ಮೂರ್ಖರು ಮಾತ್ರ ಕ್ರಿಪ್ಟೋಕರೆನ್ಸಿ ಖರೀದಿಸುತ್ತಾರೆ: ರಘುರಾಮ್ ರಾಜನ್

Prasthutha|

6,000 ಕ್ರಿಪ್ಟೋಕರೆನ್ಸಿಗಳಲ್ಲಿ, ಒಂದೆರಡು ಮಾತ್ರ ಉಳಿದುಕೊಳ್ಳಲಿವೆ

- Advertisement -

ಕ್ರಿಪ್ಟೋಕರೆನ್ಸಿಗಳಿಗೆ ಕಡಿವಾಣ ಹಾಕಲು ಸರ್ಕಾರಿ ಸಂಸ್ಥೆಗಳಿಗೆ ಸಾಧ್ಯವಿಲ್ಲ   

ನವದೆಹಲಿ: ಕ್ರಿಪ್ಟೋಕರೆನ್ಸಿಗಳು ಮೌಲ್ಯವನ್ನು ಉಳಿಸಿಕೊಂಡಿರಲು ಅವನ್ನು ಖರೀದಿಸಲು ಹೆಚ್ಚಿನ ಮೂರ್ಖರು ಸಿದ್ಧರಿರುವುದೇ ಕಾರಣ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಇಂದು ಅಸ್ತಿತ್ವದಲ್ಲಿರುವ 6,000 ಕ್ರಿಪ್ಟೋಕರೆನ್ಸಿಗಳಲ್ಲಿ, ಮುಂದಿನ ದಿನಗಳಲ್ಲಿ ಕೇವಲ ಒಂದೆರಡು ಅಥವಾ ಹೆಚ್ಚೆಂದರೆ ಬೆರಳೆಣಿಕೆಯಷ್ಟು ಮಾತ್ರ ಉಳಿದುಕೊಳ್ಳಲಿವೆ ಎಂದು ರಾಜನ್ ಹೇಳಿದ್ದಾರೆ.

- Advertisement -

CNBC-TV18 ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಆರ್‌ಬಿಐ ಗವರ್ನರ್, ಕ್ರಿಪ್ಟೋಕರೆನ್ಸಿಗಳಲ್ಲಿ ಪ್ರಸ್ತುತ ಉನ್ಮಾದವನ್ನು 17ನೇ ಶತಮಾನದಲ್ಲಿ ನೆದರ್ಲೆಂಡ್’ನಲ್ಲಿನ ತುಲಿಪ್ ಉನ್ಮಾದಕ್ಕೆ ಹೋಲಿಸಿದರು. 1634ರ ಸಮಯದಲ್ಲಿ ಫ್ಯಾಶನ್ ಹೂವಿನ ಗಿಡದ ಕಾಯಿ (ತುಲಿಪ್ ಬಲ್ಬ್), ಬೆಲೆಗಳು ಗಗನಕ್ಕೇರಿತ್ತು. ಆದರೆ ನಂತರದ ದಿನಗಳಲ್ಲಿ ಅವು ನಾಟಕೀಯವಾಗಿ ಕುಸಿಯಿತು ಎಂದು ರಾಜನ್ ಉದಾಹರಣೆ ನೀಡಿದರು.

ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ಮೌಲ್ಯವಿಲ್ಲ ಎಂದಲ್ಲ. ಆದ್ರೆ ಅವುಗಳಲ್ಲಿ ಹೆಚ್ಚಿನವು ಶಾಶ್ವತ ಮೌಲ್ಯವನ್ನು ಹೊಂದಿಲ್ಲ. ಅಲ್ಲದೆ, ಕೆಲವು ಪಾವತಿಗಳನ್ನು ಮಾಡುವ ಮೂಲಕ, ವಿಶೇಷವಾಗಿ ಗಡಿಯಾಚೆಗಿನ ಪಾವತಿಗಳ ಮೂಲಕ ಮಾತ್ರ ಅವು ಉಳಿದುಕೊಳ್ಳಬಹುದಾಗಿದೆ. ಚಿಟ್​​ ಫಂಡ್​ಗಳು ಜನರಿಂದ ಹಣವನ್ನು ತೆಗೆದುಕೊಂಡು ಮೋಸ ಮಾಡುವ ರೀತಿಯಲ್ಲೇ ಕ್ರಿಪ್ಟೋ ಆಸ್ತಿಯನ್ನು ಹೊಂದಿರುವ ಬಹಳಷ್ಟು ಜನರು ತೊಂದರೆಗೊಳಗಾಗುತ್ತಿದ್ದಾರೆ ಎಂದು ರಾಜನ್ ಹೇಳಿದರು.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ- 2021 ಪರಿಚಯಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಇದರ ಜೊತೆಗೆ ಆರ್‌ಬಿಐ ಮೂಲಕ ಅಧಿಕೃತ ಡಿಜಿಟಲ್ ಕರೆನ್ಸಿ ಸೃಷ್ಟಿಗೆ ಬೇಕಾದ ಫ್ರೇಮ್‌ವರ್ಕ್ ಸಿದ್ಧತೆಗೂ ಈ ಕಾಯ್ದೆ ಅನುವುಮಾಡಿಕೊಡಲಿದೆ.

Join Whatsapp