ಲಖಿಂಪುರ ರೈತರ ಹತ್ಯೆ ಬೆದರಿಕೆಯ ಹೊಸ ಸ್ವರೂಪ

Prasthutha|

ಉತ್ತರ ಪ್ರದೇಶದ ಲಖಿಂಪುರದಲ್ಲಿ ಒಕ್ಕೂಟ ಸರಕಾರದ ಸಚಿವರ ಮಗ ಮತ್ತು ಇತರರು ಬೆಂಗಾವಲು ವಾಹನವನ್ನು ಪ್ರತಿಭಟನಾನಿರತ ರೈತರ ಮೇಲೆ ಹರಿಸಿರುವುದು ಪ್ರಭುತ್ವದ ದಬ್ಬಾಳಿಕೆಯ ಹೊಸ ತಂತ್ರದಂತೆ ಭಾಸವಾಗುತ್ತಿದೆ. ದಿನಂಪ್ರತಿ ಸರಕಾರಿ ಪ್ರೇರಿತ ಹಿಂಸಾಚಾರಗಳನ್ನು ನೋಡುತ್ತಿರುವ ದೇಶದ ಜನರು ಈ ಘಟನೆಯಿಂದ ಆತಂಕಕ್ಕೀಡಾಗಿರುವುದು ಸಹಜವೇ ಆಗಿದೆ. ಸರ್ವಾಧಿಕಾರಿ ಸರಕಾರ ಪೊಲೀಸರನ್ನು ತಮ್ಮ ಕೈಗೊಂಬೆಯಾಗಿ ಬಳಸುತ್ತಿರುವುದು ಮತ್ತು ಪೊಲೀಸರೇ ಏಕಾಏಕಿ ನಾಗರಿಕರ ಮೇಲೆ ಹಿಂಸಾಕೃತ್ಯದಲ್ಲಿ ಭಾಗಿಯಾಗುತ್ತಿರುವ ಘಟನೆಗಳನ್ನು ನಾವು ನೋಡುತ್ತಲೇ ಬಂದಿದ್ದೇವೆ. ಆದರೆ ಪೊಲೀಸ್ ಬೆಂಗಾವಲು ವಾಹನವನ್ನು ಹರಿಸಿ ರೈತರ ಮಾರಣಹೋಮ ನಡೆಸಿರುವುದು ಅನಿರೀಕ್ಷಿತವಾಗಿಯೇ ಇದೆ. ಮತ್ತು ಈ ಮೂಲಕ ಪ್ರಭುತ್ವದ ದಬ್ಬಾಳಿಕೆಯ ಹೊಸ ರೂಪಕ್ಕೆ ಮುನ್ನುಡಿ ಬರೆದಂತಿದೆ.

- Advertisement -


ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಒಕ್ಕೂಟ ಸರಕಾರದ ಸಹಾಯಕ ಗೃಹ ಸಚಿವ ಅಜಯ್ ಮಿಶ್ರಾ ಜತೆಗೂಡಿ ಭಾಗವಹಿಸುವ ಕಾರ್ಯಕ್ರಮ ಅಕ್ಟೋಬರ್ 3ರಂದು ಲಖಿಂಪುರ ಖೇರಿ ಬಳಿಯ ಟಿಕೂನಿಯಾದಲ್ಲಿ ನಡೆಯಬೇಕಿತ್ತು. ಆದರೆ ಅಕ್ಟೋಬರ್ 2ರಂದೇ ಇವರ ಕಾರ್ಯಕ್ರಮಕ್ಕೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ರೈತ ನಾಯಕರು ಕರೆಕೊಟ್ಟಿದ್ದರು. ಹಲವಾರು ತಿಂಗಳುಗಳಿಂದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರ ಪರವಾಗಿ ಧ್ವನಿ ನೀಡುವುದೇ ಇದರ ಉದ್ದೇಶವಾಗಿತ್ತು. ಹಾಗೆಯೇ 3 ರಂದು ಪಾಲಿಯಾ, ಭೀರ, ಬಿಜುವ, ಕಜೂರಿಯಾ ಮುಂತಾದ ಹಳ್ಳಿಗಳಿಂದ ಬಂದ ರೈತರು ಕೈಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸುತ್ತಾ ಟಿಕೂನಿಯಾ ಕಡೆಗೆ ಮೆರವಣಿಗೆ ನಡೆಸುತ್ತಿದ್ದರು.


