ಅಮೆರಿಕಾ ಚುನಾವಣೆಯಲ್ಲಿ ಹಸ್ತಕ್ಷೇಪ ಆರೋಪ: ಆರೆಸ್ಸೆಸ್ ವಿರುದ್ಧ ಅಮೆರಿಕಾದಲ್ಲಿ ಪ್ರತಿಭಟನೆ
Prasthutha: November 4, 2020

ವಾಶಿಂಗ್ಟನ್: ಅಮೆರಿಕ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪವನ್ನು ಖಂಡಿಸಿ ನಾಗರಿಕ ಹಕ್ಕು ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ಫ್ಯಾಶಿಸ್ಟ್ ಧಾರ್ಮಿಕ ಪ್ರಾಬಲ್ಯವಾದಿ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ದ ಅಮೆರಿಕಾದ ಅಂಗಸಂಘಟನೆಗಳು ಟಿಎಕ್ಸ್-22 ಜಿಲ್ಲೆಯ ಡೆಮಾಕ್ರಟಿಕ್ ಅಭ್ಯರ್ಥಿ ಪ್ರೆಸ್ಟನ್ ಕುಲಕರ್ಣಿ ಯೊಂದಿಗೆ ಹೊಂದಿರುವ ನಿಕಟ ಸಂಬಂಧದ ಕುರಿತು ಹೋರಾಟಗಾರರು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
1925ರಲ್ಲಿ ಸ್ಥಾಪನೆಗೊಂಡ ಆರೆಸ್ಸೆಸ್ ನಾಝಿಯಿಂದ ಪ್ರೇರಿತಗೊಂಡ ಸಂಘಟನೆಯಾಗಿದ್ದು ಅಮೆರಿಕಾದ ಕು ಕ್ಲುಕ್ಸ್ ಕ್ಲಾನ್ (ಕೆ.ಕೆ.ಕೆ) ಅನ್ನು ಹೋಲುತ್ತದೆ. ಜಾತಿ ಪ್ರಾಬಲ್ಯ, ಹಿಂದೂಯೇತರರಿಗೆ ಎರಡನೆ ದರ್ಜೆಯನ್ನು ನೀಡುವ ಹಿಂದುತ್ವ ಎಂಬ ಹೆಸರಿನ ತೀವ್ರಗಾಮಿ ರಾಷ್ಟ್ರೀಯವಾದವನ್ನು ಅದು ಪ್ರಚುರಪಡಿಸುತ್ತದೆ. ಆರೆಸ್ಸೆಸ್ ನ ತೀವ್ರಗಾಮಿ ಸಿದ್ಧಾಂತ ಮತ್ತು ಹಿಂಸೆ ಹಾಗೂ ಹತ್ಯಾಕಾಂಡಗಳನ್ನು ಪ್ರಚೋದಿಸುವುದಕ್ಕಾಗಿ ಮೂರು ಬಾರಿ ನಿಷೇಧಿಸಲಾಗಿದೆ. ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯನ್ನು ಕೊಂದಿರುವಾತ ಆರೆಸ್ಸೆಸ್ ನ ಸದಸ್ಯ ಎಂಬುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ.
“ಹಿಂದುತ್ವವನ್ನು ಹಿಂದೂಯಿಸಂ ಅಥವಾ ಭಾರತದೊಂದಿಗೆ ಜೋಡಿಸಿ ಗೊಂದಲಕ್ಕೊಳಗಾಗಬಾರದು. ನಮ್ಮ ಚುನಾವಣೆಯನ್ನು ನಾವು ನಿಯಂತ್ರಿಸುತ್ತೇವೆ, ನಮ್ಮ ಮತವನ್ನು ನಾವು ನಿಯಂತ್ರಿಸುತ್ತೇವೆ. ನಮ್ಮ ಅಭ್ಯರ್ಥಿಗಳನ್ನು ಖರೀದಿಸಲು ನಾವು ಆರೆಸ್ಸೆಸ್ ಗೆ ಅನುಮತಿಸುವುದಿಲ್ಲ” ಎಂದು ಆಫ್ರಿಕನ್ ಅಮೆರಿಕನ್ ಹೋರಾಟಗಾರ ಮತ್ತು ವೀಡಿಯೊ ಪತ್ರಕರ್ತ ಜಾಡಾ ಬರ್ನಾಡ್ ಹೇಳಿದ್ದಾರೆ. ಆರೆಸ್ಸೆಸ್ ಭಾರತದಲ್ಲಿ 400ಕ್ಕೂ ಅಧಿಕ ಹತ್ಯಾಕಾಂಡಗಳನ್ನು ನಡೆಸಿದೆ ಎಂದು ಅವರು ಹೇಳಿದ್ದಾರೆ. ತೀವ್ರಗಾಮಿ ರಾಷ್ಟ್ರವಾದಿ ಮೋದಿ ಸರಕಾರ ಆಮ್ನೆಸ್ಟಿ ಇಂಡಿಯಾದ ಸಿಬ್ಬಂದಿಗಳನ್ನು ಶಿಕ್ಷಿಸಿರುವುದನ್ನು ಅವರು ಖಂಡಿಸಿದ್ದಾರೆ.
