ಮುಸ್ಲಿಮರಿಗೆ ನೀಡಲಾಗಿದ್ದ 2ಬಿ ಮೀಸಲಾತಿ ರದ್ದತಿ ವಿರುದ್ಧ ಹುನಗುಂದದಲ್ಲಿ SDPI ಪ್ರತಿಭಟನೆ

Prasthutha|

ಹುನಗುಂದ: ಮುಸ್ಲಿಮರಿಗೆ ನೀಡಲಾಗಿದ್ದ 2ಬಿ ಮೀಸಲಾತಿಯನ್ನು ಪುನರ್ ಸ್ಥಾಪಿಸುವಂತೆ ಕೋರಿ ಹುನಗುಂದ ತಾಲೂಕು ದಂಡಾಧಿಕಾರಿಗಳ ಕಚೇರಿ ಎದುರು ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹುನಗುಂದ ವಿಧಾನಸಭಾ ಕ್ಷೇತ್ರದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

- Advertisement -

ಹುನಗುಂದ ವಿಧಾನಸಭಾ ಕ್ಷೇತ್ರದ ಎಸ್ ಡಿಪಿಐ ಅಧ್ಯಕ್ಷ ಮೌಲಾ ಅಲಿ ಛಾವಣಿ ಮಾತನಾಡಿ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಮುಸ್ಲಿಂ ಸಮುದಾಯಕ್ಕಿದ್ದ 2(ಬಿ) ಮೀಸಲಾತಿಯನ್ನು ರದ್ದುಪಡಿಸಿರುವುದು ಅಸಾಂವಿಧಾನಿಕ ಹಾಗೂ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿರುವ ಉದ್ದೇಶಿತ ದಾಳಿಯಾಗಿದೆ ಎಂದು ಟೀಕಿಸಿದರು.
ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲದಿರುವುದರಿಂದ 2(ಬಿ) ಪ್ರವರ್ಗದಡಿಯಲ್ಲಿ ಇತರೆ ಹಿಂದುಳಿದ ವರ್ಗಗಳಂತೆ ಕರ್ನಾಟಕದ ಮುಸ್ಲಿಂ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವೆಂದು ವೈಜ್ಞಾನಿಕ ಅಧ್ಯಯನದ ಮೂಲಕ ಗುರುತಿಸಿ 2(ಬಿ) ಮೀಸಲಾತಿ ನೀಡಲಾಗಿತ್ತು. ಸ್ವಾತಂತ್ರ್ಯ ನಂತರ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ ಮತ್ತು 1990ರ ಚಿನ್ನಪ್ಪ ರೆಡ್ಡಿ ಆಯೋಗ ಕೂಡ ಮುಸ್ಲಿಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿರುವುದನ್ನು ನಾವು ಕಾಣಬಹುದು. ವಾಸ್ತವಾಂಶ ಹೀಗಿದ್ದರೂ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ತಡೆಯೊಡ್ಡುವ ಹಾಗೂ ಮುಖ್ಯವಾಹಿನಿಗೆ ಬರದಂತೆ ನೋಡಿ ಕೊಳ್ಳುವ ಷಡ್ಯಂತ್ರದ ಮುಂದುವರಿದ ಭಾಗವಾಗಿ 2(ಬಿ) ಮೀಸಲಾತಿ ರದ್ದುಪಡಿಸಿರುವುದು ದೃಢವಾಗುತ್ತದೆ ಎಂದು ಅವರು ಆರೋಪಿಸಿದರು.
ಸಂವಿಧಾನದ ಆಶಯಗಳಂತೆ ಸರ್ಕಾರ ಆಡಳಿತ ನಡೆಸಬೇಕೇ ಹೊರತು ತನ್ನ ಗುಪ್ತ ಅಜೆಂಡಾವನ್ನು ಜಾರಿಗೊಳಿಸಲು ಅಲ್ಲ. ಈ ನಿಟ್ಟಿನಲ್ಲಿ ಮುಸ್ಲಿಮ್ ಸಮುದಾಯಕ್ಕೆ ನಿಗದಿಯಾಗಿದ್ದ 2(ಬಿ) ಮೀಸಲಾತಿಯನ್ನು ಮರು ಸ್ಥಾಪಿಸಬೇಕು. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಮುಸ್ಲಿಮರ ಹಿತ ದೃಷ್ಟಿಯಿಂದ ಸರ್ಕಾರ ಕರ್ತವ್ಯ ನಿರ್ವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಅವರು ಒತ್ತಾಯಿಸಿದರು.
ಎಸ್ ಡಿಪಿಐ ಬಾಗಲಕೋಟ ಜಿಲ್ಲಾ ಕಾರ್ಯದರ್ಶಿ ರಮಜಾನ್ ಕಡಿವಾಲ, ಇರ್ಫಾನ್ ವೆಂಕಟಾಪೂರ, ಹಾಗೂ ಮುಸ್ಲಿಂ ಮುಖಂಡರು ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Join Whatsapp