ಆದರೆ ಏಕಾಏಕಿ ಹಿಂದಿನಿಂದ ಬಂದ ಬೆಂಗಾವಲು ವಾಹನ ಸೇರಿ ಕೆಲವು ವಾಹನಗಳು ರೈತರ ಮೇಲೆ ಹಾಯ್ದು ನಾಲ್ವರು ರೈತರು ಪ್ರಾಣ ಕಳೆದುಕೊಂಡರು. ಅದರಲ್ಲಿ ಒಬ್ಬ ರೈತ, ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಅವರ ಗುಂಡೇಟಿಗೆ ಬಲಿಯಾಗಿದ್ದಾರೆ. ರೈತರ ಮೇಲೆ ಹರಿದ ಕಾರಿನಲ್ಲಿ ಆಶಿಶ್ ಮಿಶ್ರಾ ಕೂಡ ಇದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನಾಲ್ವರು ರೈತರು ಜೀವ ಕಳೆದುಕೊಂಡರೆ, ಹಲವಾರು ರೈತರು ಗಾಯಗೊಂಡಿದ್ದಾರೆ. ನಂತರ ನಡೆದ ಗದ್ದಲದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

- Advertisement -


ಜೈ ಜವಾನ್, ಜೈ ಕಿಸಾನ್ ಎನ್ನುತ್ತಿದ್ದ ದೇಶ ಇವತ್ತು ರೈತರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದೆ. ಪ್ರತಿಭಟನಾನಿರತರನ್ನು ಕೊಲೆ ಮಾಡುವಷ್ಟು ಕ್ರೂರಿಯಾದ ಸರಕಾರಗಳು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕ ಎಂದೇ ಅರ್ಥ. ಆದರೆ ಈ ಘಟನೆಯು ದೇಶದಲ್ಲಿ ನಿರಂಕುಶ ಆಡಳಿತದ ಹೊಸ ಮಾದರಿಯನ್ನು ಹುಟ್ಟು ಹಾಕಲಿದೆ ಎಂಬುವುದೇ ಇಲ್ಲಿ ಆತಂಕಕ್ಕೀಡು ಮಾಡುವ ವಿಷಯವಾಗಿದೆ.
ಅಸಮ್ಮತಿಯ ಧ್ವನಿಗಳನ್ನು, ಹತ್ತಿಕ್ಕುತ್ತಲೇ ಇರುವ ಉತ್ತರ ಪ್ರದೇಶ ಸರಕಾರ ದೇಶಕ್ಕೆ ಹೊಸ ಹೊಸ ಕೆಟ್ಟ ಮಾದರಿಗಳನ್ನು ಪರಿಚಯಿಸುತ್ತಿದೆ. ಮುಖ್ಯಮಂತ್ರಿ ವಿರುದ್ಧ ಮಾತನಾಡಿದರೂ ದೇಶದ್ರೋಹ ಕೇಸುಗಳನ್ನು ಹಾಕಲಾಗುತ್ತಿದೆ. ಚುನಾವಣೆಗಳಲ್ಲಿಯೂ ಬೆದರಿಕೆಯ ತಂತ್ರಗಳನ್ನು ಬಳಸಲಾಗುತ್ತಿದ್ದು, ಮಹಿಳೆಯರನ್ನು ಬಲವಂತವಾಗಿ ಚುನಾವಣಾ ಕಣದಿಂದ ಹಿಂದೆ ಸರಿಸುವ ಪ್ರಯತ್ನಗಳು ಕೂಡ ನಡೆಯುತ್ತಿವೆ.


