ತೀಸ್ತಾ ಸೆಟಲ್ವಾಡ್ ಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು

Prasthutha|

ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.

- Advertisement -

2002ರ ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದ ನಂತರ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿ ಸೆಟಲ್ವಾಡ್ ಮತ್ತು ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ.ಶ್ರೀಕುಮಾರ್ ಅವರನ್ನು ಜೂನ್ ನಲ್ಲಿ ಬಂಧಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ , ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್, ಸುಧಾಂಶು ದುಲಿಯಾ ಅವರ ನೇತೃತ್ವದ ಪೀಠ ತೀಸ್ತಾ ಅವರಿಗೆ ಜಾಮೀನು ನೀಡಿದೆ.

- Advertisement -

ಅವರ ರೆಗ್ಯುಲರ್ ಜಾಮೀನು ಅರ್ಜಿ ಗುಜರಾತ್ ಹೈಕೋರ್ಟ್ ಮುಂದಿದ್ದು, ಸೆಪ್ಟೆಂಬರ್ 19 ಕ್ಕೆ ವಿಚಾರಣೆ ನಡೆಯಲಿದೆ.

 ಅಲ್ಲಿಯವರೆಗೆ ತೀಸ್ತಾ ಅವರು ತಮ್ಮ ಪಾಸ್ ಪೋರ್ಟ್ ಅನ್ನು ಕೋರ್ಟಿನ ವಶಕ್ಕೆ ನೀಡಲು ಆದೇಶಿಸಲಾಗಿದೆ.

” ಅವರ ಮೇಲೆ ಹೊರಿಸಲಾಗಿರುವ ಆರೋಪದ ಸ್ವರೂಪವನ್ನು ಪರಿಗಣನೆಯಲ್ಲಿಟ್ಟುಕೊಂಡಾಗ ಹಾಗೂ ಕಸ್ಟಡಿ ವಿಚಾರಣೆಯು ಮುಗಿದಿರುವಾಗ ಆರೋಪಿ ಮಹಿಳೆಗೆ ಮಧ್ಯಂತರ ಜಾಮೀನು ನೀಡಬಹುದೇ ಅಥವಾ ಇಲ್ಲವೇ ಎಂಬ ಸೀಮಿತ ವಿಷಯವನ್ನು ಮಾತ್ರ ನಾವು ಪರಿಗಣಿಸಿ ಮಧ್ಯಂತರ ಜಾಮೀನು ಮಂಜೂರು ಮಾಡುತ್ತಿದ್ದೇವೆ ” ಎಂದು ಮುಖ್ಯ ನ್ಯಾಯಮೂರ್ತಿ ಸಂಕ್ಷಿಪ್ತ ಆದೇಶವನ್ನು  ನೀಡಿದ್ದಾರೆ.

” ಆರೋಪಿ ಮಹಿಳೆಯು ಜೂನ್ 25 ರಿಂದ ಬಂಧನದಲ್ಲಿದ್ದಾರೆ. ಪೊಲೀಸರಿಗೆ ಏಳು ದಿನಗಳ ಪೊಲೀಸ್ ಕಸ್ಟಡಿಯ ಅವಕಾಶವನ್ನೂ ಕಲ್ಪಿಸಲಾಗಿತ್ತು. ಆರೋಪಿಸಲಾದ ಅಪರಾಧವು 2002-12 ರ ನಡುವೆ ಸಂಭವಿಸಿದೆ. ಪೊಲೀಸ್ ವಶದಲ್ಲಿನ ವಿಚಾರಣೆಯು ಮುಗಿದ ನಂತರ ಮಧ್ಯಂತರ ಜಾಮೀನು ಪ್ರಶ್ನೆಯನ್ನು ಪರಿಗಣಿಸಬೇಕಿತ್ತು ” ಎಂದು ಸುಪ್ರೀಂ ಕೋರ್ಟು ಅಭಿಪ್ರಾಯ ವ್ಯಕ್ತಪಡಿಸಿದೆ.

