ಒತ್ತುವರಿ ತೆರವು ನೆಪದಲ್ಲಿ ಪೊಲೀಸರ ಪೈಶಾಚಿಕತೆ

Prasthutha|

ಹಿಂಸಾತ್ಮಕ ಮತ್ತು ಕ್ರೂರ ರೀತಿಯ ತೆರವಿಗೆ ಅಸ್ಸಾಮ್ ಮತ್ತೊಮ್ಮೆ ಸುದ್ದಿಯಾಗಿದೆ. ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ನೆಪದಲ್ಲಿ ಅಮಾಯಕ ಹಾಗೂ ಬಡ ಮುಸ್ಲಿಮರ ವಿರುದ್ಧ ಪ್ರಭುತ್ವ ತೋರಿದ ಬರ್ಬರ ಮತ್ತು ಪೈಶಾಚಿಕ ರೀತಿಯ ಕಾರ್ಯಾಚರಣೆ ಇಡೀ ದೇಶ ಬೆಚ್ಚುವಂತೆ ಮಾಡಿದೆ. ಮುಸ್ಲಿಮರೇ ಹೆಚ್ಚಿರುವ ಅಸ್ಸಾಮ್ ನ ದರಾಂಗ್ ಜಿಲ್ಲೆಯ ದೋಲ್ಪುರ ಮತ್ತು ಗೋರುಖುತಿ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದ ಅಲ್ಲಿನ ನಿವಾಸಿಗಳನ್ನು ಅತಿಕ್ರಮಣಕಾರರು ಎಂದು ಆರೋಪಿಸಿ ಅವರ ವಿರುದ್ಧ ಏಕಪಕ್ಷೀಯವಾಗಿ ಸರ್ಕಾರ ನಡೆದುಕೊಂಡಿದೆ. ತೆರವು ಕಾರ್ಯಾಚರಣೆಯ ವಿರುದ್ಧ ಪ್ರತಿಭಟಿಸಿದ ನಿರಾಯುಧ ಪ್ರತಿಭಟನಕಾರರ ಮೇಲೆ ಯದ್ವಾತದ್ವ ಗುಂಡು ಹಾರಿಸಲಾಗಿದೆ. ಪೊಲೀಸರ ದೌರ್ಜನ್ಯಕ್ಕೆ ಇಬ್ಬರು ಬಲಿಯಾಗಿ ನೂರಾರು ಮಂದಿ ಗಾಯಗೊಂಡಿದ್ದಾರೆ. ಇಡೀ ಗ್ರಾಮದ ಸುತ್ತ ಸುಮಾರು 1000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿ ಗ್ರಾಮಸ್ಥರಿಗೆ ದಿಗ್ಭಂಧನ ಹೇರಲಾಗಿತ್ತು. ಕಾರ್ಯಾಚರಣೆಯ ವೇಳೆ ಹಲವು ಯುವಕರು ಕಾಣೆಯಾಗಿದ್ದು, ಅವರ ಪತ್ತೆ ಇನ್ನೂ ಆಗಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ನಿರಂತರವಾಗಿ ಹಾಗೂ ವ್ಯವಸ್ಥಿತವಾಗಿ ದೌರ್ಜನ್ಯವೆಸಲಾಗುತ್ತಿದೆ.

