ಮಂಗಳೂರು: ಬಸ್ ನಲ್ಲಿ ಕಳ್ಳತನ ಮಾಡಿದ ಮಹಿಳೆ; ಸಿಸಿ ಟಿವಿ ದೃಶ್ಯ ಆಧರಿಸಿ ದೂರು ದಾಖಲು

Prasthutha|

ಪುತ್ತೂರು: ಮಂಗಳೂರಿನಿಂದ ಪುತ್ತೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಪರ್ಸ್ ಇನ್ನೊಬ್ಬ ಮಹಿಳೆ ಎಗರಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -


ಪುತ್ತೂರು ತಾಲೂಕು ಪಂಚಾಯಿತಿಯ ಯೋಜನಾಧಿಕಾರಿ ಸುಕನ್ಯ ಎಂಬವರು ಪರ್ಸ್ ಕಳೆದುಕೊಂಡ ಮಹಿಳೆ. ಅದೃಷ್ಟವೆಂಬಂತೆ ಬಸ್ ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯಗಳು ಸೆರೆಹಿಡಿಯಲ್ಪಟ್ಟಿದ್ದು, ಇದನ್ನಾಧರಿಸಿ ಸುಕನ್ಯ ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.


ತಾ.ಪಂ ಗೆ ನಡೆದುಕೊಂಡು ಹೋಗುವಾಗ ಮೆಡಿಕಲ್ ನಲ್ಲಿ ಮಾತ್ರೆ ಖರೀದಿಗೆಂದು ಪರ್ಸ್ ತಡಕಾಡಿದಾಗ ಬ್ಯಾಗ್ ಝಿಪ್ ಓಪನ್ ಆಗಿ ಪರ್ಸ್ ಕಳ್ಳತನವಾಗಿರುವುದು ತಿಳಿದಿದೆ.

- Advertisement -


ಕಳ್ಳತನ ಮಾಡುವ ಮಹಿಳೆ ಮಧ್ಯವಯಸ್ಕಳಾಗಿದ್ದು, ಅವಳೊಬ್ಬ ಪರಿಣಿತ ಕಳ್ಳಿಯಂತೆ ಕಾಣುತ್ತಿದೆ. ಪ್ರಯಾಣಿಕರಿದ್ದರೂ ಯಾರಿಗೂ ಅನುಮಾನ ಬರದಂತೆ ಎಲ್ಲರೂ ಇಳಿಯುವ ಸಂದರ್ಭ ನೋಡಿ ಕದ್ದಿರುವ ಆಕೆ ತನ್ನ ಸೀರೆಯ ನಡುವೆ ಪರ್ಸ್ ಮುಚ್ಚಿಟ್ಟುಕೊಂಡಿರುವ ದೃಶ್ಯ ಬಸ್ ನ ಸಿಸಿಟಿವಿಯಲ್ಲಿ ದಾಖಲಾಗಿದೆ.


ಪ್ರಯಾಣಿಕರ ಹಿತ ದೃಷ್ಟಿಯಿಂದ ನಾವು ಬಸ್ ಗೆ ಸಿಸಿಟಿವಿ ಅಳವಡಿಸಿದ್ದೇವೆ. ಬಸ್ ಪ್ರಯಾಣಿಕರಿಂದ ತುಂಬಿರುವಾಗ ಈ ರೀತಿಯ ಕಳ್ಳತನಗಳು ಸಾಮಾನ್ಯ. ಸಿಸಿಟಿವಿ ಅಳವಡಿಸಿದ ಬಳಿಕ ಇಂತಹ ಹಲವು ಪ್ರಕರಣಗಳು ಪತ್ತೆಯಾಗಿವೆ ಎಂದು ಬಸ್ ಮಾಲಕ ಪ್ರಕಾಶ್ ಶೆಟ್ಟಿ ತಿಳಿಸಿದರು.

Join Whatsapp