ಆದರೆ ” ಗುಜರಾತ್ ಹೈಕೋರ್ಟು ತೀಸ್ತಾ ಅವರ ರೆಗ್ಯುಲರ್ ಜಾಮೀನಿನ ವಿಚಾರಣೆಯನ್ನು ಪ್ರಕರಣದ ಸತ್ವ ಮತ್ತು ಸತ್ಯಾಸತ್ಯತೆಯ ಮೇಲೆ ನಿರ್ಧರಿಸುವುದಕ್ಕೆ ಸ್ವತಂತ್ರವಾಗಿದೆ ಎಂದು ಸುಪ್ರೀಂ ಕೋರ್ಟು ಹೇಳಿದೆ.

ಗುಜರಾತ್ ಹೈಕೋರ್ಟಿನಲ್ಲಿ ರೆಗ್ಯುಲರ್ ಜಾಮೀನಿನ ವಿಚಾರಣೆ ಸೆಪ್ಟೆಂಬರ್ 19 ರಂದು ನಡೆಯಲಿದೆ

ನಿನ್ನೆ ಮುಂದೂಡಲಾಗಿದ್ದ ತೀಸ್ತಾ ಅವರ ಜಾಮೀನು ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಯು. ಯು. ಲಲಿತ್ ಅವರ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಇಂದು ಮಧ್ಯಾಹ್ನ 2 ಕ್ಕೆ ಮುಂದುವರೆಯಿತು .

ಮೊದಲಿಗೆ ಸರ್ಕಾರಿ ವಕೀಲರಾದ (ಸಾಲಿಸಿಟರ್ ಜನರಲ್ ) ತುಷಾರ ಮೆಹತಾ ತಮ್ಮ ವಾದ ಮಂಡಿಸಿದರು.

 ಗುಜರಾತ್ ಹೈಕೋರ್ಟು ತೀಸ್ತಾ ಸೆಟಲ್ವಾಡ್ ವಿಷಯದಲ್ಲಿ ವಿಶೇಷ ತಾರತಮ್ಯ ಮಾಡಿಲ್ಲ. ಅಂದಿನ ಬಹು ಪಾಲು ಪ್ರಕರಣಗಳನ್ನು ಆರು ವಾರಗಳ ಕಾಲ ಮುಂದೂಡಿದ್ದಾರೆ ಎಂದು ಹೇಳಿದರು ಮತ್ತು ವಿನಾಕಾರಣ ಗುಜರಾತ್ ರಾಜ್ಯವನ್ನು ರೇಪಿಸ್ಟ್ ಗಳ ರಾಜ್ಯ ಎಂದೆಲ್ಲಾ ದೂರುತ್ತಿದ್ದಾರೆ ಎಂದು ಹೇಳಹೋದಾಗ ನ್ಯಾಯಾಧೀಶರು ಸದರಿ ಪ್ರಕರಣಕ್ಕೆ ಮಾತ್ರ ಸೀಮಿತವಾಗುವಂತೆ ನಿರ್ದೇಶಿಸಿದರು.

ಮತ್ತೆ ಸರ್ಕಾರಿ ವಕೀಲರು ಆರೋಪಿಯು ಪರಿಹಾರ ಪಡೆದುಕೊಳ್ಳಲು ಇರುವ ಹಲವಾರು ವೇದಿಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡ ನಂತರ ಅದು ತನ್ನ ಆದೇಶ ನೀಡುವ ಮುಂಚೆಯೇ ಮತ್ತೊಂದು ಉನ್ನತ ವೇದಿಕೆಯ ಮೊರೆಹೋಗುವುದು ಸರಿಯಲ್ಲ.

 ಮೂರನೆಯದಾಗಿ FIR ಆದ ನಂತರ ಹೊಸದಾಗಿ ತನಿಖೆಯಲ್ಲಿ ಏನು ಪ್ರಗತಿಯಾಗಿಲ್ಲ ಎಂಬುದು ಸುಳ್ಳು ಎಂದು ಹೇಳಿ ಪ್ರಕರಣದಲ್ಲಿ ತೀಸ್ತಾ ಅವರು ಸಂಚು ಮಾಡಿ ಕೆಲವರನ್ನು ಸಿಕ್ಕಿಸಲು ಪ್ರಯತ್ನಿಸಿದರೂ ಎಂಬ ಗುಜರಾತ್ ಪೋಲೀಸರ ಮತ್ತು SIT ಯ ವರದಿಯ ಭಾಗಗಳನ್ನು ಓದಿ ಹೇಳಲು ಪ್ರಾರಂಭಿಸಿದರು.