ಮುಸ್ಲಿಮ್ ಧ್ವನಿಗಳನ್ನು, ಮುಸ್ಲಿಮ್ ಹೋರಾಟಗಾರರನ್ನು ಯಾವುದೇ ಸಂದರ್ಭದಲ್ಲೂ ಬಂಧಿಸಿ, ಯುಎಪಿಎ ಕೇಸುಗಳನ್ನು ಹಾಕಲಾಗುತ್ತಿದೆ. ಹತ್ರಾಸ್ ಪ್ರಕರಣದಲ್ಲಿಯೂ ಪತ್ರಕರ್ತ ಸೇರಿದಂತೆ ವಿದ್ಯಾರ್ಥಿ ನಾಯಕರನ್ನು ಬಂಧಿಸಲಾಗಿದೆ. ಮುಸ್ಲಿಮರನ್ನು ಬಂಧಿಸಿ ಸರಕಾರ ಯಾವುದೇ ಆರೋಪ ಹೊರಿಸಿದರೂ ಅದನ್ನು ಅನುಮೋದಿಸಲು ಮಾಧ್ಯಮಗಳು ತಾವೇ ಪೈಪೋಟಿಗಿಳಿಯುತ್ತಿವೆ. ಆದರೆ ಈಗ ರೈತರ ಹೋರಾಟಗಳು ಒಕ್ಕೂಟ ಸರಕಾರ ಮತ್ತು ಉತ್ತರ ಪ್ರದೇಶದಂತಹ ಸರಕಾರಗಳಿಗೆ ಹೆಚ್ಚು ತಲೆನೋವು ತರಿಸುತ್ತಿದೆ. ಹಾಗಾಗಿ ಈ ರೀತಿಯ ಮಾರ್ಗವನ್ನು ಸರಕಾರ ಆಯ್ದುಕೊಂಡಿದೆ.


ಒಕ್ಕೂಟ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆಯುತ್ತವೆ. ಶಹೀನ್ ಬಾಗ್ ನಿಂದ ಸ್ಫೂರ್ತಿ ಪಡೆದಂತೆ ತೋರುತ್ತಿರುವ ರೈತರ ಜೋಪಡಿಗಳು ಹಲವಾರು ತಿಂಗಳುಗಳಿಂದಲೂ ಕಿಂಚಿತ್ತೂ ಕಳಚಿಲ್ಲ. ರೈತರ ಹೋರಾಟಗಳು ಕೂಡ ವಿವಿಧ ಮಾದರಿಗಳನ್ನು ವಿವಿಧ ಸ್ವರೂಪಗಳನ್ನು ಪಡೆಯುತ್ತಿವೆ. ಪ್ರಧಾನಿ ಮೋದಿ ತನ್ನ ಅಹಂಕಾರವನ್ನು ಪ್ರದರ್ಶಿಸುತ್ತಿರುವುದು ಒಂದೆಡೆಯಾದರೆ, ದೊಡ್ಡ ಮಟ್ಟದ ಪ್ರತಿರೋಧಗಳನ್ನು ಎದುರಿಸುತ್ತಿದ್ದಾರೆ. ಅಮೆರಿಕ ಭೇಟಿಯಲ್ಲೂ ತೀವ್ರ ಪ್ರತಿಭಟನೆಗಳನ್ನು ಎದುರಿಸಿರುವುದು, ಅಮೆರಿಕ ಅಧ್ಯಕ್ಷ, ಉಪಾಧ್ಯಕ್ಷರ ಪ್ರಜಾಪ್ರಭುತ್ವ, ಗಾಂಧಿ ಮಾರ್ಗದ ಪಾಠಗಳನ್ನು ಕೇಳಿ ಮುಖಭಂಗಕ್ಕೀಡಾಗಿರುವುದು ಸುಳ್ಳಲ್ಲ. ಹಾಗಾಗಿ ರೈತರನ್ನು ಬೆದರಿಸುವುದು ಮಾತ್ರವೇ ತಮಗಿರುವ ಮಾರ್ಗ ಎಂದು ಬಿಜೆಪಿ ತಿಳಿದುಕೊಂಡಿದೆ.


