ರಾಷ್ಟ್ರ ಧ್ವಜದ ಜಾಗದಲ್ಲಿ ಮತ್ತೊಂದು ಧ್ವಜ ಅಳವಡಿಸಿದರೆ ಅದನ್ನು ಕಿತ್ತೊಗೆಯಲು SDPI ಗೆ ಗೊತ್ತಿದೆ: ಅಬೂಬಕ್ಕರ್ ಕುಳಾಯಿ

Prasthutha|

ಮಂಗಳೂರು: ಬೆಳ್ತಂಗಡಿಯಲ್ಲಿ ನಡೆದ ಬಿಜೆಪಿ ಮಂಡಲ ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ ರಾಷ್ಟ್ರಧ್ವಜಕ್ಕೆ ಅವಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದು, ತಕ್ಷಣ ಪೊಲೀಸರು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಹಾಗೂ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಒತ್ತಾಯಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿಜೆಪಿ ಶಾಸಕರು, ಸಚಿವರು ದಿನನಿತ್ಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವಾಗ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಯಾಕಾಗಿ ಮೌನ ವಹಿಸುತ್ತಿದ್ದಾರೆ, ಅಂತಹ ಹೇಳಿಕೆಗಳ ವಿರುದ್ಧ ದೂರು ಕೊಟ್ಟರೆ ಅದನ್ನು ದಾಖಲಿಸಲು ಹಿಂದೇಟು ಹಾಕುತ್ತಿರುವ ಉದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಶಾಸಕರು, ಸಂಸದರು, ಸಚಿವರು ನಿರಂತರವಾಗಿ ಇಂತಹ ಅಪ್ರಬುದ್ಧ, ಅವಿವೇಕಿ ಹೇಳಿಕೆಗಳಿಂದ ಇಂದು ದೇಶದ ಸಂವಿಧಾನ ಅಪಾಯದಲ್ಲಿದೆ. ಭಾಷಣ ಮಾಡುವಾಗ ತನ್ನ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಲು, ಪುಕ್ಕಟೆ ಪ್ರಚಾರ ಪಡೆಯಲು ಇವರಿಗೆ ಸಂವಿಧಾನ ವಿರೋಧಿ ಹೇಳಿಕೆಗಳು ನೀಡುವುದು ಚಾಳಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

- Advertisement -

ದೇಶದ ಚರಿತ್ರೆ ಹಾಗೂ ಇತಿಹಾಸವನ್ನು ತಿಳಿಯದ ಬಿಜೆಪಿಯಿಂದ ಮಾತ್ರ ಇಂತಹ ಹೇಳಿಕೆಗಳು ಬರಲು ಸಾಧ್ಯ. ಇತಿಹಾಸ ತಿಳಿಯದವ ಇತಿಹಾಸ ನಿರ್ಮಿಸಲಾರ ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಾತಿನಂತೆ ದೇಶದ ಇತಿಹಾಸ ನಿರ್ಮಾಣದಲ್ಲಿ ಯಾವುದೇ ಪಾತ್ರ ವಹಿಸದೇ ದೇಶದ್ರೋಹಿ ಕೆಲಸದಲ್ಲಿ ನಿರತರಾಗಿದ್ದ ಸಂಘಪರಿವಾರ, ಬಿಜೆಪಿ ನಾಯಕರು ಇಂದು ತ್ಯಾಗ ಬಲಿದಾನದ ಸಂಕೇತವಾದ ಜಗತ್ತಿನಲ್ಲೇ ವಿಶೇಷ ಸ್ಥಾನಮಾನವನ್ನು ಹೊಂದಿರುವ ಭಾರತದ ತ್ರಿವರ್ಣ ಧ್ವಜವನ್ನು ಅವಮಾನಿಸುವ ಮೂಲಕ ಅವರ ನಕಲಿ ರಾಷ್ಟ್ರಪ್ರೇಮ ಏನು ಎಂಬುದನ್ನು ಜಗಜ್ಜಾಹೀರುಗೊಳಿಸಿದ್ದಾರೆ ಎಂದು ಕುಳಾಯಿ ಕಿಡಿಕಾರಿದ್ದಾರೆ.

ಘನತೆ ಗೌರವವನ್ನು ಹೊಂದಿರುವ ನಮ್ಮ ರಾಷ್ಟ್ರಧ್ವಜ ವನ್ನು ಗೌರವಿಸಬೇಕಾದದ್ದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅದನ್ನು ಮತ್ತೊಂದು ಧ್ವಜದೊಂದಿಗೆ ತುಲನೆ ಮಾಡಲು ಯಾರೇ ಪ್ರಯತ್ನಿಸಿದರೂ SDPI ಕಾನೂನು ರೀತಿಯ ಹೋರಾಟ ಮಾಡಲಿದೆ. ನಮ್ಮ ರಾಷ್ಟ್ರ ಧ್ವಜ ಇರಬೇಕಾದ ಜಾಗದಲ್ಲಿ ಮತ್ತೊಂದು ಧ್ವಜ ಅಳವಡಿಸಿದರೆ ಅದನ್ನು ಕಿತ್ತೊಗೆಯಲು SDPI ಕಾರ್ಯಕರ್ತರಿಗೆ ಗೊತ್ತಿದೆ ಎಂದು ಅಬೂಬಕ್ಕರ್ ಕುಳಾಯಿ ಎಚ್ಚರಿಕೆ ನೀಡಿದ್ದಾರೆ.

ತನ್ನ ಜವಾಬ್ದಾರಿಯನ್ನು ಮರೆತು ನಾಡಿನ ಸಾಮರಸ್ಯಕ್ಕೆ ಧಕ್ಕೆ ತರುವ ಹಲವಾರು ಹೇಳಿಕೆಗಳನ್ನು ಹರೀಶ್ ಪೂಂಜಾ ಹಿಂದೆಯೂ ಬಹಳಷ್ಟು ಸಲ ಹೇಳಿದ್ದಾರೆ. ಇವರ ವಿರುದ್ಧ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಿಗೆ ದೂರು ನೀಡಿದರೂ ಇಂದಿನವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ಇಂದು ಇಂತಹ ದೇಶದ್ರೋಹಿ ಹೇಳಿಕೆಗಳನ್ನು ಮುಂದುವರೆಸಿದ್ದಾರೆ. ಅದ್ದರಿಂದ ಕೂಡಲೇ ಜಿಲ್ಲಾಡಳಿತ ಅವರ ವಿರುದ್ಧ ದೂರು ದಾಖಲಿಸಬೇಕು. ಹಾಗೂ ವಿಧಾನಸಭಾ ಅಧ್ಯಕ್ಷರು ಹರೀಶ್ ಪೂಂಜಾ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಸದನದ ಘನತೆಯನ್ನು, ಗೌರವವನ್ನು ಕಾಪಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.



Join Whatsapp