‘ಲವ್ ಜಿಹಾದ್’ | ನರಕವಾಗುತ್ತಿದೆಯೇ ಅಂತರ್ ಧರ್ಮೀಯ ವಿವಾಹಿತರ ಬದುಕು? ; ಮುಸ್ಲಿಂ ಯುವಕನಿಂದ ದೂರ ಮಾಡಲ್ಪಟ್ಟಿದ್ದ ಯುವತಿಗೆ ಗರ್ಭಪಾತ?

Prasthutha|

ಲಖನೌ : ಹಿಂದೂ ಯುವತಿಯರು ಮುಸ್ಲಿಮ್ ಯುವಕರನ್ನು ಪ್ರೀತಿಸಿ ಮದುವೆಯಾಗುವುದನ್ನು ತಪ್ಪಿಸಲು ಜಾರಿಯಾದ ‘ಲವ್ ಜಿಹಾದ್’ ತಡೆ ಕಾನೂನು ಈಗ ಉತ್ತರ ಪ್ರದೇಶದಲ್ಲಿ ಅಂತರ್ ಧರ್ಮೀಯ ವಿವಾಹಿತರ ಬದುಕನ್ನು ನರಕಗೊಳಿಸುತ್ತಿದೆ ಎಂಬುದು ಬಹುತೇಕ ಖಚಿತಗೊಂಡಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರಕಾರ ಜಾರಿಗೆ ತಂದಿರುವ ಬಲವಂತದ ಮತಾಂತರ ತಡೆ ಕಾಯ್ದೆಯಡಿ ದಾಖಲಾದ ಮೊದಲ ಪ್ರಕರಣದಲ್ಲೇ ಇಂತಹುದೊಂದು ಬಲವಾದ ಸಂದೇಹ ವ್ಯಕ್ತವಾಗಿದೆ.

- Advertisement -

‘ಲವ್ ಜಿಹಾದ್’ ಆರೋಪವನ್ನು ಸ್ವತಃ ಯುವತಿಯೇ ತಳ್ಳಿ ಹಾಕಿದ್ದು, ಇದರಿಂದ ಪೊಲೀಸರು ಮತ್ತು ಉತ್ತರ ಪ್ರದೇಶ ಬಿಜೆಪಿ ಸರಕಾರಕ್ಕೆ ದೊಡ್ಡ ಮುಖಭಂಗವಾಗಿದೆ. ಅಲ್ಲದೆ, ಸಂತ್ರಸ್ತೆ ಯುವತಿಯನ್ನು ಸೇರಿಸಲ್ಪಟ್ಟಿದ್ದ ಸಂಸ್ಥೆಯಲ್ಲಿ ಯುವತಿಗೆ ತೀವ್ರ ಕಿರುಕುಳ ನೀಡಲಾಗಿದ್ದು, ಆಕೆಗೆ ಗರ್ಭಪಾತವಾದ ಬಗ್ಗೆಯೂ ಆರೋಪಗಳು ಕೇಳಿಬಂದಿವೆ.

ಪಿಂಕಿ ಎಂಬ 22ರ ಹರೆಯದ ಯುವತಿಯು ಮೊರದಾಬಾದ್ ನ ರಶೀದ್ ಎಂಬ ಯುವಕನನ್ನು ಐದು ತಿಂಗಳ ಹಿಂದೆ ಮದುವೆಯಾಗಿದ್ದಳು. ಮದುವೆ ನಂತರ ಯುವತಿ ತನ್ನ ಹೆಸರನ್ನು ಮಸ್ಕನ್ ಜಹಾನ್ ಆಗಿ ಬದಲಾಯಿಸಿದ್ದಳು. ಆದರೆ, ಈ ಬಗ್ಗೆ ನೂತನ ಕಾಯ್ದೆಯಡಿ ಪಿಂಕಿಯ ತಾಯಿ ನೀಡಿದ್ದ ದೂರಿನಂತೆ, ಪೊಲೀಸರು ಆಕೆಯ ಪತಿ ರಶೀದ್ ನನ್ನು ಬಂಧಿಸಿ, ಆಕೆಯನ್ನು ‘ನಾರಿ ನಿಕೇತನ್’ ಎಂಬ ಆಶ್ರಯ ಸಂಸ್ಥೆಗೆ ದಾಖಲಿಸಿದ್ದರು.

- Advertisement -

ತನ್ನನ್ನು ಸೇರಿಸಲ್ಪಟ್ಟಿದ್ದ ಸಂಸ್ಥೆಯಲ್ಲಿ ತನಗೆ ಕಿರುಕುಳವನ್ನು ಕೊಡಲಾಗಿದೆ. ತನಗೆ ಈಗ ಕೆಲವು ದಿನಗಳಿಂದ ರಕ್ತಸ್ರಾವವಾಗುತ್ತಿದೆ. ತಾನು ಗರ್ಭವತಿಯಾಗಿದ್ದು, ಮಗು ಕಳೆದುಕೊಂಡಿರುವ ಬಗ್ಗೆ ಭಯವಾಗುತ್ತಿದೆ. ವೈದ್ಯರು ಏನೂ ಹೇಳುತ್ತಿಲ್ಲ ಎಂದು ಪಿಂಕಿ ಆತಂಕ ವ್ಯಕ್ತಪಡಿಸಿದ್ದಾಳೆ. ತಾನು ವಯಸ್ಕಳಾಗಿದ್ದು, ತನ್ನ ಆಯ್ಕೆಯ ಬಗ್ಗೆ ತನಗೆ ಸಂತೋಷವಿದೆ. ತನಗೆ ತನ್ನ ಪತಿ ಮರಳಿ ಬೇಕು ಎಂದು ಪಿಂಕಿ ಒತ್ತಾಯಿಸಿದ್ದಾಳೆ.

