ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 36 ರನ್‌ಗಳಿಂದ ಭರ್ಜರಿ ಗೆಲುವು

Prasthutha|

ಚೆನ್ನೈ: ಇಲ್ಲಿಯ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 36 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ.

- Advertisement -

ಮೇ 26ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸನ್‌ರೈಸಸ್‌ ಹೈದರಾಬಾದ್ ಮತ್ತು ಕೆಕೆಆರ್ ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣೆಸಲಿವೆ. ಈ ಪಂದ್ಯ ಕೂಡ ಚಿದಂಬರಂ ಸ್ಟೇಡಿಯಂನಲ್ಲೇ ನಡೆಯಲಿದೆ.​

ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಸನ್​ರೈಸರ್ಸ್​ ಹೈದರಾಬಾದ್​ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 175 ರನ್​ ಬಾರಿಸಿತು. ಜವಾಬಿತ್ತ ರಾಜಸ್ಥಾನ್​ ಉತ್ತಮ ಆರಂಭ ಪಡೆದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್​ ನಷ್ಟಕ್ಕೆ 139 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು

- Advertisement -

ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು.

ಟ್ರಾವಿಸ್ ಹೆಡ್ 28 ಎಸೆತಗಳಲ್ಲಿ 34 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ 5 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. ರಾಹುಲ್ ತ್ರಿಪಾಠಿ 15 ಎಸೆಗಳಲ್ಲಿ 5 ಬೌಂಡರಿ 2 ಸಿಕ್ಸರ್ ಸಹಿತ ಸ್ಫೋಟಕ 37 ರನ್ ಗಳಿಸಿದರೂ, ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಟ್ರೆಂಟ್ ಬೌಲ್ಟ್ ತಮ್ಮ ಮೊದಲ ಮೂರು ಓವರ್ ಗಳಲ್ಲಿ ಮೂರು ವಿಕೆಟ್ ಪಡೆದು ಸನ್‌ರೈಸರ್ಸ್ ಹೈದರಾಬಾದ್‌ಗೆ ಆಘಾತ ನೀಡಿದರು.

ಮಾರ್ಕ್ರಮ್ 1 ರನ್‌ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ನಿತೀಶ್ ರೆಡ್ಡಿ 5 ರನ್ ಗಳಿಸಿದರೆ, ಅಬ್ದುಲ್ ಸಮದ್ ರನ್ ಗಳಿಸುವ ಮೊದಲೇ ಔಟಾದರು. ಶಹಬಾಜ್ ಅಹಮದ್ 18 ರನ್ ಮತ್ತು ಹೆನ್ರಿಚ್ ಕ್ಲಾಸೆನ್ 50 ರನ್‌ ಗಳಿಸುವ ಮೂಲಕ ತಂಡದ ಮೊತ್ತ 175 ರನ್‌ಗಳಿಗೆ ಏರಿತು.

ರಾಜಸ್ಥಾನ್ ರಾಯಲ್ಸ್ ಪರವಾಗಿ ಟ್ರೆಂಟ್ ಬೋಲ್ಟ್ 3 ವಿಕೆಟ್ ಪಡೆದರೆ, ಆವೇಶ್ ಖಾನ್ ಕೂಡ 3 ವಿಕೆಟ್ ಪಡೆದು ಮಿಂಚಿದರು. ಸಂದೀಪ್ ಶರ್ಮಾ 2 ವಿಕೆಟ್ ಪಡೆದುಕೊಂಡರು.

176 ರನ್‌ಗಳನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್‌ಗೆ ಸನ್‌ರೈಸರ್ಸ್ ಹೈದರಾಬಾದ್ ಬೌಲರ್ ಗಳು ಆಘಾತ ನೀಡಿದರು. ಯಶಸ್ವಿ ಜೈಸ್ವಾಲ್ 21 ಎಸೆತಗಳಲ್ಲಿ 42 ರನ್ ಗಳಿಸಿದರೆ, ಧ್ರುವ್ ಜುರೆಲ್ 35 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದರು. ಉಳಿದಂತೆ ಯಾವ ಬ್ಯಾಟರ್ ಕೂಡ ಹೆಚ್ಚಿನ ರನ್ ಗಳಿಸಲಿಲ್ಲ.

ಟಾಮ್ ಕೊಹ್ಲರ್ ಕಾಡ್ಮೋರ್ 10 ರನ್, ಸಂಜು ಸ್ಯಾಮ್ಸನ್ 10 ರನ್, ರಿಯಾನ್ ಪರಾಗ್ 6 ರನ್, ರವಿಚಂದ್ರನ್ ಅಶ್ವಿನ್ 0, ಶಿಮ್ರಾನ್ ಹೆಟ್ಮೆಯರ್ 4 ರನ್, ರೋವ್ಮನ್ ಪೊವೆಲ್ 6 ರನ್ ರನ್ ಗಳಿಸಿದರು.

ಶಹಬಾಜ್ ಅಹ್ಮದ್ 4 ಓವರ್ ಗಳಲ್ಲಿ 23 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಅಭಿಷೇಕ್ ಶರ್ಮಾ 4 ಓವರ್ ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದುಕೊಂಡರು. ಪಾಟ್ ಕಮ್ಮಿನ್ಸ್ ಮತ್ತು ಟಿ ನಟರಾಜನ್ ತಲಾ ಒಂದು ವಿಕೆಟ್ ಪಡೆದುಕೊಂಡರು.

Join Whatsapp