ಕೊರೋನಾ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಿ; ಮೊತ್ತವನ್ನು ಸರ್ಕಾರವೇ ನಿರ್ಧರಿಸಲಿ: ಸುಪ್ರೀಂಕೋರ್ಟ್

Prasthutha|

ನವದೆಹಲಿ: ಕೊರೋನಾ ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ಪರಿಹಾರ ಸಿಗಬೇಕು ಎಂದು ಹೇಳಿರುವ ಸುಪ್ರೀಂಕೋರ್ಟ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಆರು ವಾರಗಳ ಕಾಲಾವಕಾಶ ನೀಡಿ, ಮೊತ್ತವನ್ನು ನಿರ್ಧರಿಸಲು ಮತ್ತು ಅಗತ್ಯವಾದ ಮಾರ್ಗಸೂಚಿಗಳನ್ನು ರೂಪಿಸಲು ಸೂಚಿಸಿದೆ.

- Advertisement -

ಮೃತರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಅದರ ಮೊತ್ತವನ್ನು ನಿರ್ಧರಿಸುವುದು ಸರ್ಕಾರ, ಎನ್ ಡಿಎಂಎ ವಿವೇಚನೆಗೆ ಬಿಟ್ಟಿದ್ದೇವೆ. ಆದರೆ, ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಆ ಸಂಬಂಧ ಇನ್ನು ಆರು ವಾರಗಳಲ್ಲಿ ಮಾರ್ಗಸೂಚಿ ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ಆದೇಶ ನೀಡಿದೆ.

“ಕನಿಷ್ಠ ಪರಿಹಾರದ ಮಾನದಂಡಗಳ ಪ್ರಕಾರ, ಕೋವಿಡ್ ಗೆ ಬಲಿಯಾದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಪರಿಹಾರಕ್ಕಾಗಿ ಮಾರ್ಗಸೂಚಿಗಳನ್ನು ರೂಪಿಸಲು ನಾವು ಎನ್ ಡಿಎಂಎಗೆ ನಿರ್ದೇಶಿಸುತ್ತೇವೆ” ಎಂದು ಜುಲೈ 4 ರಂದು ನಿವೃತ್ತರಾಗಲಿರುವ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್ ಶಾ ಅವರನ್ನು ಒಳಗೊಂಡ ಪೀಠ ಹೇಳಿದೆ.
ಈ ಮೊತ್ತ ಸಿಕ್ಕಿದರೆ ಸಂತ್ರಸ್ತ ಕುಟುಂಬಕ್ಕೆ ಸಹಾಯವಾಗಲಿದೆ ಎಂದು ಪೀಠ ಹೇಳಿದೆ.

- Advertisement -

ಕೊರೊನಾದಿಂದ ಮೃತರಾದ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಲಾಗಿದೆ. ಮುಂದಿನ ಆರು ತಿಂಗಳೊಳಗೆ ಈ ಎಲ್ಲಾ ಪ್ರಕ್ರಿಯೆಯನ್ನು ಮುಗಿಸುವಂತೆ ಪೀಠ ಸೂಚಿಸಿದೆ

Join Whatsapp