ಈ ಸುಳ್ಳು ದೂರುಗಳು ಮತ್ತು ಒಂದೇ ಬಗೆಯ ಅಫಿದವಿತ್ ಗಳು ಎಲ್ಲವೂ ಕೋರ್ಟಿನ ಹೊರಗಡೆ ನಡೆದಿದ್ದು ಅದನ್ನು ಕೋರ್ಟಿಗೆ ಸಲ್ಲಿಸುವ ಅಗತ್ಯವಿದೆ. ಅದರ ತನಿಖೆ ಈಗ ನಡೆದಿದೆ. ಈ ರೀತಿ ಆರೋಪವನ್ನು ಮಾಡಲು ಆರೋಪಿಯು 8 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಮತ್ತು ಅದನ್ನು ದುಬೈ ನಲ್ಲಿ ಇತ್ಯಾದಿ ಕಡೆಗಳಲ್ಲಿ ಐಷಾರಾಮಿ ಪ್ರವಾಸ, ವೈನ್ ಇತ್ಯಾದಿಗಳಿಗೆ ವೆಚ್ಚ ಮಾಡಿದ್ದಾರೆ ಎಂದೆಲ್ಲ ಹೇಳತೊಡಗಿದರು.

ಈ  ಸಮಯದಲ್ಲಿ ಮಧ್ಯಪ್ರವೇಶ ಮಾಡಿದ ಮುಖ್ಯ ನ್ಯಾಯ ಮೂರ್ತಿಗಳು, ಪೊಲೀಸ್ ಕಸ್ಟಡಿಯ ಸಂದರ್ಭದಲ್ಲಿ ಯಾವೆಲ್ಲ ಹೊಸ ವಿಷಯಗಳನ್ನು ಸಂಗ್ರಹಿಸಿದಿರಿ ಎಂದು ಕೇಳಿದರು. ಅದಕ್ಕೆ ಸರ್ಕಾರೀ ವಕೀಲರು ಆರೋಪಿಯು ತುಂಬಾ ಚತುರೆಯಾಗಿರುವುದರಿಂದ ಯಾವುದೇ ಉತ್ತರವನ್ನು ಕೊಟ್ಟಿಲ್ಲ ಉತ್ತರಿಸಿದರು.

ಸಾಕ್ಷಿ ನುಡಿದವರ ಮೇಲೆ ಒತ್ತಡ ಹೇರಿ ಸುಳ್ಳು ಸಾಕ್ಷಿ ಹೇಳಿಸಿರುವ ಕುರಿತು ತನಿಖೆ ನಡೆಯುತ್ತಿದೆ. ಆರೋಪಿಯು ಪ್ರಭಾವಶಾಲಿಯಾಗಿರುವುದನ್ನು ಕೋರ್ಟ್ ಪರಿಗಣಿಸಬೇಕು. ಆದರಿಂದ ಈ ಪ್ರಕರಣವನ್ನು ಮತ್ತು ಆ ಮಹಿಳೆಯನ್ನು ವಿಶೇಷವಾಗಿ ಪರಿಗಣಿಸಬಾರದು ಹಾಗೂ ತಪ್ಪು ಮೇಲ್ಪಂಕ್ತಿ ಹಾಕಿಕೊಡಬಾರದೆಂದು ಮನವಿ ಮಾಡುತ್ತೇನೆಂದು ತನ್ನ ವಾದವನ್ನು ಮುಗಿಸಿದರು.

