ಶಿವಮೊಗ್ಗ: ವಿಶ್ವನಾಥ್ ಶೆಟ್ಟಿಯ ಪಾಳುಬಿದ್ದ ಮನೆ ಸ್ವಚ್ಛಗೊಳಿಸಿದ ಮುಸ್ಲಿಮ್ ಯುವಕರು

Prasthutha|

ಶಿವಮೊಗ್ಗ: ತೀರ್ಥಹಳ್ಳಿ ರಸ್ತೆಯ ಗಾಜನೂರು ಬಳಿ 2015ರಲ್ಲಿ ಕೋಮುದ್ವೇಷಕ್ಕೆ ಜೀವ ಕಳೆದುಕೊಂಡ ಬಜರಂಗದಳದ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿ ಅವರ ಆಲ್ಕೊಳದ ಪಾಳುಬಿದ್ದ ಮನೆಯನ್ನು ಸೋಮವಾರ ಮುಸ್ಲಿಂ ಯುವಕರು ಸ್ವಚ್ಛಗೊಳಿಸಿದರು.

- Advertisement -

ಏಳು ವರ್ಷಗಳ ಹಿಂದೆ ಗಾಜನೂರಿನಲ್ಲಿ ವಾಹನವೊಂದನ್ನು ತಡೆದ ಗುಂಪು ಹಾಗೂ ವಾಹನದಲ್ಲಿದ್ದ ಜನರ ನಡುವೆ ಭಾರೀ ಘರ್ಷಣೆ ನಡೆದಿತ್ತು. ಈ ವೇಳೆ ಗುಂಪಿನಲ್ಲಿದ್ದ ವಿಶ್ವನಾಥ್ ಶೆಟ್ಟಿ ಅವರ ಹತ್ಯೆ ನಡೆದಿತ್ತು.

ಎರಡು ವರ್ಷಗಳ ಹಿಂದೆ ಅವರ ತಂದೆ ವಸಂತಶೆಟ್ಟಿ ಮೂಳೆ ಕ್ಯಾನ್ಸರ್ ನಿಂದ ಮೃತಪಟ್ಟ ಬಳಿಕ ತಾಯಿ ಮೀನಾಕ್ಷಿ ಅವರು ಚಿಂದಿ ಆಯ್ದು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬಂದ ಹಣದಲ್ಲಿ ಒಬ್ಬನೇ ಮೊಮ್ಮಗನನ್ನು (ವಿಶ್ವನಾಥ್ ಅವರ ಪುತ್ರ) ಓದಿಸಲು ಹೆಣಗಾಡುತ್ತಿದ್ದಾರೆ. ವಿಧವಾ ವೇತನಕ್ಕಾಗಿ ಅಲೆದಾಡುತ್ತಿದ್ದಾರೆ.

- Advertisement -

ನಗರದ ಸಾಗರ ರಸ್ತೆಯ ಆಲ್ಕೊಳ, ನಂದಿನಿ ಬಡಾವಣೆಯ 5ನೇ ತಿರುವಿನಲ್ಲಿರುವ ಅವರ ಮನೆ ಪಾಳು ಬಿದ್ದಿದೆ. ಕಾಂಪೌಂಡ್ ಹೊರಗೆ ಕಸದ ರಾಶಿ ಇದೆ. ಪುಟ್ಟ ಮನೆಯ ಸಿಮೆಂಟ್ ಶೀಟ್ ಗಳ ಮೇಲೆ ಅರ್ಧ ಅಡಿಯಷ್ಟು ಮಣ್ಣು ಕೂತಿದೆ. ಮನೆಯ ಬಾಗಿಲುಗಳನ್ನು ಗೆದ್ದಲು ತಿಂದಿದೆ.

ಮೀನಾಕ್ಷಿ ಅವರ ಸಂಕಷ್ಟ ಜೀವನದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ನೋಡಿದ ಸ್ಥಳೀಯರಾದ ಜಬೀಉಲ್ಲಾ ಅವರು ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್ ಅವರನ್ನು ಸಂಪರ್ಕಿಸಿ, ತಮ್ಮ ತಂಡದೊಂದಿಗೆ ಬಂದು ಮನೆಯ ಸ್ವಚ್ಛತಾ ಕಾರ್ಯವನ್ನು ನಡೆಸಿಕೊಟ್ಟಿದ್ದಾರೆ. ಇವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Join Whatsapp