- Advertisement -

ಈ ಹಿಂದೆಯೂ 2019ರ ಏಪ್ರಿಲ್ ತಿಂಗಳಲ್ಲಿ ಹೊಜಾಯಿ ಜಿಲ್ಲೆಯಲ್ಲಿಯೂ ಒತ್ತುವರಿ ತೆರವು ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ನಿರ್ದಾಕ್ಷಿಣ್ಯವಾಗಿ ನಡೆದುಕೊಳ್ಳಲಾಗಿತ್ತು. ಆಗ ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು. ಈಗ ನಡೆದ ಕಾರ್ಯಾಚರಣೆಯಲ್ಲಿಯೂ ನೂರಾರು ಮಂದಿ ನಿರಾಶ್ರಿತರಾಗಿದ್ದಾರೆ. ಬಾಂಗ್ಲಾದೇಶದಿಂದ ಬಂದವರು ಎಂಬ ಸುಳ್ಳು ನೆಪವೊಡ್ಡಿ ಅಸ್ಸಾಮ್ ಮುಸ್ಲಿಮರ ವಿರುದ್ಧ ಪೊಲೀಸರನ್ನು ಛೂ ಬಿಡಲಾಗಿದೆ. ಇಡೀ ತೆರವು ಕಾರ್ಯಾಚರಣೆಯನ್ನು ಕೋಮು ಆಧಾರದಲ್ಲಿ ನಡೆಸಲಾಗಿದ್ದು, ತನ್ನದೇ ಪ್ರಜೆಗಳ ಮೇಲೆ ಸರ್ಕಾರ ದೌರ್ಜನ್ಯವೆಸಗಿದೆ. ಭಾರತದ ಎಲ್ಲಾ ನಾಗರಿಕರು ಸಮಾನರು ಮತ್ತು ಎಲ್ಲರಿಗೂ ಭದ್ರತೆಯ ಖಾತರಿ ನೀಡಬೇಕು ಎಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಅಸ್ಸಾಮ್ ಸರ್ಕಾರ ನಡೆದುಕೊಂಡಿದೆ. ಅಸ್ಸಾಮ್ ನಲ್ಲಿ ಮುಸ್ಲಿಮ್ ವಿರೋಧಿ ಭಾವನೆಯನ್ನು ಮೂಡಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಸಿಎಎ-ಎನ್ ಆರ್ ಸಿ ಜಾರಿಗೊಳಿಸಿ ಮುಸ್ಲಿಮರನ್ನು ನಿರಾಶ್ರಿತರಾಗಿಸಲು ಪ್ರಯತ್ನಿಸಿದ ಬಿಜೆಪಿ ಸರ್ಕಾರ ಇದೀಗ ಅದರ ಮುಂದುವರಿದ ಭಾಗವಾಗಿ ಒತ್ತುವರಿ ತೆರವಿನ ನೆಪದಲ್ಲಿ ಮುಸ್ಲಿಮರನ್ನು ಒಕ್ಕಲೆಬ್ಬಿಸುತ್ತಿದೆ. ಇದು ಸರ್ಕಾರಿ ಪ್ರಾಯೋಜಿತ ಹಿಂಸಾಚಾರವಾಗಿದ್ದು, ಶಾಂತಿಯುತ ಪ್ರತಿಭಟನಕಾರರ ಮೇಲೆ ಪೊಲೀಸರು ಮೃಗೀಯವಾಗಿ ವರ್ತಿಸಿ ಹತ್ಯೆ ಮಾಡಿದ್ದಾರೆ. ಪೊಲೀಸರ ವಿರುದ್ಧ ಪ್ರತಿಭಟಿಸಿದ್ದಾರೆ ಎಂಬ ಕಾರಣಕ್ಕೆ ಮೊಯೀನ್ ಖಾನ್ ಎಂಬ ಮುಸ್ಲಿಮ್ ಪ್ರತಿಭಟನಕಾರನ ಎದೆಗೆ ಗುಂಡಿಕ್ಕಿ ಪೊಲೀಸರು ಹತ್ಯೆ ಮಾಡಿದ್ದಾರೆ. ಪೊಲೀಸರೊಂದಿಗೆ ಇದ್ದ ಹಿಂದುತ್ವ ಛಾಯಾಗ್ರಾಹಕನೋರ್ವ ಮೃತ ಶರೀರಕ್ಕೆ ಬೂಟುಗಾಲಿನಿಂದ ತುಳಿದಿದ್ದಾನೆ. ಮೃತಪಟ್ಟ ವ್ಯಕ್ತಿಯ ಶವದ ಮೇಲೆ ಕಾಲಿಡುವಂತಹ ಮನಸ್ಥಿತಿ ಪತ್ರಕರ್ತನೊಬ್ಬನಲ್ಲಿ ಹಾಸುಹೊಕ್ಕಾಗಿರುವುದು ನಮ್ಮ ಸಮಾಜ ಯಾವ ದಿಕ್ಕಿನತ್ತ ತೆರಳುತ್ತಿದೆ ಎಂಬುದರ ಸೂಚನೆಯಾಗಿದೆ.


