ಬಿಜೆಪಿಯವರು ಚರ್ಚೆಗೆ ಸಿದ್ಧರಿದ್ದರೆ ವೇದಿಕೆ ಕಲ್ಪಿಸಲು ಸತೀಶ್ ಜಾರಕಿಹೊಳಿ ಸಿದ್ಧ: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಸತೀಶ್ ಜಾರಕಿಹೊಳಿ ಅವರು ಬಹಳ ಸ್ಪಷ್ಟವಾಗಿ ಇದು ನನ್ನ ವೈಯಕ್ತಿಕ ಅಭಿಪ್ರಾಯ. ಹಿಂದೂ ಎಂಬ ಪದ ನಮ್ಮ ದೇಶದ ಪದವಲ್ಲ ಇದಕ್ಕೆ ಬಿಜೆಪಿಯವರು ಒಪ್ಪುತ್ತಾರಾ ಎಂದು ಕೇಳಿದ್ದಾರೆ. ಈ ಬಗ್ಗೆ ಅವರು ಚರ್ಚೆಗೆ ಸಿದ್ಧ ಎಂದು ಅವರು ತಿಳಿಸಿದ್ದಾರೆ. ನನ್ನ ಅಧ್ಯಯನದ ಈ ವಿಚಾರಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪೂರಕ ಅಂಶಗಳನ್ನು ತಿಳಿಸಿದ್ದಾರೆ. ಬಿಜೆಪಿಯವರು ಅದರ ಬಗ್ಗೆ ಅವರ ಬಳಿ ಚರ್ಚೆ ಮಾಡದೇ ಅದನ್ನು ಪಕ್ಷಕ್ಕೆ ತಂದು ಹಿಂದೂ ವಿರೋಧಿ ಎಂದರೆ ಅದರಲ್ಲಿ ಅರ್ಥವೇನಿದೆ? ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

- Advertisement -


ವೈಯಕ್ತಿಕ ಹೇಳಿಕೆ ಆದರೂ ಅವರು ಕಾಂಗ್ರೆಸ್ ಕಾರ್ಯಾಧ್ಯಕ್ಷರು ಎಂದು ಕೇಳಿದ ಪ್ರಶ್ನೆಗೆ, ‘ರಮೇಶ್ ಕತ್ತಿ ಅವರು ಇದೇ ಪ್ರತಿಪಾದನೆ ಮಾಡಿದ್ದರು. ಅವರು ಯಾವ ಪಕ್ಷದವರು? ಈಗ ಅದೇ ನಿಯಮ ಅಲ್ಲೂ ಅನ್ವಯಿಸಬೇಕಲ್ಲವೇ? ಕಾಂಗ್ರೆಸ್ ಪಕ್ಷದ ನಿಲುವನ್ನು ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಬಿಜೆಪಿ ಅವರು ಚರ್ಚೆಗೆ ಸಿದ್ಧರಿದ್ದರೆ ವೇದಿಕೆ ಕಲ್ಪಿಸಲು ಸತೀಶ್ ಜಾರಕಿಹೊಳಿ ಅವರು ಸಿದ್ಧರಿದ್ದಾರೆ. ನಿಮ್ಮ 40% ಹಗರಣ, ಪಿಎಸ್ ಐ ಹಗರಣಗಳನ್ನು ಮುಚ್ಚಿಕೊಳ್ಳಲು ಈ ವಿಚಾರವಾಗಿ ಪ್ರತಿಭಟನೆ ಮಾಡಿದರೆ ಜನರು ಇದನ್ನು ನಂಬುವುದಿಲ್ಲ’ ಎಂದರು.


