ಪ್ರೊ ಕಬಡ್ಡಿ ಲೀಗ್‌| 9ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ

Prasthutha|

ಬೆಂಗಳೂರು: 12 ತಂಡಗಳು ಭಾಗವಹಿಸಲಿರುವ ಪ್ರೊ ಕಬಡ್ಡಿ ಲೀಗ್‌ನ ಒಂಬತ್ತನೇ ಆವೃತ್ತಿಯ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದೆ. ಅಕ್ಟೋಬರ್ 7ರಂದು ʻಮ್ಯಾಟ್‌ ಕಬಡ್ಡಿʼ ಆರಂಭವಾಗಲಿದ್ದು, ಮೊದಲ ಹಂತದ ಪಂದ್ಯಗಳು ಅಕ್ಟೋಬರ್‌ 7 ರಿಂದ 26ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

- Advertisement -

ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಮತ್ತು ಯು ಮುಂಬಾ ಮುಖಾಮುಖಿಯಾಗಲಿವೆ. ಅದೇ ದಿನ ನಡೆಯುವ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ತೆಲುಗು ಟೈಟನ್ಸ್‌ ಸವಾಲು ಎದುರಾಗಲಿದೆ. ಮೊದಲ ಮೂರು ದಿನ, ಪ್ರತಿನಿತ್ಯ ತಲಾ ಮೂರು ಪಂದ್ಯಗಳು ನಡೆಯಲಿವೆ.  

ಎರಡನೇ ಹಂತದಲ್ಲಿ ಪುಣೆಯ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ಅಕ್ಟೋಬರ್‌ 28ರಿಂದ ನವೆಂಬರ್‌ 7ರವರೆಗೆ ಪಂದ್ಯಗಳು ನಡೆಯಲಿದೆ. ಕೋವಿಡ್‌ ಕಾರಣದಿಂದಾಗಿ ವಿಧಿಸಲಾಗಿದ್ದ ಹಲವು ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ಹೀಗಾಗಿ ಈ ಬಾರಿ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ದೊರೆಯಲಿದೆ. ಮೊದಲಾರ್ಧದಲ್ಲಿ ಒಟ್ಟು 66 ಪಂದ್ಯಗಳು ನಡೆಯಲಿದ್ದು, ಲೀಗ್‌ನ ದ್ವಿತೀಯಾರ್ಧದ ವೇಳಾಪಟ್ಟಿ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಪ್ರಕಟವಾಗಲಿದೆ.

Join Whatsapp