ಕಾನ್ಪುರ ಟೆಸ್ಟ್: ರೋಚಕ ಡ್ರಾದಲ್ಲಿ ಅಂತ್ಯ

Prasthutha|

ಭಾರತಕ್ಕೆ ಗೆಲುವು ನಿರಾಕರಿಸಿದ ರಚಿನ್ ರವೀಂದ್ರಾ, ಅಜಾಝ್ ಪಟೇಲ್ !

- Advertisement -

ಕಾನ್ಪುರ: ಅಂತಿಮ ವಿಕೆಟ್ ಜೊತೆಯಾಟದಲ್ಲಿ ಕಿವೀಸ್ ಬ್ಯಾಟರ್’ಗಳು ತೋರಿದ ದಿಟ್ಟ ಹೋರಾಟದಿಂದಾಗಿ ಪ್ರವಾಸಿ ನ್ಯೂಜಿಲೆಂಡ್ ಟೀಮ್ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಚಕ ಡ್ರಾ ಸಾಧಿಸಿದೆ. ಅಂತಿಮ ದಿನದಾಟದಲ್ಲಿ ಗೆಲುವಿಗೆ 260 ಗಳಿಸಬೇಕಿದ್ದ ಕಿವೀಸ್ ಪಡೆ 9 ವಿಕೆಟ್ ನಷ್ಟದಲ್ಲಿ 165 ರನ್’ಗಳಿಸುವ ಮೂಲಕ ಪಂದ್ಯ ಡ್ರಾ ಕಾಣುವಂತಾಯಿತು.

128 ರನ್’ಗಳಿಸುವಷ್ಟರಲ್ಲೇ ಪ್ರವಾಸಿ ತಂಡದ 6 ವಿಕೆಟ್ ಪತನವಾಗಿತ್ತು. ಈ ಹಂತದಲ್ಲಿ ಟೀಮ್ ಇಂಡಿಯಾ ಗ್ರೀನ್ ಪಾರ್ಕ್ ಮೈದಾನದಲ್ಲಿ ಗೆಲುವಿನ ಬಾವುಟ ಹಾರಿಸಲು ಸಜ್ಜಾಗಿತ್ತು. ಆದರೆ ಸೋಲಿನ ಸುಳಿಯಲ್ಲಿ ಸಿಲುಕಿದ್ದ ನ್ಯೂಜಿಲೆಂಡ್ ತಂಡಕ್ಕೆ ಭಾರತೀಯ ಮೂಲದ ರಚಿನ್ ರವೀಂದ್ರಾ ಹಾಗೂ ಅಜಾಝ್ ಪಟೇಲ್ ಆಸರೆಯಾದರು.

- Advertisement -

ಅಂತಿಮ ವಿಕೆಟ್’ಗೆ 52 ಎಸೆತಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾದ ಈ ಜೋಡಿ ಭಾರತದ ಗೆಲುವಿನ ಆಸೆಗೆ ತಣ್ಣೀರೆರಚಿದರು. 91 ಎಸೆತಗಳನ್ನು ಎದುರಿಸಿದ ರಚಿನ್ ರವೀಂದ್ರಾ,18 ರನ್ ಹಾಗೂ 23 ಎಸೆತಗಳನ್ನು ಎದುರಿಸಿ 2 ರನ್ ಗಳಿಸಿ ಅಜಾಝ್ ಪಟೇಲ್ ಅಜೇಯರಾಗುಳಿದರು.

ಇದಕ್ಕೂ ಮೊದಲು 1 ವಿಕೆಟ್ ನಷ್ಟದಲ್ಲಿ 4 ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿದ್ದ ಕೇನ್ ವಿಲಿಯಮ್ಸನ್ ಪಡೆಗೆ ಟಾಮ್ ಲಾಥಮ್ ಹಾಗೂ ವಿಲ್ ಸೋಮರ್’ವಿಲ್ಲೆ ಜೊತೆಯಾಟ ಮೊದಲ ಅವಧಿಯಲ್ಲಿ ಬಲತುಂಬಿತು. ಲಾಥಮ್ ಆಕರ್ಷಕ ಅರ್ಧ ಶತಕ ಗಳಿಸಿದರೆ, ಸೋಮರ್’ವಿಲ್ಲೆ 36 ರನ್’ಗಳಿಸಿ ನಿರ್ಗಮಿಸಿದರು. ತಾಳ್ಮೆಯ ಬ್ಯಾಟಿಂಗ್ ನಡೆಸುತ್ತಿದ್ದ ಕ್ಯಾಪ್ಟನ್ ವಿಲಿಯಮ್ಸನ್ 24 ರನ್ ಹಾಗೂ ರಾಸ್ ಟೇಲರ್ 2 ರನ್’ಗಳಿಸಿದ್ದ ವೇಳೆ ಜಡೇಜಾ ಬೌಲಿಂಗ್’ನಲ್ಲಿ LBW ಆದರು.

ಈ ವೇಳೆ ಪಂದ್ಯ ನ್ಯೂಜಿಲೆಂಡ್ ಕೈ ಜಾರಿ ಭಾರತದ ಗೆಲುವಿನ ಹಾದಿ ಸುಗಮವಾಗಿತ್ತು. ಆದರೆ ಬಳಿಕ ಭಾರತದ ಬೌಲರ್’ಗಳನ್ನು ದಿಟ್ಟ ರೀತಿಯಲ್ಲಿ ಎದುರಿಸಿದ ರಚಿನ್ ರವೀಂದ್ರಾ, ನ್ಯೂಜಿಲೆಂಡ್ ಪಾಲಿಗೆ ಹೀರೋ ಆದರು.

ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್ ಹಾಗೂ ಆರ್. ಆಶ್ವಿನ್ 3 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್’ನಲ್ಲಿ 5ವಿಕೆಟ್ ಪಡೆದಿದ್ದ ಅಕ್ಷರ್ ಪಟೇಲ್ ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾದರು.

ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್’ನಲ್ಲಿ ಶತಕ (105) ಹಾಗೂ ಎರಡನೇಇನ್ನಿಂಗ್ಸ್’ನಲ್ಲಿ ಅರ್ಧ ಶತಕ (65) ದಾಖಲಿಸಿದ್ದ ಶ್ರೇಯಸ್ ಅಯ್ಯರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸರಣಿಯ 2ನೇ ಹಾಗೂ ಅಂತಿಮ ಟೆಸ್ಟ್ ಡಿಸೆಂಬರ್ 3ರಿಂದ ಮುಂಬೈನ ವಾಂಖೆಡೆ ಮೈದಾನದಲ್ಲಿ ಆರಂಭಗಲಿದೆ.

Join Whatsapp