ಎರಡನೇ ಟಿ20| ಸರಣಿ ಗೆಲುವಿನ ತವಕದಲ್ಲಿ ಟೀಮ್ ಇಂಡಿಯಾ

Prasthutha|

ಗುವಾಹಟಿ: ಟೀಮ್ ಇಂಡಿಯಾ- ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ನಿರ್ಣಾಯಕ ಎರಡನೇ ಪಂದ್ಯ ಭಾನುವಾರ ಗುವಾಹಟಿಯಲ್ಲಿ ನಡೆಯಲಿದೆ. ಸರಣಿಯ ಮೊದಲನೇ ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿರುವ ರೋಹಿತ್ ಶರ್ಮಾ ಬಳಗ, ಇಂದಿನ ಪಂದ್ಯವನ್ನು ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ.
ಆದರೆ ಭಾರತದ ನೆಲದಲ್ಲಿ ಒಮ್ಮೆಯೂ ಟಿ20 ಸರಣಿ ಬಿಟ್ಟುಕೊಡದ ಹರಿಣಗಳು ಸಮಬಲದ ಗೆಲುವಿಗೆ ಕಠಿಣ ಅಭ್ಯಾಸದಲ್ಲಿ ತೊಡಗಿದೆ.

- Advertisement -

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡೋ-ಆಫ್ರಿಕಾ ಕದನ ನಡೆಯಲಿದ್ದು, ಪಂದ್ಯದ ಟಿಕೆಟ್‌ಗಳೆಲ್ಲವೂ ಈಗಾಗಲೇ   ಸೋಲ್ಡ್ ಔಟ್ ಆಗಿದೆ.
ಈ ಮೈದಾನದಲ್ಲಿ ಟೀಮ್ ಇಂಡಿಯಾ ಇದುವರೆಗೂ ಕೇವಲ ಎರಡು ಪಂದ್ಯಗಳನ್ನಷ್ಟೇ ಆಡಿದೆ.
ಮೊದಲನೇ ಪಂದ್ಯ ಮಳೆಯಿಂದಾಗಿ ಫಲಿತಾಂಶ ಕಾಣದೇ ರದ್ದಾಗಿತ್ತು. ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಹೆ ಎಂಟು ವಿಕೆಟ್‌ಗಳಿಂದ ಭಾರತ ಶರಣಾಗಿತ್ತು.

ಭಾರತದ ಬ್ಯಾಟಿಂಗ್ ಬಲಿಷ್ಠವಾಗಿದೆ. ರಾಹುಲ್-ಕೊಹ್ಲಿ-ಸೂರ್ಯಕುಮಾರ್ ಬ್ಯಾಟ್ ನಿಂದ ಉತ್ತಮ ರನ್ ಬರುತ್ತಿದೆ. ಆದರೆ ಬೌಲಿಂಗ್ ವಿಭಾಗದ ಸಮಸ್ಯೆಗೆ ಇನ್ನೂ ಪರಿಹಾರ ಕಂಡುಕೊಳ್ಳಲು ಆಗಿಲ್ಲ.
ಬೆನ್ನುನೋವಿನಿಂದ ತಂಡದಿಂದ ಹೊರನಡೆದಿರುವ ಬುಮ್ರಾ ಸ್ಥಾನದಲ್ಲಿ ಮುಹಮ್ಮದ್ ಸಿರಾಜ್ ಆಡುವ ಸಾಧ್ಯತೆ ಇದೆ. ಆದರೆ ಕಳೆದ 5 ವರ್ಷಗಳಲ್ಲಿ ಕೇವಲ 5 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಷ್ಟೇ ಸಿರಾಜ್, ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದಾರೆ. ಮೊದಲ ಪಂದ್ಯದಲ್ಲಿ ಮಿಂಚಿನ ಬೌಲಿಂಗ್ ನಡೆಸಿದ್ದ ಅರ್ಷದೀಪ್ ಸಿಂಗ್ ಮತ್ತು ದೀಪಕ್ ಚಹಾರ್ ಭಾನುವಾರದ ಪಂದ್ಯದಲ್ಲೂ ಅದೇ ಲಯ ಕಂಡುಕೊಂಡರೆ ಭಾರತದ ಗೆಲುವು ಸುಲಭವಾಗಲಿದೆ.

- Advertisement -

ಮತ್ತೊಂದೆಡೆ ವಿಶ್ವಕಪ್ ಗೆ ಪ್ರಕಟಿಸಲಾಗಿರುವ ತಂಡದ ಜೊತೆ ಭಾರತಕ್ಕೆ ಬಂದಿಳಿದಿರುವ ಆಫ್ರಿಕಾ, ಮೊದಲ ಪಂದ್ಯದಲ್ಲಿ ಆಡಿದ್ದ ಹನ್ನೊಂದರ ಬಳಗವನ್ನೇ, ಗುವಾಹಟಿಯಲ್ಲೂ ಆಡಿಸುವ ನಿರೀಕ್ಷೆ ಇದೆ.

ಸಂಜೆ 7 ಗಂಟೆಗೆ ಪಂದ್ಯ ಪ್ರಾರಂಭವಾಗಲಿದ್ದು, ಟಾಸ್ 6.30ಕ್ಕೆ ನಡೆಯಲಿದೆ.

Join Whatsapp