ರೈತರನ್ನು ಖಲಿಸ್ತಾನಿಗಳು, ಖಳನಾಯಕರು ಎಂಬಂತೆ ಬಿಂಬಿಸುವ ಪ್ರಯತ್ನ ಪದೇ ಪದೇ ವಿಫಲವಾಗುತ್ತಿದೆ. ಜೊತೆಗೆ ಹಲವು ರಾಜ್ಯಗಳ ಚುನಾವಣೆಗಳು ಮುಂದಿವೆ. ಹೀಗಾಗಿ ಬೆದರಿಕೆಯ ಸಾಮಾನ್ಯ ರೂಪಗಳು ಹೆಚ್ಚು ನಡೆಯುವ ಸಂಭವವಿದೆ. ಮುಸ್ಲಿಮರ ವಿಷಯದಲ್ಲಿ ಆರೋಪಿಸುವಾಗ ಮಾಧ್ಯಮಗಳಿಂದ ದೊರೆಯುವ ಸಹಕಾರ ರೈತರ ವಿಷಯದಲ್ಲಿ ಅಷ್ಟೇನೂ ಸಾಲದು. ಹಾಗಾಗಿ ರೈತರನ್ನು ಬೆದರಿಸಬೇಕು ಮತ್ತು ದಿನಂಪ್ರತಿ ಟೀಕಿಸುತ್ತಿರುವ ವಿರೋಧಿಗಳು ಧೈರ್ಯಗೆಡಬೇಕು. ಹಾಗಾಗಿ ಪ್ರತಿಭಟನಕಾರರನ್ನು ಸಾಯಿಸುವುದು ಮತ್ತು ಇತರರನ್ನು ಬೆದರಿಕೆಸುವುದು ಅವರಿಗಿರುವ ದಾರಿ.


ಪೊಲೀಸ್ ಲಾಠಿ, ಗೋಲಿಬಾರ್ ಗಳು ಹೆಚ್ಚು ಚರ್ಚೆಗಳಿಗೆ ಆಸ್ಪದವಾಗುತ್ತಿದೆ. ಮತ್ತು ಇವೇನೂ ಹೊಸ ತಂತ್ರವೂ ಅಲ್ಲ. ಲಾಠಿ, ಗುಂಡೇಟಿಗೆ ಜಗ್ಗದ ಮನಸ್ಥಿತಿ ಈಗಾಗಲೇ ಹೋರಾಟಗಾರರಲ್ಲಿದೆ. ಹಾಗಾಗಿ ಹೊಸ ಸ್ವರೂಪದ ಬೆದರಿಕೆಯನ್ನು ಆಯ್ಕೆ ಮಾಡಿದರೆ ಮಾತ್ರ ಹೋರಾಟಗಾರು ಸ್ವಲ್ಪ ಹಿಂಜರಿಯಬಹುದು ಎಂಬ ಮನಸ್ಥಿತಿ ಈ ಘಟನೆಯ ಹಿಂದಿದೆ.
ಉತ್ತರ ಪ್ರದೇಶ ಅಲ್ಲದೆ ಬೇರೆ ಯಾವುದೇ ರಾಜ್ಯಗಳು, ಹೋರಾಟಗಾರರನ್ನು ನಿರಂಕುಶವಾಗಿ ನಡೆಸಲು ಸಾಧ್ಯವಾಗುವುದಿಲ್ಲ. ಆದಿತ್ಯನಾಥರ ಯಾವುದೇ ಕೆಲಸಗಳನ್ನು ಧರ್ಮ ರಕ್ಷಣೆಯಲ್ಲಿ ಸ್ವೀಕರಿಸುವ ಮನಸ್ಥಿತಿ ವಿದ್ಯಾವಂತ ಭಕ್ತರಲ್ಲಿಯೂ ಇರುವುದರಿಂದ ಉತ್ತರ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ ಎಂದೇ ಹೇಳಬಹುದು. ಹಾಗಾಗಿ ಏಕಾಏಕಿ ಕಾರು ಹರಿಸಿ ರೈತರನ್ನು ಕೊಲ್ಲಲಾಯಿತು.
ಈ ಮಾದರಿಯು ಮುಂದೆ ಎಲ್ಲಾ ರಾಜ್ಯಗಳ ಪೊಲೀಸರಿಗೆ ಧೈರ್ಯ ತುಂಬುವ ಅಪಾಯವಿದೆ. ಮುಂದೆ ಬಿಜೆಪಿ ಸರಕಾರಗಳ ವಿರುದ್ಧ ಯಾವುದೇ ಪ್ರತಿಭಟನೆ ನಡೆದರೂ ಇಂತಹ ಸನ್ನಿವೇಶ ನಿರ್ಮಾಣವಾಗದು ಎಂದು ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಹಾಗಾಗಿ ಬೆದರಿಕೆಯ ಹೊಸ ತಂತ್ರಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಹೋರಾಟಗಳನ್ನು ಕಟ್ಟಬೇಕಾಗುತ್ತದೆ.


