ಜಾಮಿಯಾ ಮಿಲ್ಲಿಯಾ ಹಳೆ ವಿದ್ಯಾರ್ಥಿ, ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ದಾನಿಶ್ ಸಿದ್ದೀಖಿ ಹತ್ಯೆ

Prasthutha|

► ಅಫಘಾನಿಸ್ತಾನದಲ್ಲಿ ಆಂತರಿಕ ಸಂಘರ್ಷದ ವರದಿ ಮಾಡುತ್ತಿದ್ದ ಸಿದ್ದೀಖಿ !

- Advertisement -

ನವದೆಹಲಿ: ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಮೂಲದ ಫೋಟೋ ಜನರ್ಲಿಸ್ಟ್ ದಾನಿಶ್ ಸಿದ್ದೀಖಿ ಅವರನ್ನು ಗುರುವಾರ ರಾತ್ರಿ ಅಫ್ಘಾನಿಸ್ತಾನದ ಕಂದಹಾರ್ ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಿದ್ದೀಖಿ ಅವರು ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸಿದ್ದೀಖಿ ಅವರು ಅಪಘಾನ್ ವಿಶೇಷ ಪಡೆಗಳೊಂದಿಗೆ ತೆರಳಿ ಈ ಪ್ರದೇಶದಲ್ಲಿ ತಾಲಿಬಾನ್ ವಿರುದ್ಧದ ಕಾರ್ಯಾಚರಣೆಗಳ ಬಗ್ಗೆ ವರದಿ ಮಾಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ದಾನಿಶ್ ಸಿದ್ದೀಖಿ ಕಂದಹಾರ್ ನಲ್ಲಿ ನಡೆಯುತ್ತಿರುವ ಗಲಭೆಗಳ ಫೋಟೊಗೆಂದು ಅಲ್ಲಿ ತೆರಳಿದ್ದರು. ಅಫ್ಘಾನ್ ವಿಶೇಷ ಪಡೆಯ ಭದ್ರತೆಯೊಂದಿಗೆ ಅವರು ಅಲ್ಲಿ ಕೆಲಸ ಮಾಡುತ್ತಿದ್ದರು.
ಜೂನ್ 13ರಂದು ಸಿದ್ದೀಖಿ ವಿಶೇಷ ಪಡೆಯೊಂದಿಗೆ ಪ್ರಯಾಣಿಸುತ್ತಿದ್ದಾಗ ಅವರ ವಾಹನಗಳ ಮೇಲೆ ದಾಳಿಯಾಗಿತ್ತು. ಈ ಕುರಿತು ಅವರು ಟ್ವೀಟ್ ಮಾಡಿ, ಅದೃಷ್ಟವಶಾತ್ ನಾನು ಸುರಕ್ಷಿತವಾಗಿದ್ದೇನೆ. ಅಲ್ಲದೆ ರಾಕೆಟ್ ಹೊಡೆಯುವ ದೃಶ್ಯವನ್ನು ಸೆರೆ ಹಿಡಿಯಲು ಸಾಧ್ಯವಾಗಿದೆ ಎಂದು ಅವರು ಬರೆದುಕೊಂಡಿದ್ದರು.
ತಾಲಿಬಾನ್ ಮತ್ತು ಸರ್ಕಾರಿ ಪಡೆಗಳ ನಡುವಿನ ಘರ್ಷಣೆಯಲ್ಲಿ ಸಿದ್ದೀಖಿ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಮೇರಿಕ ನೇತೃತ್ವದ ಅಂತಾರಾಷ್ಟ್ರೀಯ ಪಡೆಗಳು ಅಫಘಾನಿಸ್ತಾನ್ ನಿಂದ ಹಿಂದೆ ಸರಿಯುತ್ತಿರುವ ಕಾರಣದಿಂದ ಉತ್ತರ ಮತ್ತು ಪಶ್ಚಿಮ ಅಫ್ಘಾನ್ ನ ಹಲವಾರು ಜಿಲ್ಲೆಗಳು ಮತ್ತು ಗಡಿರೇಖೆಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ
ಫೋಟೊ ಜರ್ನಲಿಸ್ಟ್ ಸಿದ್ದೀಖಿ ಸಾವಿನ ಬಗ್ಗೆ ಅಫ್ಘಾನಿಸ್ತಾನದ ಭಾರತದ ರಾಯಭಾರಿ ಫರೀದ್ ಮಾಮುಂಡ್ಜೆ ಅವರು ಟ್ವೀಟ್ ಮೂಲಕ ದೃಢಪಡಿಸಿದ್ದಾರೆ.
ಸಿದ್ದೀಖಿ ಅವರು ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಅವರು 2007 ರಲ್ಲಿ ಜಾಮಿಯಾದ ಎಜೆಕೆ ಮಾಸ್ ಕಮ್ಯುನಿಕೇಷನ್ ರಿಸರ್ಚ್ ಸೆಂಟರ್ ನಿಂದ ಸಮೂಹ ಮಾಧ್ಯಮ ವಿಷಯದಲ್ಲಿ ಪದವಿ ಪಡೆದಿದ್ದರು.

Join Whatsapp