ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣವನ್ನು ಸಹಜ ಸಾವು ಎಂದು ನೀಡಿದ್ದ ಸಿಬಿಐ ವರದಿಯನ್ನು ಲಖನೌ ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದು, ಮರು ತನಿಖೆಗೆ ಆದೇಶಿಸಿದೆ.
ಅನುರಾಗ್ ಕುಟುಂಬಸ್ಥರ ದೂರಿನನ್ವಯ ಮರು ತನಿಖೆಗೆ ಕೋರ್ಟ್ ಆದೇಶ ಹೊರಡಿಸಿದೆ. ಕೋರ್ಟ್ ಆದೇಶದಿಂದ ಸಿಬಿಐಗೆ ಭಾರೀ ಹಿನ್ನಡೆಯಾಗಿದೆ. ಇದೇ ಅಕ್ಟೋಬರ್ 22ರಂದು ವಿಚಾರಣೆ ನಡೆಯಲಿದೆ.
2007ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿ ಮೃತದೇಹ 2017ರಲ್ಲಿ ಲಖನೌದ ಹಜರತ್ ಗಂಜ್ ಗೆಸ್ಟ್ ಹೌಸ್ ನಲ್ಲಿ ಪತ್ತೆಯಾಗಿತ್ತು. ಆಗ ತಿವಾರಿ ರಾಜ್ಯದ ಆಹಾರ ಸರಬರಾಜು ಇಲಾಖೆಯ ಆಯುಕ್ತರಾಗಿದ್ದರು. ಅನ್ನಭಾಗ್ಯ ಅಕ್ಕಿ ಹಗರಣದ ಬಗ್ಗೆ ತನಿಖೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಸಜ್ಜಾಗಿದ್ದರು. ಸದ್ಯ ಸಾವಿಗೂ ಕೆಲ ದಿನಗಳ ಹಿಂದೆ ಸಹೋದರ ಮಯಾಂಕ್ ಗೆ, ಕರ್ನಾಟಕ ಸರ್ಕಾರದಲ್ಲಿ ದಕ್ಷ ಐಎಎಸ್ ಅಧಿಕಾರಿಗಳಿಗೆ ಕೆಲಸ ಮಾಡಲು ಆಗುತ್ತಿಲ್ಲ. ನನಗೂ ಸಹ ಜೀವ ಭಯವಿದೆ. ಆದಷ್ಟು ಬೇಗ ಮರಳಿ ಉತ್ತರಪ್ರದೇಶಕ್ಕೆ ಬರುವುದಾಗಿ ಮೆಸೇಜ್ ಮಾಡಿದ್ದರು ಎನ್ನಲಾಗಿದೆ.
ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ (36) ಅವರ ಶವ ಉತ್ತರಪ್ರದೇಶದ ಹಜರತ್ ಗಂಜ್ ನಲ್ಲಿ ಮೇ 17ರಂದು ಪತ್ತೆಯಾಗಿತ್ತು. ಅನುರಾಗ್ ತಿವಾರಿ ಅವರ ಜನ್ಮ ದಿನದಂದೇ ಇಲ್ಲಿನ ಮೀರಾ ಬಾಯಿ ಗೆಸ್ಟ್ ಹೌಸ್ ಬಳಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. 2007ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಇವರು, ಉತ್ತರಪ್ರದೇಶದ ಬಾಹ್ರಿಯಾಚ್ನಲ್ಲಿ ನೆಲೆಸಿದ್ದು, ಸಾವಿಗೂ ಎರಡು ದಿನಗಳಿಂದ ಮೀರಾಬಾಯಿ ಗೆಸ್ಟ್ ಹೌಸ್ ನಲ್ಲಿ ತಂಗಿದ್ದರು.