ಕಲ್ಯಾಣ ಮಂಟಪ ಹೊತ್ತಿ ಉರಿಯುತ್ತಿದ್ದರೂ ಊಟ ಬಿಡದ ‘ಅತಿಥಿಗಳು’..!

Prasthutha|

ಥಾಣೆ: ‘ರೋಮ್ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ ಎಂಬ ಕ್ರಿ.ಶ. 64ರ ಕಾಲಘಟ್ಟದ, ಇಂದಿಗೂ ಪ್ರಸ್ತುತ ಎನಿಸುವ ಘಟನೆಯೊಂದು ಮುಂಬೈನ ಥಾಣೆಯಲ್ಲಿ ನಡೆದಿದೆ. ಕಲ್ಯಾಣ ಮಂಟಪವೇ ಹೊತ್ತಿ ಉರಿಯುತ್ತಿದ್ದರೂ ಅದರ ಅಣತಿ ದೂರದಲ್ಲೇ ಮದುವೆಗೆ ಬಂದಿದ್ದ ಅತಿಥಿಗಳು ಬೆಂಕಿಯನ್ನು ನೋಡುತ್ತಲೇ ಮದುವೆ ಊಟವನ್ನು ಸವಿಯುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.

- Advertisement -

ಥಾಣೆಯ ಭೀವಂಡಿಯ ಅನ್ಸಾರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಕಲ್ಯಾಣ ಮಂಟಪದ ಸ್ಟೋರ್’ರೂಮ್’ನಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ ಬಳಿಕ ಸಂಪೂರ್ಣವಾಗಿ ಕಲ್ಯಾಣ ಮಂಟಪವನ್ನೇ ಆವರಿಸಿತ್ತು. ಕಲ್ಯಾಣ ಮಂಟಪದ ಆವರಣದಲ್ಲೇ ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಕಲ್ಯಾಣ ಮಂಟಪ ಹೊತ್ತಿ ಉರಿಯುತ್ತಿದ್ದರೂ, ಬೆಂಕಿಯ ಜ್ವಾಲೆ ಮುಗಿಲೆತ್ತರಕ್ಕೆ ಕಾಣುತ್ತಿದ್ದರೂ ತಲೆ ಕೆಡಿಸಿಕೊಳ್ಳದ ‘ಅತಿಥಿಗಳು’ ಊಟ ಮಾಡುವುದನ್ನು ಮುಂದುವರಿಸಿದ್ದಾರೆ.

ಆರಕ್ಕೂ ಹೆಚ್ಚು ಬೈಕ್’ಗಳು ಹಾಗೂ ಕಲ್ಯಾಣ ಮಂಟಪದಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮೂರು ಅಗ್ನಿಶಾಮಕ ದಳದ ವಾಹನದಲ್ಲಿ ಸಿಬ್ಬಂದಿ ನಡೆಸಿದ ನಿರಂತರ ಕಾರ್ಯಾಚರಣೆಯಿಂದಾಗಿ ಬೆಂಕಿಯನ್ನು ನಂದಿಸಲಾಗಿದೆ ಎಂದು ಭೀವಂಡಿ ಮುನ್ಸಿಪಾಲಿಟಿಯ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp