ಗಾಂಧೀ ಸ್ಮರಣೆ ಮತ್ತು ವರ್ತಮಾನದ ಬಿಡಿ ಚಿತ್ರಗಳು

Prasthutha|

ಅಕ್ಟೋಬರ್ 2 ಎಂದಿನಂತೆ ಗಾಂಧೀ ಜಯಂತಿಯ ಸರಕಾರಿ ಸಂಭ್ರಮ, ಗಾಂಧೀಜಿಯ ಪರಂಪರಾಗತ ಅನುಯಾಯಿಗಳ ಅವಿಮರ್ಶಾತ್ಮಕ ಸ್ಮರಣೆಗಳು ನಡೆದು ಹೋಗುತ್ತವೆ. ಇದರ ಜೊತೆ ಗಾಂಧಿ ವಿರೋಧಿಗಳ ಅಬ್ಬರದ ಟೀಕೆಗಳು ಮುಗಿಲು ಮುಟ್ಟುತ್ತವೆ. ಸರಕಾರಿ ಸಂಭ್ರಮಗಳಿಗೆ ಈ ಹಿಂದೆಯೂ ಯಾವ ಅರ್ಥಗಳಿರಲಿಲ್ಲ, ಈಗಲೂ ಅವು ಹಾಗೆಯೇ ನಡೆದು ಮುಗಿದು ಹೋಗುತ್ತವೆ. ಇನ್ನು ಹಳಹಳಿಕೆಯ ಯಾಂತ್ರಿಕ ಗಾಂಧಿ ಸ್ಮರಣೆಗಳಿಗೆ ವರ್ತಮಾನ ಮುಖ್ಯವಾಗುವುದೇ ಇಲ್ಲ.

- Advertisement -

ಸಾಮಾನ್ಯರಿಗೆ ಅನಾಯಾಸವಾಗಿ ನಿಲುಕಿಬಿಡುವ ಗಾಂಧೀಜಿಯ ಸರಳ ಬೌದ್ಧಿಕತೆಯನ್ನು ಇನ್ನೂ ಕಗ್ಗಂಟಾಗಿಸಿಬಿಡುವ ಕ್ಲೀಷೆಯ ಭಾಷಣಗಳನ್ನ ಈ ತಿಂಗಳಿಡೀ ಕೇಳಲೇಬೇಕು. ಇನ್ನು ಗಾಂಧಿಯನ್ನು ನಖಶಿಖ ದ್ವೇಷಿಸುವ ವರ್ಗದ ಬೈಗುಳಗಳೂ ಈ ಅಕ್ಟೋಬರ್ ಮಾಸದಲ್ಲಿ ಉತ್ತುಂಗಕ್ಕೇರಿಬಿಡುತ್ತವೆ.

