ಸಚಿವ ಸ್ಥಾನದಿಂದ ಸುರೇಶ್ ಕುಮಾರ್ ಕೈಬಿಡಲು ಖಾಸಗಿ ಶಿಕ್ಷಣ ಸಂಸ್ಥೆಗಳ ಆಗ್ರಹ

Prasthutha|

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ ಪತ್ರ ಬರೆದಿದೆ.

- Advertisement -

ಸುರೇಶ್ ಕುಮಾರ್, ಅಧಿಕಾರ ಸ್ವೀಕರಿಸಿದ ಬಳಿಕ ಖಾಸಗಿ ಶಾಲೆಗಳ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಸರ್ಕಾರಿ, ಖಾಸಗಿ ಶಾಲಾ ಮಕ್ಕಳೆನ್ನದೆ ಎಲ್ಲಾ ಮಕ್ಕಳಿಗೂ ಹಸಿವು, ಅಪೌಷ್ಠಿಕತೆ ಇದ್ದೇ ಇರುತ್ತದೆ. ಆದರೆ ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಆಹಾರ ವಿತರಿಸುವುದು ಹಾಗೂ ಸರ್ಕಾರಿ ಶಾಲೆಗಳಿಗೆ ಸೇರಿದರೆ ಮಾತ್ರ ಎನ್ನುವ ನಡೆ ಅಮಾನವೀಯ. ಮಕ್ಕಳ ಹಸಿವನ್ನು ದೌರ್ಬಲ್ಯವಾಗಿ ದಾಖಲಾತಿಗೆ ಬಳಸಿಕೊಳ್ಳುವುದು ಕೆಳದರ್ಜೆಯ ಮನಸ್ಥಿತಿ ಎಂದು ಒಕ್ಕೂಟ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಆರೋಪಿಸಿ ಪತ್ರ ಬರೆದಿದೆ.

ಖಾಸಗಿ ಶಾಲಾ ಶುಲ್ಕ ವಿವಾದವನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸಿ ಬಹುತೇಕ ಖಾಸಗಿ ಶಾಲೆಗಳ ಮೇಲೆ ಸಾರ್ವಜನಿಕ ಆಕ್ರೋಶ ಹೆಚ್ಚುವಂತೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಬೇಕೆಂಬ ಮಹದಾಸೆಯಿಂದ ಶಾಲೆಗಳನ್ನ ಪ್ರಾರಂಭಿಸದೆ ಕೇವಲ ಹೆಸರಿಗೆ ಮಾತ್ರ ದಾಖಲಾತಿ ಪ್ರಾರಂಭಿಸಿ ಸರ್ಕಾರಿ ಶಾಲೆಗಳಲ್ಲಿ ಸೇರುವ ಹಾಗೂ ಈಗಾಗಲೇ ಇರುವ ಸುಮಾರು 40 ಲಕ್ಷ ಮಕ್ಕಳಿಗೆ ಶಿಕ್ಷಣ ನೀಡದೆ ವಂಚನೆ ಮಾಡಲಾಗುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡುತ್ತೇವೆ ಎಂದು ಸಚಿವರು ಸುಳ್ಳು ಹೇಳುತ್ತಿದ್ದಾರೆ. ಕಳೆದ ವರ್ಷ ಸುಮಾರು 40 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನೇ ನೀಡಿಲ್ಲ ಎಂಬ ಸತ್ಯ ಶಿಕ್ಷಣ ಇಲಾಖೆಯ ಸರ್ವೇಯಲ್ಲಿಯೇ ಬಯಲಾಗಿದೆ.

- Advertisement -

ಶಿಕ್ಷಕರಿಗೆ ಕೊರೊನಾ ವಾರಿಯರ್ಸ್ ಅಂತ ಘೋಷಣೆ ಮಾಡಲಾಗಿದೆ. ಆದರೆ ಇದುವರೆಗೂ ಸಹ ಯಾವುದೇ ಪ್ಯಾಕೇಜ್ ಮಾತ್ರ ಕೈ ಸೇರಿಲ್ಲ. ಖಾಸಗಿ ಶಾಲೆಗಳಿಗೆ ನೀಡಬೇಕಾದ ಆರ್ಟಿಇ ಶುಲ್ಕ ಮರುಪಾವತಿಯನ್ನ ವಿಳಂಬ ಮಾಡಲಾಗುತ್ತಿದೆ. ಇಂತಹ ಮನಸ್ಥಿತಿ ಉಳ್ಳ ಶಿಕ್ಷಣ ಸಚಿವರನ್ನು ಕೂಡಲೇ ವಜಾಗೊಳಿಸಿ ಎಂದು ಆರೋಪಿಸಿ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ ಸಚಿವ ಸುರೇಶ್ ಕುಮಾರ್ ವಿರುದ್ಧ ಪತ್ರ ಬರೆದಿದೆ.

Join Whatsapp