ಜಾರಕಿಹೊಳಿ ಅವರನ್ನು ನಿಮ್ಮ ಪಕ್ಷ ವಿರೋಧಿಸುತ್ತಿರುವುದೇಕೆ ಎಂದು ಕೇಳಿದಾಗ, ‘ಸತೀಶ್ ಜಾರಕಿಹೊಳಿ ಅವರು ನಮ್ಮ ಪಕ್ಷದವರಲ್ಲ ಎಂದು ನಮ್ಮ ಯಾವ ನಾಯಕರೂ ಹೇಳುತ್ತಿಲ್ಲ. ಸತೀಶ್ ಜಾರಕಿಹೊಳಿ ಅವರ ಅಧ್ಯಯನದ ಬಗ್ಗೆ ನಮಗೆ ಗೊತ್ತಿಲ್ಲ. ಅವರಿಂದ ಸ್ಪಷ್ಟೀಕರಣ ಪಡೆಯುತ್ತೇವೆ ಎಂದು ಹೇಳಿದ್ದಾರೆ. ಆದರೆ ಬಿಜೆಪಿಯಲ್ಲಿ ಯತ್ನಾಳ್ ಅವರ ಹೇಳಿಕೆಗೆ ಅವರು ನಮ್ಮ ಪಕ್ಷದವರೇ ಅಲ್ಲ ಎಂದು ಅರುಣ್ ಸಿಂಗ್ ಅವರು ಹೇಳಿದಂತೆ ಹೇಳುತ್ತಿಲ್ಲ. ಪಿಎಸ್ ಐ ಹಗರಣದಲ್ಲಿ ಬಿಜೆಪಿ ನಾಯಕರು ಸಿಕ್ಕಿಬಿದ್ದಾಗ ಅವರು ನಮ್ಮ ನಾಯಕರೇ ಅಲ್ಲ ಎಂದರು. ಈ ರೀತಿ ಸುತ್ತಿ ಬಳಸಿ ಮಾತನಾಡಿದರೆ ಅರ್ಥವಿಲ್ಲ. ಬಿಜೆಪಿಯವರು ಚರ್ಚೆಗೆ ಯಾಕೆ ಹೆದರುತ್ತಿದ್ದಾರೆ. ಅವರು ತಾವು ಮಾಡಿರುವ ಅಧ್ಯಯನದ ದಾಖಲೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದಾರೆ. ಅವರು ಆ ಪದ ಎಲ್ಲಿಂದ ಹುಟ್ಟಿ ಬಂದಿದೆ. ಅದರ ಅರ್ಥ ಏನು ಎಂದಷ್ಟೇ ಹೇಳಿದ್ದಾರೆ. ಅದರ ಬಗ್ಗೆ ಚರ್ಚೆ ಆಗಬೇಕು ಎಂದು ಹೇಳಿದ್ದಾರೆ’ ಎಂದರು.
ನಾನು ಶೂದ್ರ ಹಾಗೂ ಕಾಂಗ್ರೆಸ್ ನಾಯಕ ಎಂದು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ‘ಸತೀಶ್ ಜಾರಕಿಹೊಳಿ ಅವರು ಮೌಢ್ಯದಿಂದ ದೂರ ಉಳಿದು, ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ, ವೈಜ್ಞಾನಿಕ ಚಿಂತನೆಗಳನ್ನು ನಂಬಿರುವ ನಾಯಕರು. ಇದೇ ಸತೀಶ್ ಜಾರಕಿಹೊಳಿ ಅವರು ಸ್ಮಶಾನದಲ್ಲಿ ಹೋಗಿ ಮಲಗಿದಾಗ ಇಂತಹ ವೈಜ್ಞಾನಿಕ ಚಿಂತನೆ ವ್ಯಕ್ತಿಗಳು ಇರಬೇಕು ಎಂದು ಹೇಳುತ್ತೀರ. ಈಗ ಒಂದು ಪ್ರಶ್ನೆ ಕೇಳಿದ್ದು, ಅದರಲ್ಲಿ ಏನಿದೆ ಎಂದು ಚರ್ಚೆ ಆಗಲಿ. ಅದರಲ್ಲಿ ತಪ್ಪಿದ್ದರೆ ಕ್ಷಮೆ ಕೇಳುತ್ತಾರೆ’ ಎಂದರು.

- Advertisement -

ಆದರೆ ಬಿಜೆಪಿಯವರು ಇದು ಹಿಂದುಗಳಿಗೆ ಮಾಡಿರುವ ಅಪಮಾನ ಎಂದು ಹೇಳುತ್ತಿದ್ದಾರೆ ಎಂದು ಕೇಳಿದಾಗ, ‘ಬಿಜೆಪಿಯವರಿಗೆ ನಂಬಿಕೆ ಇರುವುದು ಮನುಸ್ಮೃತಿ ಮೇಲೆ. ಅವರಿಗೆ ಚತುರ್ವರ್ಣ ವ್ಯವಸ್ಥೆ ಮೇಲೆ ವಿಶ್ವಾಸ ಇದೆ. 2022ರಲ್ಲೂ ಅವರ ನೀತಿ ನೋಡಿದರೆ ಅದು ತಿಳಿಯುತ್ತದೆ. ನಾನು ಆರ್ ಎಸ್ಎಸ್ ನವನು. ಮುಂದೊಂದು ದಿನ ದಲಿತರು ಮುಸಲ್ಮಾನರು ಆರ್ ಎಸ್ಎಸ್ ತತ್ವವನ್ನು ಒಪ್ಪುತ್ತಾರೆ ಎಂದು ವಿಧಾನಸಭೆ ಸ್ಪೀಕರ್ ಅವರೇ ಹೇಳುತ್ತಾರೆ. ಯಾವ ತತ್ವ ಸಿದ್ಧಾಂತದಲ್ಲಿ ಸಮಾನತೆ ಇಲ್ಲದಾಗ ಆ ಸಿದ್ಧಾಂತ ನಮಗೇಕೆ ಬೇಕು? ನಮಗೆ ಸಂವಿಧಾನ ಇದೆಯಲ್ಲ. ಇಲ್ಲಿ ಚರ್ಚೆಗೆ ಆಹ್ವಾನ ಮಾಡಿದ್ದು, ಚರ್ಚೆ ಮಾಡಲಿ’ ಎಂದರು.


