‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ಭಾಗವಾಹಿಸಿದ್ದ ರೈತರ ವಿರುದ್ಧ ಕೊಲೆ ಯತ್ನ, ಸರಕಾರಿ ಕರ್ತವ್ಯಕ್ಕೆ ಅಡಚಣೆ, ಗಲಭೆ ಸೃಷ್ಟಿಸಿರುವುದು ಸೇರಿದಂತೆ ಹಲವು ಪ್ರಕರಣಗಳ ಅಡಿಯಲ್ಲಿ ಹರಿಯಾಣ ಸರಕಾರ ದೂರು ದಾಖಲಿಸಿದೆ ಎಂದು ವರದಿಯಾಗಿದೆ.
ನವೆಂಬರ್ 26ರಂದು, ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ಗುರುನಮ್ ಸಿಂಗ್ ಚಾರುಣಿ ಸೇರಿದಂತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಲವು ರೈತ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಐಪಿಸಿ ಸೆಕ್ಷನ್ 147(ಗಲಭೆ ಪ್ರಚೋದನೆ), 149(ಕಾನೂನುಬಾಹಿರ ಸಭೆ), 186(ಸರಕಾರಿ ಕರ್ತವ್ಯಕ್ಕೆ ಅಡಚಣೆ), 269(ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ) ಮತ್ತು 307(ಕೊಲೆ ಯತ್ನ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹರಿಯಾಣ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ದೊರಕಿದೆ.
ಕೇಂದ್ರ ಸರಕಾರವು ತಂದಿರುವ ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಮುದಾಯವು ಹೋರಾಟದಲ್ಲಿ ನಿರತವಾಗಿದೆ.