ಆರೆಸ್ಸೆಸ್ ಹಿನ್ನೆಲೆಯ ಸಂಸ್ಥೆಗೆ ಕಡಿಮೆ ಬೆಲೆಯಲ್ಲಿ ಸರಕಾರಿ ಜಮೀನು ಪರಭಾರೆ | ಪಾಪ್ಯುಲರ್ ಫ್ರಂಟ್ ಆಕ್ರೋಶ

Prasthutha|

ಸರಕಾರಿ ಜಮೀನನ್ನು ಕಡಿಮೆ ಬೆಲೆಯಲ್ಲಿ ಆರೆಸ್ಸೆಸ್ ಹಿನ್ನೆಲೆ ಹೊಂದಿರುವ ಸಂಸ್ಥೆಗೆ ನೀಡುವ ಸರಕಾರದ ತೀರ್ಮಾನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಚಾಣಕ್ಯ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಸಂಬಂಧಿಸಿದಂತೆ ಸೆಂಟರ್ ಫಾರ್ ಎಜುಕೇಷನ್ ಆ್ಯಂಡ್ ಸೋಷಿಯಲ್ ಸ್ಟಡೀಸ್ (ಸೆಸ್) ಸಂಸ್ಥೆಗೆ ಕೋಟ್ಯಂತರ ಮೌಲ್ಯದ ನೂರಾರು ಎಕರೆ ಭೂಮಿಯನ್ನು ನೀಡುವ ನಿರ್ಧಾರವನ್ನು ರಾಜ್ಯ ಸರಕಾರವು ಕೈಗೊಂಡಿದೆ. ವಿಧಾನಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ಸಾರ್ವಜನಿಕ ಸಂಪತ್ತನ್ನು ಕಡಿಮೆ ಬೆಲೆಗೆ ಪರಭಾರೆ ಮಾಡುತ್ತಿರುವುದು ಸಹಿಸಲು ಸಾಧ್ಯವಿಲ್ಲ. ಸಂಸ್ಥೆಯ ಹಿನ್ನೆಲೆಯನ್ನು ಗಮನಿಸಿದರೆ, ಇದಕ್ಕೆ ಯಾವುದೇ ಶಿಕ್ಷಣ ಸಂಸ್ಥೆ ಮುನ್ನಡೆಸಿದ ಉದಾಹರಣೆ ಇಲ್ಲ. ವಾಸ್ತವ ಸ್ಥಿತಿ ಹೀಗಿದ್ದರೂ, ಚಾಣಕ್ಯ ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ಈ ಸಂಸ್ಥೆಗೆ ಸರಕಾರಿ ಜಮೀನು ನೀಡುತ್ತಿರುವುದು ಕಾನೂನುಬಾಹಿರವಾಗಿದೆ. ಸಂಘಪರಿವಾರದ ನಿಯಂತ್ರಣದ ಶಾಲೆಗಳು ನಿರ್ದಿಷ್ಟ ಸಮುದಾಯಗಳ ವಿರುದ್ಧ ಮಕ್ಕಳ ತಲೆಗೆ ದ್ವೇಷವನ್ನು ತುಂಬುವ ಕಾರ್ಯದಲ್ಲಿ ತೊಡಗಿರುವುದಕ್ಕೆ ಬಹಳಷ್ಟು ನಿದರ್ಶನಗಳಿವೆ. ಇದೀಗ ವಿಶ್ವವಿದ್ಯಾನಿಲಯ ಸ್ಥಾಪನೆ ಅವಕಾಶ ನೀಡುತ್ತಿರುವುದು ಮತ್ತಷ್ಟು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ

ಸರಕಾರವು ಸೆಸ್ ಸಂಸ್ಥೆಗೆ ಸರಕಾರಿ ಜಮೀನನನ್ನು ಪರಭಾರೆ ಮಾಡುವ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕ ಸೊತ್ತನ್ನು ಸಂಘಪರಿವಾರದ ಹಿನ್ನೆಲೆ ಹೊಂದಿರುವ ಸಂಸ್ಥೆಯ ಕೈಗೊಪ್ಪಿಸಬಾರದು. ಖಾಸಗಿ ಸಂಸ್ಥೆಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಜಮೀನು ನೀಡುವ ಸರಕಾರ ತಾಳಿರುವ ಅನ್ಯಾಯದ ತೀರ್ಮಾನದ ವಿರುದ್ಧ ರಾಜ್ಯದ ಜನತೆ ಧ್ವನಿ ಎತ್ತಬೇಕೆಂದು ಎ.ಕೆ.ಅಶ್ರಫ್ ಆಗ್ರಹಿಸಿದ್ದಾರೆ.

- Advertisement -