ಎಲ್ಲೋ ವಕೀಲಿಕಿ ಮಾಡಿಕೊಂಡಿದ್ದ ಕರಮಚಂದ ಗಾಂಧಿ ಆಕಸ್ಮಿಕವಾಗಿ ಸಾರ್ವಜನಿಕ ಬದುಕಿಗೆ ಬಂದು ಸ್ವಾತಂತ್ರ್ಯ ಹೋರಾಟದ ಮುಂದಾಳಾಗಿ ರೂಪಾಂತರಗೊಂಡದ್ದು ಈಗ ಚರಿತ್ರೆ. ಗಾಂಧೀಜಿ ಹೀಗೆ ಸಾರ್ವಜನಿಕ ಬದುಕಲ್ಲಿದ್ದದ್ದು ಕೆಲವು ದಶಕಗಳು ಮಾತ್ರ. ಈ ಕಾಲಘಟ್ಟದಲ್ಲಿ ಗಾಂಧೀಜಿ ಸಾವಿರಾರು ರಾಜಕೀಯ ಸಂದಿಗ್ಧಗಳನ್ನು ಎದುರಿಸಿದ್ದಾರೆ. ಪ್ರಖರ ಸೂರ್ಯರ ತರ ಜ್ವಲಿಸುತ್ತಿದ್ದ ಅಂಬೇಡ್ಕರ್, ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಪೆರಿಯಾರ್ ರಂತಹ ಜೊತೆಗಾರರ ಪ್ರಭಾವಲಯಗಳಲ್ಲಿ ಕೆಲವು ಸಲ ಗಾಂಧಿ ಪೇಲವವಾಗಿ ಕಂಡಿದ್ದಾರೆ. ಈ ಜೊತೆಗಾರರು ಮುಂದಿರಿಸುತ್ತಿದ್ದ ಚಾರಿತ್ರಿಕ ಪ್ರಶ್ನೆಗಳಿಗೆ ಗಾಂಧೀಜಿ ನಿರುತ್ತರರೂ ಆಗಿದ್ದಾರೆ. ಆದರೆ, ದೇಶದ ರಾಜಕೀಯ ಗುಲಾಮಗಿರಿ, ಅಸಮಾನ ವಿಷಮ ಸಾಮಾಜಿಕ ಸಂದರ್ಭ, ಕೋಮು ಅಸಹನೆಯ ತಲ್ಲಣಗಳಲ್ಲಿ ಗಾಂಧೀಜಿ ಕಳೆದು ಹೋಗಲಿಲ್ಲ.

- Advertisement -

ಈ ಎಲ್ಲ ಸಂಗತಿಗಳಿಂದ ಗಾಂಧೀಜಿ ವಿದ್ಯಾರ್ಥಿಯಂತೆ ಕಲಿತರು, ಜೊತೆಗೆ ಕಲಿಸಲು ಮುಂದಾದರು. ಇದಲ್ಲೆಕ್ಕಿಂತ ಹೆಚ್ಚಾಗಿ ಗಾಂಧೀಜಿ ಜನರ ನಡುವೆ ಬದುಕಿದರು. ಅದು ಬಿರ್ಲಾನ ಅತಿಥಿಗೃಹವೇ ಇರಲಿ, ಚಂಪಾರಣ್ ಹೋರಾಟವೇ ಇರಲಿ, ಕೋಮು ಅಸಹನೆಯಿಂದ ಧಗಧಗ ಉರಿಯುತ್ತಿದ್ದ ಕಲ್ಕತ್ತಾದ ರಸ್ತೆಗಳೇ ಇರಲಿ, ಗಾಂಧೀಜಿ ತಾನು ಪ್ರೀತಿಸುತ್ತಿದ್ದ ಜನಸಾಮಾನ್ಯ’ರ ಜೊತೆ ನಿಂತುಕೊಂಡರು. ಅಡುಗೆಗೆ ನಿತ್ಯ ಬಳಸುವ ಉಪ್ಪು, ಸಾಮಾನ್ಯರಿಗೆ ಸುಲಭವಾಗಿ ದಕ್ಕಬೇಕು ಎಂಬುದರಿಂದ ಹಿಡಿದು, ಇಂಗ್ಲೆಂಡಿನಿಂದ ಬರುತ್ತಿದ್ದ ಉನ್ನತ ಮಟ್ಟದ ನಿಯೋಗಗಳ ಮುಂದೆ ತಾನು ಪ್ರೀತಿಸುವ ದೇಶದ ವಿಮೋಚನೆಗೆ ವಾದ ಮಂಡಿಸುವವರೆಗೆ ಗಾಂಧೀಜಿಯ ರಾಜಕೀಯ ವ್ಯಕ್ತಿತ್ವದ ಹರವು ವಿಸ್ತರಿಸಿಕೊಂಡಿತ್ತು. ವಸಾಹತು ಆಡಳಿತ ವಿಧಿಸಿದ್ದ ವಿಪರೀತ ಕಂದಾಯವನ್ನು ಕಟ್ಟದೆ ಭೂಮಿ ಕಳೆದುಕೊಂಡಿದ್ದ ರೈತರು, ಅಸ್ಪೃಶ್ಯತೆಯ ಹೀನಾಯ ಆಚರಣೆಯಲ್ಲಿ ನಲುಗುತ್ತಿದ್ದ ದಲಿತ ಸಮುದಾಯಗಳು, ಕೈಗಾರಕೀರಣದಿಂದ ಕುಲಕಸಬುಗಳನ್ನು ಕಳೆದುಕೊಂಡು ದಿಕ್ಕೆಟ್ಟುಹೋಗಿದ್ದ ಕರಕುಶಲ ಕರ್ಮಿಗಳು, ಯಾವ ಹಕ್ಕುಗಳೂ ಇಲ್ಲದ ಮಹಿಳೆಯರು, ಅಪರಾಧಿಗಳೆಂದು ಘೋಷಿಸಲ್ಪಟ್ಟಿದ್ದ ಅಲೆಮಾರಿ ಸಮುದಾಯಗಳು, ಎರಡನೇ ದರ್ಜೆಯ ಪ್ರಜೆಗಳೇ ಆಗಿ ಪರಿಗಣಿಸಲ್ಪಟ್ಟಿದ್ದ ಮುಸಲ್ಮಾನರು.......

