ಸಾಮಾಜಿಕ ಜಾಲತಾಣಗಳ ಮೂಲಕ ಸಮಸ್ಯೆ ಬಿಚ್ಚಿಡುವ ಜನರಿಗೆ ಕಿರುಕುಳ ನೀಡದಿರಿ: ಸುಪ್ರೀಂ ಕೋರ್ಟ್ ಎಚ್ಚರಿಕೆ

Prasthutha|

ಹೊಸದಿಲ್ಲಿ : ಜನರು ತಮ್ಮ ಕುಂದು ಕೊರತೆಗಳನ್ನು ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದರೆ ಯಾವುದೇ ರಾಜ್ಯವು ಈ ಮಾಹಿತಿಗಳನ್ನು ತಡೆಗಟ್ಟಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. “ಒಂದು ವೇಳೆ ಜನರಿಗೆ ಕಿರುಕುಳ ನೀಡಿದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸುಲಾಗುತ್ತದೆ” ಎಂದು ನ್ಯಾಯಾಲಯವು ಒತ್ತಿ ಹೇಳಿದೆ.

- Advertisement -


“ನಾಗರಿಕನಾಗಿ ಅಥವಾ ನ್ಯಾಯಾಧೀಶನಾಗಿ ನನಗೆ ಇದು ಬಹಳ ಕಳವಳಕಾರಿ ಸಂಗತಿಯಾಗಿದೆ. ಜನರು ತಮ್ಮ ಕುಂದು ಕೊರತೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದರೆ, ಅವರ ಮೇಲೆ ಬಲಪ್ರಯೋಗ ಮಾಡುವುದನ್ನು ಬಿಟ್ಟು ಅವರ ಅಳಲನ್ನು ಕೇಳೋಣ. ನಾವು ಮಾನವೀಯ ಬಿಕ್ಕಟ್ಟಿನಲ್ಲಿದ್ದೇವೆ, ಹಾಸಿಗೆ ಮತ್ತು ಆಕ್ಸಿಜನ್ ಇಲ್ಲವೆಂದು ಹೇಳಿದ ಜನರಿಗೆ ಕಿರುಕುಳ ನೀಡಿದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸುತ್ತೇವೆ”ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಇಂದು ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾರೆ.

ಕೊರೊನಾ ಎರಡನೆ ಅಲೆಯು ದೇಶದಾದ್ಯಂತ ತೀವ್ರವಾಗಿ ಹೆಚ್ಚುತ್ತಿದೆ. ಇಂದು ದೇಶದಲ್ಲಿ 3.86 ಲಕ್ಷ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಸೋಂಕಿನ ಎರಡನೆ ಅಲೆಯ ಬಗ್ಗೆ ತಜ್ಞರು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಈ ಹಿಂದೆಯೆ ಎಚ್ಚರಿಸಿದ್ದರು. ಆದರೆ ಕೇಂದ್ರ ಸರ್ಕಾರ ಮಾತ್ರ ಯಾವುದೆ ತಯಾರಿಗಳನ್ನು ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

- Advertisement -


“ನಾಗರಿಕರು ಅಂತರ್ಜಾಲದಲ್ಲಿ ಎತ್ತುತ್ತಿರುವ ಕುಂದುಕೊರತೆಗಳು ಸುಳ್ಳು ಎಂದು ಯಾವುದೇ ಊಹೆಯಿರಬಾರದು” ಎಂದು ಸುಪ್ರೀಂಕೋರ್ಟ್ ಹೇಳಿದೆ.
ಇತ್ತೀಚೆಗೆ ಉತ್ತರ ಪ್ರದೇಶದ ಸರ್ಕಾರವು ಟ್ವಿಟರ್‌ನಲ್ಲಿ ಆಕ್ಸಿಜನ್ ಬೇಕು ಎಂದು ಕೇಳಿದ್ದ ಯುವಕನ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿ ಎಫ್‌ಐಆರ್‌ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ಈ ಆದೇಶವು ಮಹತ್ವದ್ದಾಗಿದೆ.

Join Whatsapp