ಈ ಚರ್ಚೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಒಬ್ಬರೇ ಎದುರಿಸಬೇಕೋ ಅಥವಾ ಕಾಂಗ್ರೆಸ್ ಪಕ್ಷ ಅವರ ಬೆನ್ನಿಗೆ ನಿಲ್ಲುವುದೋ ಎಂಬ ಪ್ರಶ್ನೆಗೆ, ‘ಇದು ನನ್ನ ವೈಯಕ್ತಿಕವಾದ ಹೇಳಿಕೆಯೇ ಹೊರತು ಪಕ್ಷದ ಹೇಳಿಕೆಯಲ್ಲ ಎಂದು ಸತೀಶ್ ಜಾರಕಿಹೊಳಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ತನ್ನ ಭ್ರಷ್ಟಾಚಾರದ ಹುಳುಕು ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ’ ಎಂದರು.
ಚಿತ್ತಾಪುರದಲ್ಲಿ ತಾವು ಕಾಣೆಯಾಗಿದ್ದೀರಿ ಎಂದು ಪೋಸ್ಟರ್ ಅಂಟಿಸಿರುವ ಬಗ್ಗೆ ಕೇಳಿದಾಗ, ‘ಬಿಜೆಪಿಯವರು ಈ ಪೋಸ್ಟರ್ ಅಂಟಿಸಿದ್ದು, ಅವರಿಗೆ ನಾನು ಉತ್ತರ ಕೊಡಬೇಕಾ? ಅವರಿಗೆ ಪೇಸಿಎಂ ಅಭಿಯಾನದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ನಾನು ಕಾಣೆಯಾಗಿದ್ದೇನೋ ಅಲ್ಲವೋ ಎಂದು ಮಾಧ್ಯಮದವರಿಗೆ ಗೊತ್ತಿದೆ. ಭಾರತ ಜೋಡೋ ಯಾತ್ರೆ, ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ವಿಚಾರವಾಗಿ ಕೆಲಸ ಮಾಡುತ್ತಿದ್ದೆ. ನಾನು ಬಿಜೆಪಿಯವರಿಗೆ ಉತ್ತರ ನೀಡುವ ಪರಿಸ್ಥಿತಿ ಬಂದಿಲ್ಲ. ನಾನು ಉತ್ತರ ನೀಡಬೇಕಿರುವುದು ಕೇವಲ ಚಿತ್ತಾಪುರ ಕ್ಷೇತ್ರದ ಮಹಾಜನತೆಗೆ ಮಾತ್ರ. ನನ್ನ ಕಾರ್ಯವೈಖರಿ ಸರಿಯಿಲ್ಲ ಎಂದರೆ ಅವರು ನನಗೆ ಗೇಟ್ ಪಾಸ್ ನೀಡುತ್ತಾರೆ. ಕಳೆದ ಒಂದು ತಿಂಗಳಿಂದ ಸಂವಿಧಾನ ಪರವಾಗಿ, ನಿರುದ್ಯೋಗ ವಿರುದ್ಧ ಕೋಮು ಸೌಹಾರ್ದತೆ ಪರವಾಗಿ, ರಾಜ್ಯ ಹಾಗೂ ಸಂವಿಧಾನದ ಪರವಾಗಿ 511 ಕಿ.ಮೀ ನಡೆಯುತ್ತಿದ್ದೆ. ಕೋಲಿ ಸಮಾಜವನ್ನು ಎಸ್ ಟಿ ವಿಭಾಗಕ್ಕೆ ಸೇರಿಸಬೇಕು ಎಂದು ದೆಹಲಿಯಲ್ಲಿ ನಾಲ್ಕು ದಿನ ಓಡಾದಿದ್ದೇನೆ. ಇವರು ಮಾಡಬೇಕಾದ ಕೆಲಸ ನಾನು ಮಾಡುತ್ತಿದ್ದೇನೆ. ಇವರು ಕೆಲಸ ಮಾಡಲಾಗದವರು ಮೈ ಪರಚಿಕೊಂಡರು ಎನ್ನುವಂತೆ ಮಾತನಾಡುತ್ತಿದ್ದಾರೆ. ಕಲಬುರ್ಗಿ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಹೆಚ್ಚಾಗಿದೆಯೋ ಅಥವಾ ಬಿಜೆಪಿ ಕೊಡುಗೆ ಹೆಚ್ಚಾಗಿದೆಯೋ ಎಂಬ ಚರ್ಚೆಗೆ ನಾವು ಸಿದ್ಧವಿದ್ದೇವೆ’ ಎಂದರು.

Join Whatsapp