ಬಿಜೆಪಿ ಬಲಿಷ್ಠವಾಗಿದ್ದರೆ ಜೆಡಿಎಸ್‌ ಬೆಂಬಲವನ್ನೇಕೆ ಕೇಳುತ್ತಿದ್ದರು: ಡಿ.ಕೆ. ಶಿವಕುಮಾರ್

Prasthutha|

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದರೆ ಜೆಡಿಎಸ್‌ ಬೆಂಬಲವನ್ನೇಕೆ ಕೇಳುತ್ತಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

- Advertisement -

ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ಇಲ್ಲಿ ಬಹಳ ಒಳ್ಳೆಯ ವಾತಾವರಣ ಇದೆ. ಮಳೆ, ಬೆಳೆ ಎಲ್ಲವೂ ಚೆನ್ನಾಗಿ ಆಗುತ್ತಿದ್ದು, ರಾಜಕೀಯದಲ್ಲೂ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದೇವೆ. ಕಳೆದ ಬಾರಿಗಿಂತ ಹೆಚ್ಚಿನ ಸೀಟು ಗೆಲ್ಲುವ ವಿಶ್ವಾಸ ಇದೆ. ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಮಾತ್ರ ಈ ಚುನಾವಣೆ. ನಾವು ಗ್ರಾಮ ಪಂಚಾಯಿತಿಗೆ ಹೆಚ್ಚಿನ ಒತ್ತು ನೀಡಿದ್ದು, ಜೆ.ಹೆಚ್ ಪಟೇಲರ ಕಾಲದಲ್ಲಿದ್ದ 1 ಲಕ್ಷ ರುಪಾಯಿ ಅನುದಾನವನ್ನು ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ 5 ಲಕ್ಷಕ್ಕೆ ಹೆಚ್ಚಿಸಿ ನಾವು ಗ್ರಾಮ ಪಂಚಾಯಿತಿಗೆ ಶಕ್ತಿ ತುಂಬಿದೆವು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರು ಜನರ ಸೇವೆ ಮಾಡಲು ಶಕ್ತಿ ಇದೆ ಎಂದರೆ ಅದು ಕಾಂಗ್ರೆಸ್ ನ ನರೇಗಾ ಕಾರ್ಯಕ್ರಮದಿಂದ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ರಾಜೀವ್ ಗಾಂಧಿ ಅವರು ಸಂವಿಧಾನ ತಿದ್ದುಪಡಿ ತಂದು ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ತಂದರು. ಇದೆಲ್ಲವೂ ಕಾಂಗ್ರೆಸ್ ಕಾರ್ಯಕ್ರಮ ಎಂದು ಗ್ರಾಮ ಪಂಚಾಯಿತಿ ಸದಸ್ಯರಿಗೆ ಅರಿವಾಗಿದೆ. ಅವರೆಲ್ಲ ಪ್ರಜ್ಞಾವಂತರಿದ್ದು, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಪ್ರಯೋಜನವಾಗಿಲ್ಲ ಎಂದು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಲಿದ್ದಾರೆ.

- Advertisement -


ಈ ಚುನಾವಣೆ ಮುಂದಿನ ವಿಧಾನಸಭೆಗೆ ದಿಕ್ಸೂಚಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಬಿಜೆಪಿ ಪಕ್ಷದವರೇ ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಯಡಿಯೂರಪ್ಪನವರು ಜನತಾದಳದ ಬೆಂಬಲ ಕೇಳಿದ್ದು, ಬೊಮ್ಮಾಯಿ ಅವರೂ ಕೇಳುತ್ತಿದ್ದಾರೆ ಎಂಬ ಸುದ್ದಿ ನೋಡಿದ್ದೇನೆ. ಈಗ ಬಿಜೆಪಿಯವರು ಬೆಂಬಲ ಕೇಳಿದ್ದಾರೆ ಎಂದರೆ ಅವರ ಶಕ್ತಿ ಏನು? ಎಷ್ಟು ಕುಂದಿದೆ? ಜನತಾದಳದ ಬಗ್ಗೆ ಅರುಣ್ ಸಿಂಗ್ ಹೇಳಿಕೆ ಕೊಟ್ಟ ಮೇಲೆ, ಯಡಿಯೂರಪ್ಪನವರು ಬೆಂಬಲ ಕೇಳಿದ್ದಾರೆ ಎಂದರೆ ಮುಳುಗುತ್ತಿರುವವರು ಯಾರು? ಎಂದು ಜನರೇ ತೀರ್ಮಾನಿಸಲಿ. ಬಿಜೆಪಿಯವರು ಬಲಿಷ್ಠವಾಗಿದ್ದರೆ ಬೇರೆಯವರ ಬೆಂಬಲ ಯಾಕೆ ಕೇಳುತ್ತಿದ್ದರು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಮ್ಮ ಜತೆ ಮೈತ್ರಿ ಮಾಡಿಕೊಳ್ಳದಿದ್ದರೆ ನಾವು ಏನು ಮಾಡಬೇಕು ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಅವರವರ ಶಕ್ತಿಗೆ ಅನುಗುಣವಾಗಿ ಅವರು ಆತ್ಮವಿಶ್ವಾಸದಲ್ಲಿ ಚುನಾವಣೆ ಎದುರಿಸಬೇಕು’ ಎಂದರು.]


