November 28, 2020
ಅಚ್ಛೇ ದಿನ್! | ಮುಂಬೈಯಲ್ಲಿ ಲೀಟರ್ ಗೆ 90 ರೂ. ಗಡಿ ಸಮೀಪಿಸುತ್ತಿರುವ ಪೆಟ್ರೋಲ್ ಬೆಲೆ ; ಯಾವ್ಯಾವ ನಗರದಲ್ಲಿ ಎಷ್ಟೆಷ್ಟು ದರ? ಇಲ್ಲಿದೆ ವಿವರ

ನವದೆಹಲಿ : ಕೋವಿಡ್ 19 ಸಂಕಷ್ಟದಿಂದ ಈಗಾಗಲೇ ಸಾಕಷ್ಟು ಸಂಕಷ್ಟಕ್ಕೀಡಾಗಿರುವ ಜನತೆಗೆ ದಿನ ನಿತ್ಯ ಬೆಲೆ ಏರಿಕೆ ಬಿಸಿತಟ್ಟುತ್ತಲೇ ಇದೆ. ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ಕಳೆದ 9 ದಿನಗಳಲ್ಲಿ ಎಂಟು ದಿನ ಸತತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿವೆ. ಅದರಲ್ಲೂ ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 90ರ ಗಡಿ ತಲುಪಲು ಇನ್ನು 1.19 ರೂ.ಯಷ್ಟೇ ಬಾಕಿಯಿದೆ. ಅಂದರೆ ಮುಂಬೈಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 88.81 ಆಗಿದ್ದು, ರೂ. 90 ಆಗಲು ಇನ್ನು 1 ರೂ. 19 ಪೈಸೆಯಷ್ಟು ಮಾತ್ರ ಬಾಕಿಯಿದೆ. ಡೀಸೆಲ್ ಬೆಲೆ 78.66ಕ್ಕೆ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 84.87 ಮತ್ತು ಡೀಸೆಲ್ ಗೆ 76.46ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಬೆಲೆ 84.87 ಮತ್ತು ಡೀಸೆಲ್ ಬೆಲೆ 76.46 ರೂ. ವರದಿಯಾಗಿದೆ.
‘ಅಚ್ಛೇ ದಿನ್’ ತರುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಅಧಿಕಾರಾವಧಿಯಲ್ಲೂ ಪೆಟ್ರೋಲ್, ಡೀಸೆಲ್ ಬೆಲೆ ನಾಗಾಲೋಟದಲ್ಲಿ ಮುನ್ನುಗ್ಗುತ್ತಿರುವುದು ವಿಪರ್ಯಾಸ, ಮುಖ್ಯವಾಹಿನಿ ಮಾಧ್ಯಮಗಳು ಇಂತಹ ವಿಚಾರಗಳ ಬಗ್ಗೆ ಚರ್ಚಿಸದೆ, ಅನಗತ್ಯ ವಿಚಾರಗಳನ್ನು ಮುನ್ನೆಲೆಗೆ ತಂದು ಸಮಾಜದಲ್ಲಿ ದ್ವೇಷ ರಾಜಕಾರಣದ ಸಿದ್ಧಾಂತ ಹರಡುವ ಕಾರ್ಯದಲ್ಲಿ ನಿರತವಾಗಿವೆ.