“ಶ್ರೀ ಕುಲಕರ್ಣಿ ಆರೆಸ್ಸೆಸ್ಸನ್ನು ವಿರೋಧಿಸುವುದಿಲ್ಲ. ತಾನು ಆರೆಸ್ಸೆಸ್ ನ ಭಾಗವಲ್ಲ ಎಂದು ಅವರು ಹೇಳುತ್ತಾರೆ. ಆದರೆ ಅದನ್ನು ಖಂಡಿಸುವುದಿಲ್ಲ. ತಾನು ಆರೆಸ್ಸೆಸ್ ನ ಭಾಗವಲ್ಲವೆಂದು ಆತ ಸುಳ್ಳು ಹೇಳುತ್ತಿದ್ದಾರೆ. ಅವರ ಮಾವ ಆರೆಸ್ಸೆಸ್ ನ ಭಾಗವಾಗಿದ್ದಾರೆ. ಅವರ ಸೋದರ ಸಂಬಂಧಿ ಆರೆಸ್ಸೆಸ್ ನಲ್ಲಿದ್ದಾರೆ. ಅವರ ಅತ್ಯಂತ ದೊಡ್ಡ ಬೆಂಬಲಿಗ ಆರೆಸ್ಸೆಸ್ ನವರಾಗಿದ್ದಾರೆ. ತನ್ನ ಪಿತೃ ಸಮಾನವೆಂದು ಅವರು ಕರೆದುಕೊಳ್ಳೂವ ರಮೇಶ್ ಭುಟಾದ ಅಮೆರಿಕಾದಲ್ಲಿ ಅತ್ಯಂತ ಕ್ರಿಯಾಶೀಲ ಆರೆಸ್ಸೆಸ್ ಸದಸ್ಯ. ಆರೆಸ್ಸೆಸ್ ನೊಂದಿಗೆ ಸಂಬಂಧವಿಲ್ಲವೆಂದು ಅವರು ಸುಳ್ಳು ಹೇಳುತ್ತಿದ್ದಾರೆ” ಎಂದು ಪ್ರತಿಭಟನಕಾರರಲ್ಲೊಬ್ಬರಾದ ಎಂ.ಜೆ.ಖಾನ್ ಹೇಳಿದರು.
“30 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ರಶ್ಯಾ ಮತ್ತು ಚೀನಾ ನಮ್ಮ ರಾಜಕೀಯದ ಮೇಲೆ ಪ್ರಭಾವ ಬೀರುತ್ತಿದೆ ಎಂಬುದು ಸಾಬೀತಾಗಿತ್ತು. ದುರದೃಷ್ಟಕರವೆಂದರೆ ಅಮೆರಿಕಾ ಚುನಾವಣೆಯ ಮೇಲೆ ಆರೆಸ್ಸೆಸ್ ಪ್ರಭಾವ ಬೀರುತ್ತಿದೆ ಎಂಬುದು ಈಗ ಸಾಬೀತಾಗುತ್ತಿದೆ. ಅವರು ಇಲ್ಲಿ ಅಭ್ಯರ್ಥಿಗಳಿಗೆ ಹಣಕಾಸು ಮತ್ತು ಬೆಂಬಲವನ್ನು ನೀಡುತ್ತಿದ್ದಾರೆ, ತಮ್ಮ ಹಿಂಸೆಯ ದಾಖಲೆಯನ್ನು ಮರೆಸಲು ಪ್ರಯತ್ನಿಸುತ್ತಿದ್ದಾರೆ. ಭಾರತದಲ್ಲಿ ಬಿಜೆಪಿ, ಆರೆಸ್ಸೆಸ್ ಮಾಡಿರುವ ಹಿಂಸೆಗಳನ್ನು ಕ್ಷಮಿಸುವುದಕ್ಕಾಗಿ ಅಥವಾ ಮರೆಯುವುದಕ್ಕಾಗಿ ಅಮೆರಿಕಾದ ನೀತಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ” ಎಂದು ಸುಹೈಲ್ ಖಾನ್ ತಿಳಿಸಿದರು.
“ಅಮೆರಿಕಾದ ಚುನಾವಣೆಗಳಲ್ಲಿ ಆರೆಸ್ಸೆಸ್ ಮತ್ತು ಅದರ ಅಮೆರಿಕಾದ ಪ್ರತಿನಿಧಿಗಳ ಮಧ್ಯಸ್ಥಿಕೆಯು ಅಪಾಯಕಾರಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆರೆಸ್ಸೆಸ್ ನ ಇಲ್ಲಿನ ಪ್ರತಿನಿಧಿಗಳು ಹಣಕಾಸು ಒದಗಿಸುತ್ತಿರುವುದು ಅಪಾಯಕಾರಿಯಾಗಿದೆ ಮತ್ತು ಅದನ್ನು ತೀವ್ರವಾಗಿ ಖಂಡಿಸುವ ಅಗತ್ಯವಿದೆ” ಎಂದು ಶೈಖ್ ಉಬೈದ್ ಹೇಳಿದರು.
