಷ್ಠ ಇದನ್ನಾದ್ರೂ ಓದಿಕೊಳ್ಳಿ. ಇದೂ ನಮಗೆ ಗೊತ್ತಿಲ್ಲದೆ ಹೋದರೆ ನಾವು ಈ ದೇಶದ ಪ್ರಜೆಯಾಗಿರಲು ಅರ್ಹರಾ? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಸಂವಿಧಾನಕ್ಕೆ 73- 74ನೇ ತಿದ್ದುಪಡಿ ಆಗುವ ವರೆಗೆ ಮಹಿಳೆಯರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ರಾಜಕೀಯ ಮೀಸಲಾತಿ ಇರಲಿಲ್ಲ. ಈ ತಿದ್ದುಪಡಿ ನಂತರ ಮಹಿಳೆಯರಿಗೆ, ಹಿಂದುಳಿದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ರಾಜಕೀಯ ಮೀಸಲಾತಿ ಸಿಕ್ಕಿದ್ದು. 1994-95 ರ ವರೆಗೆ ಈ ಸಮುದಾಯಕ್ಕೆ ರಾಜಕೀಯ ಮೀಸಲಾತಿ ಇರಲಿಲ್ಲ. ಇದನ್ನು ಪ್ರಶ್ನೆ ಮಾಡಿದ್ದು ರಾಮಾ ಜೋಯಿಸ್ ಅವರು, ಅವರೇ ಇದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿದ್ರು. ಅದೃಷ್ಟವಶಾತ್ ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಮೀಸಲಾತಿ ಪರವಾಗಿ ಬಂತು. ಮತ್ತೆ ಈಗ ನಮ್ಮ ಬಳಿ ಯಾವುದೇ ನಂಬಿಕಾರ್ಹ ಮಾಹಿತಿ ಇಲ್ಲ ಎಂದು ಈ ರಾಜಕೀಯ ಮೀಸಲಾತಿಯನ್ನು ತೆಗೆದುಹಾಕಿದ್ದಾರೆ. ಆದರೂ ನಾವು ಸುಮ್ಮನಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಒಮ್ಮೆ 2004 ರಲ್ಲಿ ಆಂದ್ರ ಪ್ರದೇಶದವರು ಒಳ ಮೀಸಲಾತಿ ಸಂಬಂಧ ಪರಿಶಿಷ್ಟ ಜಾತಿಯಲ್ಲಿ ಎ.ಬಿ.ಸಿ.ಡಿ ಎಂದು ವಿಂಗಡಣೆ ಮಾಡಿದ್ರು. ಆಗ ಸುಪ್ರೀಂ ಕೋರ್ಟ್ ರಾಜ್ಯಕ್ಕೆ ಈ ಸಂಬಂಧ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿತು. ನಂತರ ಮತ್ತೆ ರಾಜ್ಯಗಳಿಗೆ ಅಧಿಕಾರ ಇದೆ ಸುಪ್ರೀಂ ಕೋರ್ಟ್ ಹೇಳಿತು. ಹೀಗೆ ಒಂದೊಂದು ಬಾರಿ ಒಂದೊಂದು ರೀತಿ ಆಗುತ್ತೆ. ಹಿಂದೆ ಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು, ನಮ್ಮ ಸರ್ಕಾರ ಬಂದಮೇಲೆ ರತ್ನಪ್ರಭಾ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಬಡ್ತಿ ಮೀಸಲಾತಿ ಜಾರಿ ಮಾಡಬೇಕು ಎಂದು ಕಾನೂನು ಮಾಡಿದ ಮೇಲೆ ಸುಪ್ರೀಂ ಕೋರ್ಟ್ ನಮ್ಮ ಕಾನೂನನ್ನು ಎತ್ತಿಹಿಡಿಯಿತು ಎಂದರು.

ಒಂದು ಒಪ್ಪಂದದ ಮೇರೆಗೆ ಉದ್ಯೋಗಕ್ಕೆ ತೆಗೆದುಕೊಳ್ಳುವುದು, ಇನ್ನೊಂದು ಖಾಸಗಿಯವರಿಗೆ ಹೊರ ಗುತ್ತಿಗೆಯನ್ನು ನೀಡುವುದು. ಹೀಗಾದ್ರೆ ಅಲ್ಲಿ ಮೀಸಲಾತಿ ಕೇಳುವ ಹಾಗಿರಲ್ಲ. ಇರುವ 2% ಮೀಸಲಾತಿಗಾಗಿ ಚರ್ಚೆ, ಗುದ್ದಾಟ ಆಗುತ್ತಿದೆ. ಮೀಸಲಾತಿ ಭಿಕ್ಷೆಯಲ್ಲ, ಇದು ಸಂವಿಧಾನಾತ್ಮಕ ಹಕ್ಕು. ನಮ್ಮಿಂದ ಕಿತ್ತುಕೊಂಡದ್ದನ್ನೇ ನಮಗೆ ಸ್ವಲ್ಪ ಸ್ವಲ್ಪ ವಾಪಾಸು ಕೊಡಿ ಎಂದು ಕೇಳುವುದು ಮೀಸಲಾತಿ. ಇದನ್ನು ಗಟ್ಟಿಯಾಗಿ ಕೇಳೋಕೆ ಯಾಕೆ ಭಯ. ನಾವು ಇಷ್ಟು ವರ್ಷ ಸುಮ್ಮನಿದ್ದಿದ್ದು ಸಾಕು, ಇನ್ನೂ ನಾವು ಸುಮ್ಮನೆ ಕೂತರೆ ಸಮಾನತೆಯ ಸಮಾಜ ನಿರ್ಮಾಣ ಆಗಲ್ಲ. ನಮ್ಮ ಜೊತೆ ಸುತ್ತಲಿನ ಸಮಾಜವನ್ನು ಬೆಳೆಸುವ ಕೆಲಸವನ್ನು ನಾವು ಮಾಡಬೇಕು. ಇದು ನಮ್ಮ ಕರ್ತವ್ಯ ಎಂದು ಬಲವಾಗಿ ಪ್ರತಿಪಾದಿಸಿದರು.

Join Whatsapp