ಘಟನೆಯ ನಂತರ ಯಾವುದೇ ವಿರೋಧ ಪಕ್ಷಗಳ ನಾಯಕರನ್ನು ಭೇಟಿ ನೀಡಲು ಅವಕಾಶ ನೀಡದಿರುವುದು ಸರ್ವಾಧಿಕಾರದ ಹದ್ದುಮೀರಿದ ಸ್ಥಿತಿಯಾಗಿದೆ. ಅಹಂಕಾರದ ಪರಮಾವಧಿಯಾಗಿದೆ. ಪ್ರಿಯಾಂಕಾ ಗಾಂಧಿಯನ್ನು ತಡೆಯಲು ಬಳಸಿದ ಪೊಲೀಸರನ್ನು ನೋಡಿದಾಗ, ನ್ಯಾಯ, ಕಾನೂನಿನ ಅಲ್ಪಜ್ಞಾನವಾದರೂ ಅವರಿಗಿರಬಹುದಾ ಎಂಬ ಸಂಶಯ ಮೂಡುತ್ತದೆ. ತಾವು ದೇಶವನ್ನು ರಕ್ಷಿಸುತ್ತೇವೆ, ತಾವು ಮಹಾತ್ಸಾಧನೆ ಮಾಡುತ್ತಿದ್ದೇವೆ ಎಂಬಂತೆ ಭಾವಿಸುತ್ತಿರುವ ಪೊಲೀಸರು ಮಾನವೀಯತೆಯ ಲವಲೇಶವೂ ಇಲ್ಲದಂತೆ ವರ್ತಿಸುತ್ತಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಘಟನೆಗಳು ಸರ್ವೆ ಸಾಮಾನ್ಯವೆಂಬಂತೆ ನಡೆಯುತ್ತಿರುವುದು ಮುಂದಿನ ಭಾರತದ ಸೂಚಕದಂತೆಯೇ ಇದೆ. ಮನುವಾದಿ ಭಾರತದ ಸಂಕಲ್ಪನೆಯನ್ನು ಸಾಕಾರಗೊಳಿಸಲು ಪೊಲೀಸರು, ವಿಶೇಷವಾಗಿ ಉತ್ತರಪ್ರದೇಶ, ಅಸ್ಸಾಂ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ.


ತದನಂತರ ಕೇವಲ ಐದು ಜನರಿಗೆ ಮಾತ್ರ ಸಂತ್ರಸ್ತರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಯಿತು. ಮಾನವೀಯತೆಯ, ಸಂತಾಪ ಸೂಚಕದ ಭೇಟಿಯನ್ನು ಹಿಂಸೆಗೆ ಪ್ರಚೋದನೆ ಎಂಬಂತೆ ಬಿಂಬಿಸಲಾಗುತ್ತಿದ್ದರೂ ದೇಶದ ಮೌನ ಮುರಿಯುತ್ತಲೇ ಇಲ್ಲ. ಭ್ರಷ್ಟಾಚಾರಿ ನಾಯಕರನ್ನು ಬಂಧಿಸಿದಾಗ ಬೀದಿಗಿಳಿಯುವ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿ ವಾದ್ರಾ, ರಾಹುಲ್ ಗಾಂಧಿಯವರ ಅಗತ್ಯ ಹೋರಾಟಗಳಿಗೆ ಬೆಂಬಲವಾಗಿ ಬೀದಿಗಿಳಿಯದಿರುವುದೂ ವಿಪರ್ಯಾಸವೇ ಆಗಿದೆ. ಆರೆಸ್ಸೆಸ್, ಬಿಜೆಪಿ ವಿರುದ್ಧ ಹೋರಾಟದಲ್ಲಿ ರಾಹುಲ್ ಗಾಂಧಿಯ ಏಕಾಂಗಿತನ ಸ್ಪಷ್ಟವಾಗುತ್ತಿರುವುದು ಮತ್ತು ಇವುಗಳು ಕಾಂಗ್ರೆಸ್ ಎಡಬಿಡಂಗಿ ನೀತಿಗಳ ಪರಿಣಾಮಗಳೇ ಆಗಿವೆ.