ಕಳೆದ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಬಳಿ ಯಾವ ಅಭಿವೃದ್ಧಿ ವಿಷಯವೂ ಇರಲಿಲ್ಲ. ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಅಸ್ಸಾಮ್ ನಿಂದ ಹೊರದಬ್ಬುತ್ತೇವೆ ಎಂದು ಬಿಜೆಪಿ ಚುನಾವಣೆಯ ಸಂದರ್ಭದಲ್ಲಿ ಹೇಳಿತ್ತು. ಈಗ ನಡೆಯುತ್ತಿರುವ ಒತ್ತುವರಿ ತೆರವು ಕೂಡ ಅದರ ಮುಂದುವರಿದ ಭಾಗ ಎಂದೇ ಹೇಳಬೇಕಾಗುತ್ತದೆ. ಹೈಕೋರ್ಟ್ ಸ್ಪಷ್ಟವಾಗಿ ಇನ್ನು ಮುಂದೆ ಯಾವುದೇ ತೆರವು ನಡೆಸಬಾರದು ಎಂದು ಸೂಚಿಸಿದ್ದರೂ ಸರ್ಕಾರ ನ್ಯಾಯಾಂಗದ ಆದೇಶವನ್ನು ಧಿಕ್ಕರಿಸಿ ತೆರವು ಕಾರ್ಯಕ್ಕೆ ಹೈಹಾಕಿದೆ. ಒಂದು ಶಾಲೆ, ಒಂದು ಮದ್ರಸ ಹಾಗೂ ಮೂರು ಮಸೀದಿಗಳನ್ನೂ ಧ್ವಂಸಗೊಳಿಸಲಾಗಿದೆ. ಇಲ್ಲೇ ಹುಟ್ಟಿ ಬೆಳೆದ ಬಂಗಾಳಿ ಮಾತನಾಡುವ ಜನರನ್ನು ಒಕ್ಕಲೆಬ್ಬಿಸಿ ಆ ಜಾಗವನ್ನು ಸ್ಥಳೀಯರಿಗೆ ಕೃಷಿ ಮಾಡಲು ನೀಡುತ್ತೇವೆ ಎಂಬ ಸರ್ಕಾರದ ಹೇಳಿಕೆ ಅವಿವೇಕತನದಿಂದ ಕೂಡಿದೆ.

- Advertisement -

ಅಸ್ಸಾಮ್ ಸರ್ಕಾರದ ಈ ಕ್ರೂರ ಕಾರ್ಯಾಚರಣೆಯ ವಿರುದ್ಧ ಮಾನವ ಹಕ್ಕು ಆಯೋಗ ಧ್ವನಿ ಎತ್ತಬೇಕಾಗಿದೆ. ಅದೇ ರೀತಿ ನಾಗರಿಕ ಸಮಾಜ ಇಂತಹ ಸಂದರ್ಭದಲ್ಲಿ ವೌನವಹಿಸುವುದು ತರವಲ್ಲ. ಏಕೆಂದರೆ ಫ್ಯಾಶಿಸ್ಟ್ ಶಕ್ತಿಗಳು ಪ್ರಬಲವಾದರೆ ಇದರ ದುಷ್ಪರಿಣಾಮವನ್ನು ಎಲ್ಲಾ ನಾಗರಿಕರು ಎದುರಿಸಬೇಕಾಗುತ್ತದೆ. ಎನ್ ಆರ್ ಸಿ ಮೊದಲು ಅಸ್ಸಾಮ್ ನಲ್ಲಿ ಜಾರಿಗೊಳಿಸಲಾಯಿತು. ಬಳಿಕ ಅದನ್ನು ಇಡೀ ದೇಶದ ಮೇಲೆ ಹೇರುವ ಪ್ರಯತ್ನ ನಡೆಯಿತು. ಇದೇ ರೀತಿ ಮುಂದಿನ ದಿನಗಳಲ್ಲಿ ಬೇರೆ ಬೇರೆ ನೆಪಗಳನ್ನು ಮುಂದಿಟ್ಟು ಈ ಕಾರ್ಯಾಚರಣೆ ದೇಶದ ಇತರೆಡೆಗೂ ಹರಡಿದರೆ ಅಚ್ಚರಿಪಡಬೇಕಿಲ್ಲ. ಅದಕ್ಕೂ ಮೊದಲು ಜನ ಎಚ್ಚೆತ್ತುಕೊಳ್ಳಬೇಕಾಗಿದೆ. ಪೊಲೀಸರ ಗುಂಡಿಗೆ ಬಲಿಯಾದ ಅಮಾಯಕರ ಕುಟುಂಬದವರಿಗೆ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು. ತಕ್ಷಣ ತೆರವು ಕಾರ್ಯಾಚರಣೆಯನ್ನು ಕೈಬಿಟ್ಟು ನಿರಾಶ್ರಿತರಾದವರಿಗೆ ಪರ್ಯಾಯ ವ್ಯವಸ್ಥೆಯನ್ನು ಒದಗಿಸಿಕೊಡಬೇಕು. ಪ್ರತಿಭಟನಕಾರರ ಮೇಲೆ ದೌರ್ಜನ್ಯವೆಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಪೊಲೀಸ್ ದೌರ್ಜನ್ಯದ ತನಿಖೆಯನ್ನು ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ನೇತತ್ವದಲ್ಲಿ ನಡೆಸಬೇಕು. ಹಾಗಾದರೆ ಮಾತ್ರ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಲು ಸಾಧ್ಯ. ಸದಾ ಕೋಮು ದೃಷ್ಟಿಕೋನದಿಂದಲೇ ಚಿಂತಿಸುವ ಬಿಜೆಪಿ ಸರ್ಕಾರದಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ?

Join Whatsapp