ಸೋಮಣ್ಣನವರು ಪತ್ರಿಕಾಗೋಷ್ಠಿ ನಡೆಸಿ ಕೆಜಿಎಫ್ ಬಾಬು ಅವರ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತಾರಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನೂರಾರು ಅಭ್ಯರ್ಥಿಗಳು ನೂರಾರು ವ್ಯವಹಾರ ಇಟ್ಟುಕೊಂಡಿರುತ್ತಾರೆ. ಅವರು ದಾಖಲೆ ಬಿಡುಗಡೆ ಮಾಡಲಿ. ಯಾವ ಅಭ್ಯರ್ಥಿ ಬಗ್ಗೆ ಏನು ಅಂತಾ ಹೇಳಲಿ?’ ಆಮೇಲೆ ನೋಡೋಣ ಎಂದರು.


ಕಾಂಗ್ರೆಸ್ ಅಭ್ಯರ್ಥಿ ಸೋಲಿಸುತ್ತೇವೆ ಎಂಬ ರಮೇಶ್ ಜಾರಕಿಹೊಳಿ ಅವರ ಆಕ್ರೋಶದ ಮಾತಿನ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತಾರೆ. ಅವರಿಗೆ ಸ್ವಾಭಿಮಾನ ಇದ್ದರೆ, ಅವರಲ್ಲಿ ಶಿಸ್ತು ಇದ್ದರೆ ಅವರು ಉತ್ತರ ನೀಡಲಿ. ಬಿಜೆಪಿಯಲ್ಲಿ ಶಿಸ್ತು ಇಲ್ಲ, ಇದು ಬ್ಲಾಕ್ ಮೇಲರ್ ಗಳಿಗೆ ಹೆದರುವ ಪಕ್ಷ ಎನ್ನುವುದಾದರೆ ಅವರ ಇಚ್ಛೆಗೆ ಬಂದಂತೆ ಮಾಡಲಿ. ಎಲ್ಲವನ್ನು ಜನ ನೋಡುತ್ತಿದ್ದಾರೆ. ಬಿಜೆಪಿ ಹೆದರಿ ಸರ್ಕಾರ ನಡೆಸುವ ಮಟ್ಟಕ್ಕೆ ಬಂದಿರುವುದು ಬಹಳ ಸಂತೋಷದ ಬೆಳವಣಿಗೆ. ನಮ್ಮ ಪಕ್ಷದಲ್ಲಿ ಈ ರೀತಿ ಮಾಡಿದ್ದರೆ ಒಂದು ಗಂಟೆಯೂ ಪಕ್ಷದಲ್ಲಿ ಇಟ್ಟುಕೊಳ್ಳದೆ ಅವರನ್ನು ವಜಾ ಮಾಡುತ್ತಿದ್ದೆ’ ಎಂದರು.
ಮಹಿಳಾ ಶಾಸಕಿ ವಿರುದ್ಧ ರಮೇಶ್ ಜಾರಕಿಹೊಳಿ ಅವರ ಹಗುರವಾದ ಮಾತುಗಳ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಮಹಿಳಾ ಶಾಸಕಿ ವಿರುದ್ಧ ರಮೇಶ್ ಜಾರಕಿಹೊಳಿ ಅವರು ಆಡಿರುವ ಮಾತುಗಳನ್ನು ಕೆಲ ಮಾಧ್ಯಮಗಳು ಸಂಪೂರ್ಣ ತೋರಿಸಿದರೆ, ಕೆಲವರು ಕಟ್ ಮಾಡಿ ತೋರಿಸಿದ್ದಾರೆ. ಇದು ಬಿಜೆಪಿ ಸಂಸ್ಕೃತಿ ಪ್ರತಿಬಿಂಬ. ಬಿಜೆಪಿ ಸಂಸ್ಕಾರ ಇರುವ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಅದಕ್ಕೆ ಶೋಭಕ್ಕನವರು, ಯಡಿಯೂರಪ್ಪನವರು, ಬೊಮ್ಮಾಯಿಯವರು, ಕಟೀಲ್ ಅವರು ಉತ್ತರ ನೀಡಲಿ’ ಎಂದು ತಿಳಿಸಿದರು.