ಇಂತಹ ಸನ್ನಿವೇಶಗಳನ್ನು ಒಗ್ಗಟ್ಟಾಗಿ ಹೋರಾಟಗಳನ್ನು ರೂಪಿಸದ ಕಾಂಗ್ರೆಸ್ ನ ನೀತಿಗಳು, ಅಖಿಲೇಶ್ ಯಾದವರ ಮೌನ, ಮಾಯಾವತಿಯವರ ಮೋಸಗಳು ದೇಶವನ್ನು ಮತ್ತಷ್ಟು ಅಧೋಗತಿಗಿಳಿಸುತ್ತಿದೆ. ಹೋರಾಟಗಳ ಮತ್ತು ಸ್ಪಷ್ಟ ದಾರಿಗಳ ಹುಡುಕಾಟಗಳಲ್ಲೂ ಸ್ಪಷ್ಟತೆಯ ಕೊರತೆ ಮತ್ತೊಮ್ಮೆ ಈ ಪಕ್ಷಗಳಲ್ಲಿ ಕಾಣಿಸುತ್ತಿವೆ. ಕಾಂಗ್ರೆಸ್, ಸಮಾಜವಾದಿ, ಬಿಎಸ್ಪಿ, ಪಕ್ಷಗಳಿಗೆ ಇನ್ನೂ ಉತ್ತರ ಪ್ರದೇಶದ ಭಯಾನಕ ಸನ್ನಿವೇಶಗಳು ಅರ್ಥವಾಗಿಲ್ಲವಾದರೆ ದೇಶದ ಜನತೆ ಸರಿಯಾದ ದಾರಿಯ ಆಯ್ಕೆ ಮಾಡಲೇಬೇಕಾಗಿದೆ.


ಅಸ್ಸಾಂನಲ್ಲಿ ನಡೆದ ಘಟನೆ ಮತ್ತು ಜೀವ ಹೋದ ದೇಹದ ಮೇಲೆ ಬೀಸಿದ ಲಾಠಿಗಳು, ರೈತರ ಮೇಲೆ ಹರಿದ ಕಾರಿನ ಚಕ್ರಗಳು, ಹತ್ರಾಸ್ ರೂಪದ ಘಟನೆಗಳು ನಮ್ಮನ್ನು ಸಂವೇದನೆಗೊಳಪಡಿಸದಿದ್ದರೆ ದೇಶವನ್ನು ಸಂಪೂರ್ಣವಾಗಿ ಕಳೆದುಕೊಂಡಂತೆಯೇ ಆಗುತ್ತದೆ. ರೈತರು, ಮುಸಲ್ಮಾನರು, ದಲಿತರು, ಕಾರ್ಮಿಕರು ಒಂದಾಗಿ ಹೋರಾಟಗಳನ್ನು ಮತ್ತು ಹೋರಾಟದ ರೂಪುರೇಷೆಗಳನ್ನು ತಯಾರಿಸಲೇಬೇಕಾದ ಅಗತ್ಯತೆ ಹಿಂದೆಂದಿಗಿಂತಲೂ ಹೆಚ್ಚಿದೆ. ಲಾಠಿ, ಗುಂಡೇಟು ಮತ್ತು ಹೊಸದಾಗಿ ಕಾರುಗಳು ಬೆದರಿಕೆಯ ಆಯುಧಗಳಾಗಿರುತ್ತಿದ್ದರೆ, ಅದನ್ನು ಹಿಮ್ಮೆಟ್ಟಿಸುವ ತಂತ್ರಗಾರಿಕೆ, ಶಕ್ತಿಯನ್ನು ಚಳುವಳಿಕಾರರು ಪಡೆಯಬೇಕಾಗಿದೆ. ಅಸಮ್ಮತಿಯ ಧ್ವನಿಗಳಿಗೂ ಹೊಸ ರೂಪಗಳನ್ನು ನೀಡಬೇಕಾಗಿದೆ.

Join Whatsapp