ಮಿಝೋರಾಮ್ , ಅಗಸ್ಟ್ 2: ಈಶಾನ್ಯ ರಾಜ್ಯದ ಬಿಜೆಪಿಯ 16 ಸಂಸದರು ಅಸ್ಸಾಂ – ಮಿಝೋರಾಮ್ ಗಡಿ ವಿವಾದದ ಕುರಿತು ಚರ್ಚಿಸಲು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಕಾಂಗ್ರೆಸ್ ಈ ವಿವಾದವನ್ನು ರಾಜಕೀಯಗೊಳಿಸುತ್ತಿದೆಯೆಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ.
ಅಸ್ಸಾಂ – ಮಿಝೋರಾಮ್ ಗಡಿ ವಿವಾದವನ್ನು ಮುಂದಿಟ್ಟುಕೊಂಡು ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ದುಷ್ಕರ್ಮಿಗಳು ಪ್ರಯತ್ನ ಮಾಡುತ್ತಿರುವ ಅಂಶವನ್ನು ದೇಶದ ಜನತೆಯ ಮುಂದಿರಿಸಲಾಗುವುದೆಂದು ಸಂಸದರು ತಿಳಿಸಿದ್ದಾರೆ. ಮಾತ್ರವಲ್ಲದೇ ವಿದೇಶಿ ಶಕ್ತಿಗಳು ಈ ಪ್ರಕರಣದಲ್ಲಿ ಪ್ರಚೋದನಕಾರಿ ಹೇಳಿಕೆಯನ್ನು ನೀಡುವ ಮೂಲಕ ಹಿಂಸೆಗೆ ಪ್ರೋತ್ಸಾಹ ನೀಡುತ್ತಿದ್ದಾರೆಯೆಂದು ಸಭೆಯ ನಂತರ ಕೇಂದ್ರ ಸಚಿವ ಕಿರಣ್ ರಿಜಿಜು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ನಿಯೋಗದಲ್ಲಿ ಅಸ್ಸಾಮ್ ನಿಂದ 12 , ಅರುಣಾಚಲ ದಿಂದ 2, ಮಣಿಪುರ ಮತ್ತು ತ್ರಿಪುರಾ ದಿಂದ ತಲಾ ಒಂದೊಂದು ಸಂಸದರು ಸೇರಿದಂತೆ ಒಟ್ಟು 16 ಸಂಸದರು ಒಳಗೊಂಡಿದ್ದರು. ಈ ಮಧ್ಯೆ ಕೇಂದ್ರ ಸರ್ಕಾರವು ಅಸ್ಸಾಂ ಮತ್ತು ಮಿಝೋರಾಮ್ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿ ಸೌಹಾರ್ದತೆ ಮೂಲಕ ಬಗೆಹರಿಸುವಂತೆ ಪ್ರಯತ್ನ ನಡೆಸಲಾಗುತ್ತಿದೆಯೆಂದು ಮಿಝೋರಾಮ್ ರಾಜ್ಯಪಾಲರಾದ ಕೆ ಹರಿಬಾಬು ತಿಳಿಸಿದ್ದಾರೆ.
ಮಿಜೋರಾಂ ಸಂಸದ ಕೆ ವನ್ಲಾಲ್ವೇನಾ ವಿರುದ್ಧದ ಎಫ್‌ಐಆರ್ ಅನ್ನು ಹಿಂಪಡೆಯುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪೊಲೀಸರಿಗೆ ಆದೇಶ ನೀಡಿದ್ದಾರೆ. ಇದೇ ವೇಳೆ ಅಂತರಾಜ್ಯ ಗಡಿ ವಿವಾದವನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆಯೆಂದು ಪ್ರತಿಪಕ್ಷ ಕಾಂಗ್ರೆಸ್ ಶನಿವಾರ ಆರೋಪಿಸಿದೆ. ಮಾತ್ರವಲ್ಲದೇ ಗಡಿ ವಿವಾದವನ್ನು ಬಗೆಹರಿಸದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕೆಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಯವರು ಒತ್ತಾಯಿಸಿದ್ದಾರೆ.