ಬೆಳಗಾವಿಯಲ್ಲಿ ಮತದಾರರನ್ನು ಬೆದರಿಸಲಾಗುತ್ತಿದೆ ಎಂಬ ಪ್ರಶ್ನೆಗೆ, ‘ನಮ್ಮ ಪಕ್ಷ ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದು, ಗೋಕಾಕ್, ಅರಬಾವಿ, ರಾಯಭಾಗ್ ಹಾಗೂ ಇತರ ಕಡೆಗಳಲ್ಲಿ ಮತದಾರರ ಚೀಟಿ ಪಡೆದು ಬೇರೆಯವರು ಮತ ಹಾಕುವ ಪದ್ಧತಿ ನಡೆದುಕೊಂಡು ಬಂದಿದೆ. ನಮ್ಮ ಜಿಲ್ಲಾ ಘಟಕ, ಅಭ್ಯರ್ಥಿ ಮತ್ತಿತರರು ರಾಜ್ಯ ಮಟ್ಟದ ಚುನಾವಣಾ ಆಯೋಗಕ್ಕೆ ಪ್ರತ್ಯೇಕ ಪೊಲೀಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ವಿಡಿಯೋ ವ್ಯವಸ್ಥೆ ಮಾಡಬೇಕು ಎಂದೂ ಮನವಿ ಮಾಡಿದ್ದೇವೆ. ನಮ್ಮ ಕಾರ್ಯಾಧ್ಯಕ್ಷರು, ಇತರೆ ನಾಯಕರೇ ಬೂತ್ ಏಜೆಂಟರಾಗಿ ಕೂರುತ್ತೇವೆ ಎಂದು ಹೇಳಿದ್ದಾರೆ. ನಮ್ಮ ನಾಯಕರು ಎಲ್ಲಿ ಪ್ರಚಾರ ಮಾಡಬೇಕು ಎಂದು ಹೇಳುತ್ತಾರೋ ಅಲ್ಲಿ ಹೋಗಿ ನಾನು ಪ್ರಚಾರ ಮಾಡುತ್ತೇನೆ’ ಎಂದರು.


ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ‘ಸದ್ಯಕ್ಕೆ ಆ ವಿಚಾರ ಬೇಡ, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಗಮನಹರಿಸೋಣ. ನಾವು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ಅವರು ಕೂಡಲೇ ಬೆಂಗಳೂರು ನಗರ, ಬೆಳಗಾವಿ ಸೇರಿದಂತೆ ಎಲ್ಲ ಕಡೆಗಳಲ್ಲಿ ವಿಡಿಯೋ ವ್ಯವಸ್ಥೆ ಮಾಡಿ, ಮತದಾರರೇ ಮತ ಹಾಕುವಂತೆ ನೋಡಿಕೊಳ್ಳಬೇಕು. ಪಾರದರ್ಶಕ ಹಾಗೂ ಮುಕ್ತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸುತ್ತೇವೆ’ ಎಂದು ಹೇಳಿದರು.


ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಯುವಕರಿದ್ದು, ಸಜ್ಜನರಿದ್ದಾರೆ. ಜನಸೇವೆ ಮಾಡಿಕೊಂಡು ಬಂದಿದ್ದಾರೆ. ಒಂದೇ ಪಕ್ಷದಲ್ಲಿದ್ದು, ನಮ್ಮ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಒಂದು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು ಎಂದರು.
ಬೆಳಗಾವಿ ಅಧಿವೇಶನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎರಡು ವರ್ಷಗಳ ಹಿಂದೆಯೇ ಬೆಳಗಾವಿ ಅಧಿವೇಶನ ನಡೆಯಬೇಕಿತ್ತು. ಅಲ್ಲಿ ಅಧಿವೇಶನ ನಡೆಸದ ಹಿನ್ನೆಲೆಯಲ್ಲಿ ಸುವರ್ಣ ಸೌಧ ಬಾಡಿಗೆಗೆ ನೀಡಿ ಎಂದು ಹೇಳಿದ್ದೆ. ನೆರೆ ಪರಿಹಾರ, ರೈತರಿಗೆ ಬೆಂಬಲ ಬೆಲೆ, ಕೋವಿಡ್ ಸಮಯದಲ್ಲಿ ನೆರವಾಗಿಲ್ಲ, ಕಬ್ಬು ಬೆಳೆಗಾರರಿಗೆ ಹಣ ಕೊಡಿಸಲು ಆಗಿಲ್ಲ. ಜನರ ಆಕ್ರೋಶಕ್ಕೆ ಹೆದರಿ ಇಷ್ಟು ದಿನ ಬೆಳಗಾವಿಯಲ್ಲಿ ಅಧಿವೇಶನ ಮಾಡಿರಲಿಲ್ಲ. ಈಗ ವಿಧಿ ಇಲ್ಲದೇ ಅಧಿವೇಶನ ಮಾಡುತ್ತಿದ್ದಾರೆ’ ಎಂದರು.

Join Whatsapp