ಒಟ್ಟಾರೆ ಇಂಡಿಯಾದ ಬಹುಸಂಖ್ಯಾತ ದುಡಿವ ಸಮುದಾಯಗಳು ತಲ್ಲಣಗಳಲ್ಲಿಯೇ ಇದ್ದ ನಿಕೃಷ್ಟ ರಾಜಕೀಯ ಸಂದರ್ಭವದು. ಮೋಹನ ಕರಮಚಂದ ಗಾಂಧಿ ಎಂಬ ಗುಜರಾತಿ ಬನಿಯಾ ಸಮುದಾಯದ ವ್ಯಕ್ತಿಯ ಮುಂದೆ ಇದ್ದ ಸವಾಲುಗಳವು. ಇಂತಹ ಚಾರಿತ್ರಿಕ ಸಮಸ್ಯೆಗಳಿಗೆ ತಟ್ಟನೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ? ಶತಮಾನಗಳ ಕಾಲ ಆಚರಣೆಯಲ್ಲಿದ್ದ ಜ್ವಲಂತ ಪಿಡುಗುಗಳಿಂದ ಶೋಷಿತರನ್ನು ವಿಮೋಚನೆಗೊಳಿಸಲು ಸಾಧ್ಯವೇ? ದುರಾಶೆಯ ಊಳಿಗಮಾನ್ಯ ವ್ಯವಸ್ಥೆ, ಅಮಾನವೀಯವಾಗಿ ಬೆಳೆದು ನಿಂತಿದ್ದ ಜಾತಿ ಅಸಹನೆ, ವಿಷಾನಿಲದಂತೆ ಪಸರಿಸುತ್ತಿದ್ದ ಕೋಮುವಾದಗಳ ನಡುವೆ ದೇಶಕ್ಕೆ ಮತ್ತು ಶೋಷಿತ ಸಮುದಾಯಗಳೆರಡಕ್ಕೂ ವಿಮೋಚನೆಯ ಅಗತ್ಯವಿತ್ತು. ಇಂತಹ ತಲ್ಲಣದ ಸಂದರ್ಭದಲ್ಲಿ ಗಾಂಧಿಯ ಮೇಲೆ ನಿರೀಕ್ಷೆಗಳ ಭಾರಜಲವೂ ಸುರಿಯುತ್ತಿತ್ತು. ಇಂತಹ ಸಂದರ್ಭದಲ್ಲಿ ಅಂದಿನ ನಲವತ್ತು ಕೋಟಿ ಜನರ ಮುಂದಾಳು ಎಂದೇ ಪರಿಗಣಿಸಲ್ಪಟ್ಟಿದ್ದ ಗಾಂಧೀಜಿ ಎಂತಹ ಸಂದಿಗ್ಧಗಳನ್ನು ಎದುರಿಸಿರಬಹುದು? ಗಾಂಧಿ ಎಂಬ ಮನುಷ್ಯನನ್ನು ಆತನ ಕಾಲಘಟ್ಟದ ಈ ಎಲ್ಲ ರಾಜಕೀಯ ಸಂದಿಗ್ಧಗಳ ಮೂಲಕವೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.

