ಕಾಶ್ಮೀರದಲ್ಲಿ ಮಕ್ಕಳ ಮೇಲೆ ಪೆಲೆಟ್ ಗನ್ ಬಳಕೆ ತಕ್ಷಣ ನಿಲ್ಲಿಸಿ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ತಾಕೀತು

Prasthutha|

ನವದೆಹಲಿ – ಕಾಶ್ಮೀರದಲ್ಲಿ ಮಕ್ಕಳ ವಿರುದ್ಧ ಪೆಲೆಟ್ ಗನ್ ಬಳಕೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಭಾರತಕ್ಕೆ ಸೂಚಿಸಿದ್ದಾರೆ.

- Advertisement -


ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸೋಮವಾರ ಮುಕ್ತ ಚರ್ಚೆಗೆ ಮಂಡಿಸಲಾದ ಪ್ರಧಾನ ಕಾರ್ಯದರ್ಶಿ ಅವರ “ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ” ಕುರಿತ ವರದಿಯಲ್ಲಿ ಈ ಒತ್ತಾಯ ಮಾಡಲಾಗಿದೆ.
ಯಾವುದೇ ರೀತಿಯಲ್ಲೂ ಭದ್ರತಾ ಪಡೆಗಳೊಂದಿಗೆ ಮಕ್ಕಳು ಬೆರೆಯುವುದನ್ನು ನಿಲ್ಲಿಸಬೇಕೆಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಭಾರತವನ್ನು ಒತ್ತಾಯಿಸಿದ್ದಾರೆ. ಆದರೆ ಭಾರತವು ಮಕ್ಕಳನ್ನು ಹೇಗೆ ಭದ್ರತಾ ಪಡೆಗಳೊಂದಿಗೆ ಬೆರೆಯುವಂತೆ ಮಾಡುತ್ತಿದೆ ಎಂಬುದನ್ನು ಇದು ಸ್ಪಷ್ಟಪಡಿಸಿಲ್ಲ.


ಕಳೆದ ವರ್ಷ ಸುಮಾರು 19,300 ಮಕ್ಕಳನ್ನು ಮುಖ್ಯವಾಗಿ ಯುದ್ಧ ವಲಯಗಳಾದ ಅಫ್ಘಾನಿಸ್ತಾನ, ಸಿರಿಯಾ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯಗಳಲ್ಲಿ ಗಂಭೀರ ಹಿಂಸಾ ಕೃತ್ಯಗಳಲ್ಲಿ ಬಳಸಲಾಯಿತು ಎಂದು ವರದಿ ಹೇಳಿದೆ.
ಯುದ್ಧ ಮತ್ತು ದಂಗೆಯ ಮಧ್ಯೆ ಮಕ್ಕಳ ಹಕ್ಕುಗಳನ್ನು ಕಡೆಗಣಿಸುವುದು ಆಘಾತಕಾರಿ ಮತ್ತು ಹೃದಯ ವಿದ್ರಾವಕವಾಗಿದೆ ಎಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಚರ್ಚೆಯ ವೇಳೆ ಗುಟೆರೆಸ್ ಹೇಳಿದರು.
ಶಾಲೆಗಳು ಮತ್ತು ಆಸ್ಪತ್ರೆಗಳು ನಿರಂತರವಾಗಿ ಆಕ್ರಮಣಗೊಳ್ಳುತ್ತಿವೆ, ಲೂಟಿಗೈಯ್ಯಲ್ಪಡುತ್ತಿವೆ, ನಾಶವಾಗುತ್ತಿವೆ ಅಥವಾ ಮಿಲಿಟರಿ ಉದ್ದೇಶಗಳಿಗಾಗಿ ಬಳಸಲ್ಪಡುತ್ತವೆ ಎಂದು ಅವರು ವಿಷಾದಿಸಿದ್ದಾರೆ.
ಸಶಸ್ತ್ರ ಗುಂಪುಗಳೊಂದಿಗೆ ಒಡನಾಟ ಹೊಂದಿದ್ದಕ್ಕಾಗಿ ನಾಲ್ಕು ಮಕ್ಕಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

- Advertisement -


ಜಮ್ಮು ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಿಂದ 33 ಬಾಲಕರು ಮತ್ತು ಆರು ಬಾಲಕಿಯರು ಸೇರಿದಂತೆ ಒಟ್ಟು 39 ಮಕ್ಕಳು ನೇರವಾಗಿ ಬಾಧಿತರಾಗಿದ್ದಾರೆ. ಈ ಪೈಕಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಮತ್ತು 11 ಮಂದಿಯನ್ನು ಪೆಲೆಟ್ ಬಂದೂಕುಗಳಿಂದ ಗಾಯಗೊಳಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯ ಬಗ್ಗೆ ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದರು.
ಮಕ್ಕಳನ್ನು ರಕ್ಷಿಸಲು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇನೆ. ಮಕ್ಕಳ ವಿರುದ್ಧ ಪೆಲೆಟ್ ಗನ್ ಬಳಕೆಯನ್ನು ಕೊನೆಗೊಳಿಸುವುದು ಸೇರಿದಂತೆ ಮಕ್ಕಳ ವಿರುದ್ಧದ ಎಲ್ಲಾ ರೀತಿಯ ಹಿಂಸೆಯನ್ನು ನಿಲ್ಲಿಸಬೇಕು ಎಂದು ಗುಟೆರಸ್ ವರದಿಯಲ್ಲಿ ಆಗ್ರಹಿಸಿದ್ದಾರೆ.

Join Whatsapp