ಕಳೆದ ವರ್ಷ ಬಿಜೆಪಿಗೆ ರೂ. 614.53 ಕೋಟಿ, ಕಾಂಗ್ರೆಸ್ಸಿಗೆ 95.46 ಕೋಟಿ ದೇಣಿಗೆ

Prasthutha|

ನವದೆಹಲಿ: 2021- 22ನೇ ಹಣಕಾಸು ವರ್ಷದಲ್ಲಿ ಬಿಜೆಪಿ ರೂ. 614.53 ಕೋಟಿ ದೇಣಿಗೆ ಪಡೆದಿದೆ. ಇದು ಪ್ರಮುಖ ಪ್ರತಿ ಪಕ್ಷ ಕಾಂಗ್ರೆಸ್ ಪಡೆದುದಕ್ಕಿಂತ ಆರು ಪಟ್ಟು ಹೆಚ್ಚಾಗಿದೆ. ಅದೇ ಹಣಕಾಸು ವರ್ಷದಲ್ಲಿ ಕಾಂಗ್ರೆಸ್ ಪಡೆದ ದೇಣಿಗೆಯು ರೂ. 95.46 ಕೋಟಿಗಳಾಗಿವೆ.  ಇದು ಚುನಾವಣಾ ಆಯೋಗ ನೀಡಿರುವ ಲೆಕ್ಕಾಚಾರ.

ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ರೂ. 43 ಲಕ್ಷ ಮತ್ತು ಕೇರಳದಲ್ಲಿ ಅಧಿಕಾರದಲ್ಲಿರುವ ಸಿಪಿಎಂ ರೂ. 10 ಕೋಟಿ ರೂಪಾಯಿ ದೇಣಿಗೆಯನ್ನು ಇದೇ ಅವಧಿಯಲ್ಲಿ ಪಡೆದಿವೆ.

- Advertisement -

2021ರ ಮಾರ್ಚ್ ಏಪ್ರಿಲ್ ನಲ್ಲಿ ಪಶ್ಚಿಮ ಬಂಗಾಳದ ಚುನಾವಣೆ ನಡೆದರೆ, ಅದೇ ಏಪ್ರಿಲ್ ನಲ್ಲಿ ಕೇರಳದಲ್ಲಿ ಚುನಾವಣೆ ನಡೆದಿತ್ತು.

ಈ ನಾಲ್ಕು ರಾಷ್ಟ್ರೀಯ ಪಕ್ಷಗಳು ತಾವು ಸ್ವೀಕರಿಸಿದ ದೇಣಿಗೆ ಮಾಹಿತಿಯನ್ನು ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ. ಆಯೋಗವು ನವೆಂಬರ್ 29ರಂದು ಈ ಮಾಹಿತಿಯನ್ನು ಹೊರಗಿಟ್ಟಿದೆ.

ಜನ ಪ್ರಾತಿನಿಧ್ಯ ಕಾಯ್ದೆಯ ಪ್ರಕಾರ ರಾಜಕೀಯ ಪಕ್ಷಗಳು ಒಬ್ಬರಿಂದ ಇಲ್ಲವೇ ಒಂದು ಕಡೆಯಿಂದ ರೂ. 20,000ಕ್ಕಿಂತ ಹೆಚ್ಚು ದೇಣಿಗೆ ಪಡೆದರೆ ಅವುಗಳ ಲೆಕ್ಕ ಕೊಡಬೇಕು.

ವ್ಯಕ್ತಿಗತವಾಗಿ, ಸಂಸ್ಥೆಗಳು ಅಲ್ಲದೆ ಚುನಾವಣಾ ಟ್ರಸ್ಟ್’ಗಳ ಮೂಲಕವೂ ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂದಾಯವಾಗುತ್ತದೆ. ಬಿಜೆಪಿಗೆ ಭಾರೀ ಹಣ ನೀಡಿರುವುದರಲ್ಲಿ ಪ್ರುಡೆಂಟ್ ಎಲೆಕ್ಟೊರಾಲ್ ಟ್ರಸ್ಟ್, ಮುಖ್ಯವಾದುದಾಗಿದೆ.

ಮೂರು ರಾಜ್ಯಗಳಲ್ಲಿ ನೋಂದಾಯಿತ ಪಕ್ಷವಾಗಿರುವ ಮತ್ತು ದಿಲ್ಲಿ ಹಾಗೂ ಪಂಜಾಬ್’ನಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷವು 2021-22ರ ಹಣಕಾಸು ವರ್ಷದಲ್ಲಿ  ರೂ. 44.54 ಕೋಟಿ ಪಡೆದುದಾಗಿ ಚುನಾವಣಾ ಆಯೋಗಕ್ಕೆ ಲೆಕ್ಕ ನೀಡಿದೆ.

ಈ ಅಕ್ಟೋಬರ್ ನಲ್ಲಿ ಚುನಾವಣಾ ಆಯೋಗಕ್ಕೆ ಎಎಪಿ ಸಲ್ಲಿಸಿರುವ ಲೆಕ್ಕಾಚಾರದಂತೆ ಆ ಪಕ್ಷವು ಕಳೆದ ಆರ್ಥಿಕ ವರ್ಷದಲ್ಲಿ ರೂ. 30.30 ಕೋಟಿ ವೆಚ್ಚ ಮಾಡಿದೆ. ಎಎಪಿ ಪಕ್ಷವು ದಿಲ್ಲಿ, ಪಂಜಾಬ್ ಅಲ್ಲದೆ ಗೋವಾದಲ್ಲೂ ಅಧಿಕೃತ ಪಕ್ಷವೆಂದು ನೋಂದಾಯಿತವಾಗಿದೆ.

- Advertisement -