ಆದರೆ, ಈಗ ನಡೆಯುತ್ತಿರುವ ಗಾಂಧೀಜಿಯ ನಿಂದನೆ ಮತ್ತು ಭಜನೆಗಳಿಗೆ ಇಂತಹ ಸೂಕ್ಷ್ಮಗಳಿಲ್ಲ. ಕಪ್ಪು ಬಿಳುಪಿನ ಲೆಕ್ಕಾಚಾರಗಳಿಗೆ ಚರಿತ್ರೆಯ ಹಂಗುಗಳಿರುವುದಿಲ್ಲ. ಗಾಂಧೀಜಿಯ ಒಟ್ಟಾರೆಯ ಬೌದ್ಧಿಕ ನಿಲುವುಗಳು ಅವರ ಎಣೆ ಇಲ್ಲದ ಆಕ್ಟಿವಿಸಮ್ ನಿಂದ ರೂಪುಗೊಳ್ಳುತ್ತಾ ಬಂದಿವೆ. ಗಾಂಧೀಜಿಯ ಬೌದ್ಧಿಕತೆಯನ್ನು ಅವರ ಶ್ರಮದಾಯಕ ಆಕ್ಟಿವಿಸಮ್ ನ ಮೂಲಕ ಅರ್ಥಮಾಡಿಕೊಳ್ಳಬೇಕು. ಹಾಗೆಂದು ಗಾಂಧೀಜಿಯ ನಿಲುವುಗಳೆಲ್ಲ ಪರಿಪೂರ್ಣವಾಗಿವೆ ಎಂದೇನಲ್ಲ, ಅವಕ್ಕೆ ಹಲವು ಮಿತಿಗಳಿವೆ, ಕೆಲವೊಮ್ಮೆ ಅವು ಫಾರ್ಶ್ವಿಕವೂ (ಸೆಕ್ಟೇರಿಯನ್) ಸಹ ಆಗಿವೆ. ಆದರೆ ಆ ನಿಲುವುಗಳು ಜನಸಮುದಾಯಗಳ ಜೊತೆಗಿನ ಸಾವಯವ ಸಂಬಂಧಗಳಿಂದ ಅಸ್ತಿತ್ವಕ್ಕೆ ಬಂದಂತವುಗಳೇ ಆಗಿವೆ. ಒಂದು ಅರ್ಥದಲ್ಲಿ ಗಾಂಧೀಜಿಯ ರಾಜಕೀಯ ನಿಲುವುಗಳನ್ನು ಅವರ ಸಾರ್ವಜನಿಕ ಬದುಕನ್ನು ಹೊರತಾಗಿಸಿ ನೋಡಲು ಸಾಧ್ಯವಿಲ್ಲ. ಈ ದೇಶದ ಸಾಮಾನ್ಯ ಜನರ ನಡುವೆ ಬೆರೆಯದೇ ಇದ್ದರೆ ಗಾಂಧೀಜಿ ಎಂಬ ವ್ಯಕ್ತಿತ್ವವಾಗಲಿ, ಗಾಂಧಿಯ ಚಿಂತನೆಗಳಾಗಲಿ ಅಸ್ತಿತ್ವಕ್ಕೇ ಬರುತ್ತಿರಲಿಲ್ಲ. ಒಂದು ಸಾಮಾಜಿಕ ಅಸಮಾನತೆಯನ್ನು ಪ್ರತಿರೋಧಿಸುವ ಮೂಲಕ ಬ್ಯಾರಿಸ್ಟರ್ ಆಗಿದ್ದ ಕರಮಚಂದರು, ಗಾಂಧೀಜಿಯಾಗಿ ರೂಪಾಂತರಗೊಂಡರು. ಈ ದೇಶದ ಅಸಹನೀಯ ರಾಜಕೀಯ ಸನ್ನಿವೇಶದಲ್ಲಿ, ಇಂತಹ ಸಾಮಾಜಿಕ ವಿಷಮತೆಯ ವಿರುದ್ಧ ಹೋರಾಡುತ್ತಲೇ ಗಾಂಧೀಜಿ ಮತ್ತೆ ಮತ್ತೆ ರೂಪುಗೊಳ್ಳುತ್ತಾ ಹೋದರು. ದೇಶದ ಎಲ್ಲ ಜನರ ನಡುವೆ ಸಂಪರ್ಕ ಸೇತುವನ್ನು ನಿರ್ಮಾಣ ಮಾಡುವ ಪ್ರಯತ್ನದಲ್ಲಿರುವಾಗ, ನಿರ್ಮಾಣಗಳನ್ನು ಸ್ಪೋಟಿಸುವ ನಿಕೃಷ್ಟರ ಪ್ರತಿನಿಧಿಯೊಬ್ಬನಿಂದ ಗಾಂಧಿ ಕೊಲ್ಲಲ್ಪಟ್ಟರು. ಗಾಂಧೀಜಿ ಹೇಗೆ ಬದುಕಿದ್ದರು, ಏನು ಚಿಂತಿಸಿದರು ಎಂಬುದರ ಜೊತೆಗೆ,ನಮ್ಮ’ ವೈರಿಯೊಬ್ಬನಿಂದ ಗಾಂಧಿ ಹತರಾದರು ಎಂಬುದೂ ನಮಗೆ ಮುಖ್ಯವಾಗಬೇಕು.

