ಪ್ರಚೋದನಕಾರಿ ಭಾಷಣಕ್ಕೆ ಕುಖ್ಯಾತಿ ಪಡೆದಿರುವ ಚಕ್ರವರ್ತಿ ಸೂಲಿಬೆಲೆ, ಮುಸ್ಲಿಮ್ ಅನುಯಾಯಿಗಳ ಈದ್ ಮಿಲಾದ್ ಮೆರವಣಿಗೆಯ ವೀಡಿಯೋ ಒಂದನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಆ ಮೆರವಣಿಗೆಯ ಮಧ್ಯೆ ಬಾಲಕನೊಬ್ಬ ಭಗವಾ ಧ್ವಜ ಹಿಡಿದುಕೊಂಡು ಸಾಗುವ ದೃಶ್ಯವಿದ್ದು, ಟ್ವೀಟ್ ನಲ್ಲಿ ಸಂಖ್ಯೆ ಕಡಿಮೆಯಿದೆಯೆಂದು ಹೆದರಬೇಡಿ, ಕುರಿಗಳು ಹಿಂಡಾಗಿ ಇರುವಾಗಲೂ ಸಿಂಹ ಏಕಾಂಗಿಯಾಗಿ ಸಾಗುತ್ತದೆ ಎಂಬ ಪ್ರಚೋದನಕಾರಿ ಒಕ್ಕಣೆ ಹಾಕಿದ್ದರು.
ಮುಸ್ಲಿಮರ ಮೆರವಣಿಗೆಯ ಮಧ್ಯೆ ಈ ರೀತಿ ಸಾಗಿ ಶಾಂತಿ ಕದಡಬೇಕೆನ್ನುವುದು ಅವರ ಟ್ವೀಟ್ ನ ಉದ್ದೇಶವಾಗಿದೆ ಎನ್ನುವುದು ಆ ಟ್ವೀಟನ್ನು ನೋಡಿದ ಯಾರಿಗೂ ಅರ್ಥವಾಗದೇ ಇರದು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಐಪಿಎಸ್ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್, ಸಣ್ಣ ಮಕ್ಕಳನ್ನು ಈ ರೀತಿ ಪ್ರಚೋದಿಸುವುದು ಸರಿಯಲ್ಲ. ಈ ಮೂಲಕ ಏನು ಸಂದೇಶವನ್ನು ಕೊಡಲು ಬಯಸಿದ್ದೀರಾ? ಧನಾತ್ಮಕ ವಿಷಯಗಳನ್ನು ಹಂಚಿ ಎಂದು ಉತ್ತರಿಸಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಮೋದಿ ಬಗೆಗಿನ ತನ್ನ ಹಸಿ ಸುಳ್ಳುಗಳ ವೀಡಿಯೋ ಭಾಷಣಗಳಿಗೆ ಕುಖ್ಯಾತಿ ಪಡೆದಿರುವವರಾಗಿದ್ದಾರೆ. ಸೂಲಿಬೆಲೆಯ ಈ ರೀತಿಯ ವೀಡಿಯೋಗಳನ್ನು ಹಲವರು ವ್ಯಂಗ್ಯಭರಿತ ಧಾಟಿಯಲ್ಲಿ ಟ್ರೋಲ್ ಗೂ ಬಳಸಿಕೊಂಡಿದ್ದಾರೆ.