ತಾನು ಮತ್ತು ರಶೀದ್ ಮದುವೆ ನೋಂದಣಿಗೆ ತೆರಳುತ್ತಿದ್ದಾಗ, ‘ಲವ್ ಜಿಹಾದ್’ ಆರೋಪ ಮಾಡಿ ತನಗೆ 10-15 ಜನ ಥಳಿಸಿದ್ದರು ಮತ್ತು ತನ್ನನ್ನು ಪೊಲೀಸರಿಗೆ ಒಪ್ಪಿಸಿದ್ದರು ಎಂದು ಪಿಂಕಿ ಹೇಳಿದ್ದಾಳೆ.

“ನನ್ನನ್ನು ಇರಿಸಿದ್ದ ಸಂಸ್ಥೆಯ ಪೋಷಕರ ಬಳಿ ಹೊಟ್ಟೆ ನೋವಿಗೆ ಔಷಧಿ ಕೊಡುವಂತೆ ಕೇಳಿದ್ದೆ, ಅದಕ್ಕೆ ಅವರು ನಾನು ನಾಟಕ ಮಾಡುತ್ತಿದ್ದೇನೆ ಎನ್ನುತ್ತಿದ್ದರು ಮತ್ತು ಸಹಾಯ ಮಾಡಲೇ ಇಲ್ಲ. ನನಗೆ ರಕ್ತಸ್ರಾವ ಆರಂಭವಾದ ಮೇಲೆ ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ನನಗೆ ಮಾತ್ರೆ ಮತ್ತು ಇಂಜೆಕ್ಷನ್ ಗಳನ್ನು ನೀಡಿದ್ದಾರೆ. ಆದರೆ, ಪರಿಸ್ಥಿತಿ ಇನ್ನೂ ಬಿಗಡಾಯಿಸಿತು. ನನಗೆ ಇನ್ನೂ ರಕ್ತಸ್ರಾವ ಆಗುತ್ತಲೇ ಇದೆ’’ ಎಂದು ಪಿಂಕಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ ಮತ್ತು ತನ್ನನ್ನು ಇಡಲಾಗಿದ್ದ ಸಂಸ್ಥೆಯೊಳಗೆ ಅನುಭವಿಸಿದ ಕಹಿ ಘಟನೆಗಳನ್ನು ಸ್ಮರಿಸಿದ್ದಾಳೆ.

ಪಿಂಕಿಗೆ ಗರ್ಭಪಾತವಾಗಿರುವ ಬಗ್ಗೆ ಹಿರಿಯ ಅಧಿಕಾರಿಗಳು ನಿರಾಕರಿಸಿದ್ದಾರೆ. ಆಕೆಗೆ ಹೆಚ್ಚಿನ ಚಿಕಿತ್ಸೆಗೆ ಮೀರತ್ ನ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಲಾಗಿದೆ ಎಂದಿದ್ದಾರೆ.

ಪಿಂಕಿ ಮತ್ತು ರಶೀದ್ 2019ರಲ್ಲಿ ಡೆಹ್ರಾಡೂನ್ ನಲ್ಲಿ ಭೇಟಿಯಾಗಿದ್ದರು. ಪಿಂಕಿ ಬಿಜನೂರ್ ಮೂಲದವಳಾಗಿದ್ದು, ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ರಶೀದ್ ಸೆಲೂನ್ ನಲ್ಲಿ ಕೆಲಸ ಮಾಡುತ್ತಿದ್ದ. ಆಗಸ್ಟ್ ನಿಂದ ರಶೀದ್ ಮತ್ತು ಪಿಂಕಿ ಜೊತೆಗಿದ್ದರು. ಇತ್ತಿಚೆಗೆ ಅವರು ಮದುವೆಯಾಗುವ ಬಗ್ಗೆ ನಿರ್ಧರಿಸಿ ಮನೆಯಲ್ಲಿ ತಿಳಿಸಿದ್ದರು. ಈ ವಿಷಯ ರಶೀದ್ ಮನೆಯಲ್ಲಿ ಗೊತ್ತಾಗಿ, ಅವರು ಇಬ್ಬರ ಪ್ರೀತಿಯನ್ನು ಸ್ವೀಕರಿಸಿದರು. ಆದರೆ, ನೂತನ ಕಾನೂನಿಗೆ ಹೆದರಿ ಮದುವೆಯನ್ನು ನೋಂದಣಿ ಮಾಡಿಸಲು ನ್ಯಾಯವಾದಿಯ ಸಲಹೆ ಪಡೆದಿದ್ದರು. ನೋಂದಣಿಗಾಗಿ ನ್ಯಾಯವಾದಿ ಬಳಿ ಹೋಗಿದ್ದಾಗ, ಪಿಂಕಿಯ ತಾಯಿಯ ದೂರಿನ ಆಧಾರದಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದರು.    



Join Whatsapp