ಗಾಂಧಿಯ ಚಿಂತನೆಗಳು ತನ್ನೆಲ್ಲ ಮಿತಿಗಳ ನಡುವೆ ಬಹುಸಂಖ್ಯಾತ ದುಡಿವ ಸಮುದಾಯಗಳ ವೈರಿಗಳಿಗೆ ಬಳಕೆಯಾಗಲಿಲ್ಲ. ಗಾಂಧಿ ತತ್ವಗಳು ಪ್ರಭುತ್ವಕ್ಕೆ ಬಂಡವಾಳವಾಗಲಿಲ್ಲ. (ಆದರೆ, ಗಾಂಧಿಯ ಫೋಟೋ, ಆತನ ಕನ್ನಡಕ, ಚರಕ ಮತ್ತು ಚರಿಷ್ಮಾಗಳು ಆಳುವ ವರ್ಗಗಳಿಗೆ ಬಂಡವಾಳವಾದವು) ಗಾಂಧಿಯನ್ನು ಕೊಂದ `ಆ ಜನ’ ಗೋಡ್ಸೆಗೆ ದೇವಾಲಯ ಕಟ್ಟುತ್ತಿದ್ದಾರೆ, ಗಾಂಧೀಜಿಯ ಚಿಂತನೆಗಳನ್ನು ಆತ ಹುಟ್ಟಿದ ನೆಲದಿಂದಲೇ ಮೂಲೋತ್ಪಾಟನೆ ಮಾಡಿದವರು ದೇಶವನ್ನು ಫ್ಯಾಸಿಸಮ್ ಕಡೆಗೆ ಕೊಂಡೊಯ್ಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗಾಂಧೀಜಿಯನ್ನು ಅವರ ಎಲ್ಲ ಮಿತಿಗಳ ನಡುವೆ ನಾವು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಹಾಗೆಂದು ನಾವು ಭಾವುಕವಾಗಿ ಗಾಂಧಿಯನ್ನು ಒಪ್ಪಿಕೊಳ್ಳುವ ಅಗತ್ಯವಿಲ್ಲ. ಶೋಷಿತ ಸಮುದಾಯಗಳ ಕುರಿತು ಭಾವುಕವಾಗಿ ಯೋಚಿಸುತ್ತಲೇ ಅವರು ನಮ್ಮ ಮೇಲೆ ಹೇರಿದ ಪೂನಾ ಒಪ್ಪಂದವನ್ನು ಖಾರವಾಗಿಯೇ ಪ್ರಶ್ನಿಸೋಣ. ಗಾಂಧಿಯ ಟ್ರಸ್ಟಿಷಿಪ್ ಚಿಂತನೆಗಳನ್ನು, ಅವರು ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು (ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಅಂಬೇಡ್ಕರ್ ಮುಂತಾದವರನ್ನು) ನಡೆಸಿಕೊಂಡ ರೀತಿಯನ್ನು ನಾವು ವಿರೋಧಿಸೋಣ. ಆದರೆ ಇಡಿಯಾಗಿ ಗಾಂಧಿಯನ್ನಲ್ಲ. ಪೂನಾ ಒಪ್ಪಂದದ ಸಂದರ್ಭದಲ್ಲಿ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ಮೀಸಲಿಡುವುದನ್ನು ವಿರೋಧಿಸಿ ಗಾಂಧಿ ಉಪವಾಸ ಕೂಡುತ್ತಾರೆ.