ತೀಸ್ತಾ ಪರ ವಕೀಲರಾದ ಕಪಿಲ್ ಸಿಬಲ್ ತಮ್ಮ ವಾದ ಮುಂದಿಡುತ್ತಾ, ತೀಸ್ತಾ ವಿರುದ್ಧ ಸಾಕ್ಷಿ ನೀಡಿರುವ ಸಾಕ್ಷಿಯು ತೀಸ್ತಾ ಬಳಿ ಕೆಲಸ ಮಾಡುತ್ತಿದ್ದ ಉದ್ಯೋಗಿಯಾಗಿದ್ದು ಆತನನ್ನು ಕೆಲಸದಿಂದ ತೆಗದು ಹಾಕಲಾಗಿತ್ತು. ಹೀಗಾಗಿ ಆ ಸಾಕ್ಷಿಯು 2010 ರಿಂದ ತೀಸ್ತಾ ವಿರುದ್ಧ ಹೇಳಿಕೆ ನೀಡುತ್ತಿದ್ದು ಎಲ್ಲಾ ಕೋರ್ಟುಗಳಲ್ಲೂ ಆ ಸಾಕ್ಷಿಯ ಹೇಳಿಕೆಯನ್ನು ನಿರಾಕರಿಸಲಾಗಿದೆ. ಫೋರ್ಜರಿ ಆಗಿದ್ದರೂ ಅದರ ಬಗ್ಗೆ ದೂರು ನೀಡಬೇಕಿದ್ದು ಯಾರ ಫೋರ್ಜರಿಯಾಗಿದೆಯೋ ಅವರೇ ವಿನಾ ಸರ್ಕಾರವಲ್ಲ . ಇಲ್ಲಿ ಸರ್ಕಾರವೇ ಆ ಕೆಲಸ ಮಾಡಿರುವುದು ಸರ್ಕಾರದ ದುರುದ್ದೇಶ ಸಾಬೀತು ಮಾಡುತ್ತದೆ. ಯಾವುದನ್ನು ತೀಸ್ತಾ ಫೋರ್ಜರಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆಯೋ ಅದು ಈ ಕೇಸಿಗೆ ಸಂಬಂಧಪಟ್ಟಿದ್ದಲ್ಲ. NHRC ಯು ಸುಪ್ರೀಂ ಕೋರ್ಟಿನ ಮುಂದೆ ಸಲ್ಲಿಸಿದ ವರದಿ. ಹಾಗಿದ್ದರೆ NHRC ಗೂ ದುರುದ್ದೇಶಗಳಿದ್ದವೇ? ಕೋರ್ಟು ತೀಸ್ತಾಗೆ ಈ ಹಿಂದೆ ನೀಡಿರುವ ಯಾವ ಪರಿಹಾರಗಳ ಸಂದರ್ಭದಲ್ಲೂ  ಕೋರ್ಟುಗಳು ಈ ಫೋರ್ಜರಿ ವಿಷಯವನ್ನು ಪರಿಗಣಿಸಿಲ್ಲ ಎಂದರು.

ಸರ್ಕಾರದ ಸಹಾಯಕ ವಕೀಲರಾದ (ಸಹಾಯಕ ಸಾಲಿಸಿಟರ್ ಜನರಲ್) ರಾಜು ವಾದ ಮಂಡಿಸಿ, ಸಾಕ್ಷಿಗಳ ಸಹಿಯನ್ನು ತೀಸ್ತಾ ಬಲವಂತದಿಂದ ಪಡೆದಿದ್ದಾರೆ. ಬಲವಂತದ ಸಹಿ ಫೋರ್ಜರಿಯೇ ಆಗುತ್ತದೆ. ಅದನ್ನು ಸಂಬಂಧಪಟ್ಟವರು ದೂರು ಕೊಡಬೇಕಿದ್ದರೂ ವಿಚಾರಣೆ ಹಾಗೂ ತನಿಖೆ ಮಾಡಲು ಅದು ಅಡ್ಡಿಯಾಗುವುದಿಲ್ಲ ಎಂದು ತಮ್ಮ ವಾದ ಮುಗಿಸಿದರು.

ವಾದ ವಿವಾದ ಆಲಿಸಿದ ಬಳಿಕ ತೀಸ್ತಾಗೆ ಮಧ್ಯಂತರ ಜಾಮೀನು ನೀಡಿ ಮುಖ್ಯ ನ್ಯಾಯಾಧೀಶರು ಆದೇಶ ಹೊರಡಿಸಿದರು.

Join Whatsapp