ಸ್ಕಾರ್ಫ್ ಕುರಿತು ಸಚಿವ ನಾಗೇಶ್ ನೀಡಿರುವ ಹೇಳಿಕೆ ವಾಪಸ್ ಪಡೆದು ಕ್ಷಮೆಯಾಚಿಸಬೇಕು: ಇಮಾಮ್ಸ್ ಕೌನ್ಸಿಲ್

Prasthutha|

ಬೆಂಗಳೂರು: ಸ್ಕಾರ್ಫ್ ಧರಿಸುವುದು ಅಶಿಸ್ತು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೀಡಿರುವ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದ್ದು, ಕೂಡಲೇ ಅವರು ತಮ್ಮ ಹೇಳಿಕೆಯ್ನು ವಾಪಸು ಪಡೆದು ಕ್ಷಮೆ ಯಾಚಿಸಬೇಕು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಸಮಿತಿ ಸದಸ್ಯ ಜಾಫರ್ ಸಾಧಿಕ್ ಫೈಝಿ ಒತ್ತಾಯಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಮುಸ್ಲಿಮ್ ವಿದ್ಯಾರ್ಥಿನಿಯರು, ಶಿಕ್ಷಕಿಯರು ಸ್ಕಾರ್ಫ್, ಹಿಜಾಬ್ ನಂತಹ ಶಿರವಸ್ತ್ರ ಧರಿಸಿಕೊಂಡು ಬರುವುದು ಸಂವಿಧಾನ ಬದ್ಧವಾದ ಅವರ ಧಾರ್ಮಿಕ ವಿಶ್ವಾಸ, ಸಂಸ್ಕೃತಿಯ ಭಾಗವಾಗಿದೆ. ಇತರ ಎಲ್ಲಾ ಧರ್ಮಗಳ ವಿದ್ಯಾರ್ಥಿಗಳು ಕೂಡ ಅವರವರ ಧಾರ್ಮಿಕ ಸಂಸ್ಕೃತಿ, ವಿಶ್ವಾಸ ಪ್ರಕಾರ ಸಮವಸ್ತ್ರದ ಜೊತೆಗೆ ಇತರ ವಸ್ತ್ರಗಳನ್ನು ಧರಿಸಿ ಕೊಂಡು ಬರುತ್ತಾರೆ. ಅಲ್ಲದೇ ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರದ ಕಚೇರಿಗಳಲ್ಲಿ ಹಿಂದೂ ಧರ್ಮದ ಪೂಜೆ ಪ್ರಾರ್ಥನೆ ಗಳು ನಡೆಸುವವರು ಇದ್ದಾರೆ. ಇದು ಯಾವತ್ತೂ ಕೂಡ ಇತರರಿಗೆ ಯಾವುದೇ ಸಮಸ್ಯೆ ಆಗಲಿಲ್ಲ. ಇದರಲ್ಲಿ ಜಾತಿ ಧರ್ಮ ತಾರತಮ್ಯದಿಂದ ಮುಸ್ಲಿಮ್ ಧರ್ಮದ ವಿದ್ಯಾರ್ಥಿಗಳನ್ನು ಗುರಿಪಡಿಸಿ ತೊಂದರೆ ಹಿಂಸೆ ಕೊಡುವುದು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾದ ಜವಾಬ್ದಾರಿ ಸರಕಾರದ್ದು ಎಂದು ಅವರು ತಿಳಿಸಿದ್ದಾರೆ.

ಹೀಗಿರುವಾಗ ಶಿಕ್ಷಣ ಸಚಿವರೇ ಜಾತಿ ಧರ್ಮ ನೋಡಿ ತಾರತಮ್ಯದಿಂದ ಅಸಂವಿಧಾನಿಕವಾಗಿ ಅಶಿಸ್ತಿನ ವಿವಾದಾತ್ಮಕ ಹೇಳಿಕೆ ನೀಡುವುದು ಎಷ್ಟು ಸರಿ? ಸಮಸ್ಯೆ ಸೃಷ್ಟಿಸುವ ಕೋಮುವಾದಿಗಳಿಗೆ ಇದರಿಂದಾಗಿ ಹೆಚ್ಚು ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಎಲ್ಲಾ ವಿಧ್ಯಾರ್ಥಿಗಳು ಮತ್ತು ಶಿಕ್ಷಕರು ಅವರವರ ಧಾರ್ಮಿಕ ಸಂಸ್ಕೃತಿ ನಂಬಿಕೆಗಳಿಗೆ ಧಕ್ಕೆ ಬಾರದಂತೆ ವಿದ್ಯಾಭ್ಯಾಸ ಪಡೆಯಲು ಬೇಕಾದ ಶಾಂತಿಯುತ ವಾತಾವರಣ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಇರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಶಿಕ್ಷಣ ಸಚಿವರು ಮತ್ತು ಸರಕಾರದ ನಿರ್ವಹಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಹಿಂದೂ ಧರ್ಮದ ಧಾರ್ಮಿಕ ಸಂಸ್ಕೃತಿ, ಆಚರಣೆ, ಇತರ ಪ್ರಾರ್ಥನೆಗಳು ಶಾಲಾ ಕಾಲೇಜುಗಳಲ್ಲಿ ಅನ್ಯ ಧರ್ಮದ ವಿದ್ಯಾರ್ಥಿಗಳಿಂದ ಮಾಡಿಸುವುದು ಕೂಡ ಸರಿಯಲ್ಲ. ಇದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.



Join Whatsapp