ದಿನಕಳೆದಂತೆ ಗಾಂಧೀಜಿಯ ಆರೋಗ್ಯ ಕ್ಷೀಣಿಸುವುದನ್ನು ನೋಡಿದ ಬಾಬಾ ಸಾಹೇಬರು ವಿಧಿ ಇಲ್ಲದೆ ಪೂನಾ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ತಾವು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದ ದಲಿತರಿಗೆ ಪ್ರತ್ಯೇಕ ಮತ ಕ್ಷೇತ್ರಗಳ ನಿಲುವುನ್ನು ಬಾಬಾ ಸಾಹೇಬರು ಗಾಂಧೀಜಿಯನ್ನು ಉಳಿಸಿಕೊಳ್ಳುವ ಕಾರಣಕ್ಕಾಗಿ ಸಡಿಲಿಸುತ್ತಾರೆ. ಹಾಗೆಂದು ನಮ್ಮ ಹಕ್ಕುಗಳನ್ನು ಬಲಿಗೊಡಬೇಕೆಂದೇನೂ ಇಲ್ಲ. ಹಕ್ಕುಗಳಿಗೆ ಹೋರಾಡುವ ನಮಗೆ ಬಾಬಾ ಸಾಹೇಬರ ಅಂತಃಸ್ಸತ್ವ, ಅವರ ತಾಯ್ತನದ ಅಂತಃಕರಣ ಮತ್ತು ರಚನಾತ್ಮಕ ಪ್ರತಿಚಿಂತನೆಗಳೇ ಮಾದರಿ. ನಿಷ್ಟ್ರಯೋಜಕ ಮೂರ್ತಿಭಂಜಕ ಪ್ರವೃತ್ತಿ ಮತ್ತು ಅಂತಃಕರಣದ ಸ್ಪರ್ಶವಿಲ್ಲದ ಟೀಕೆಗಳು ನಮ್ಮನ್ನು ರಾಜಕೀಯ ಅಸೂಕ್ಷ್ಮರನ್ನಾಗಿಸುವ ಜೊತೆಗೆ ನಮ್ಮಲ್ಲಿನ ಮನುಷ್ಯನನ್ನೂ ಕೊಲ್ಲುತ್ತವೆ.

Join Whatsapp