ಕೆಲವು ಜಾತಿಗಳಿಗೆ ನಕಲಿ ಜಾತಿ ಪ್ರಮಾಣ ಪತ್ರಕ್ಕೆ ಸರ್ಕಾರದಿಂದಲೇ ಕುಮ್ಮಕ್ಕು: ವಾಲ್ಮೀಕಿ ನಾಯಕ ಮಹಾಸಭಾ ಆರೋಪ

Prasthutha|

ಬೆಂಗಳೂರು: ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಕಾನೂನು ಬಾಹಿರವಾಗಿ ತಳವಾರ, ಟೊಕ್ರಿಕೋಳಿ, ಗೊಂಡ, ಮಲೇರು, ಕಬ್ಬಲಿಗ, ಅಂಬಿಕ ಮುಂತಾದ ಬುಡಕಟ್ಟು ಜನಾಂಗದ ಹೆಸರಿನಲ್ಲಿ ಹೆಸರಿನಲ್ಲಿ ನಕಲಿ ಜಾತಿಪ್ರಮಾಣ ಪತ್ರಗಳು ವಿತರಣೆಯಾಗುತ್ತಿದ್ದು, ಈ ಸಂವಿಧಾನ ಬಾಹಿರ ಕೃತ್ಯವನ್ನು ತಕ್ಷಣವೇ ನಿಲ್ಲಿಸುವಂತೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾ ಒತ್ತಾಯಿಸಿದೆ.

- Advertisement -

 ವಾಲ್ಮೀಕಿ ಮಹಾ ಸಭಾ ಅಧ್ಯಕ್ಷ ಜಿ.ಟಿ. ಚಂದ್ರಶೇಖರಪ್ಪ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಸಂವಿಧಾನ ಬಾಹಿರ ಹಾಗೂ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾದ ಕೃತ್ಯಕ್ಕೆ ರಾಜ್ಯ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಈ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಬಂಧಪಟ್ಟ ಸಚಿವರು ಸೂಚನೆ ನೀಡಿದ್ದಾರೆ. ಇದರಿಂದ ಸಂವಿಧಾನದತ್ತವಾಗಿ ಮೀಸಲಾತಿ ಪಡೆದವರಿಗೆ ಘನಘೋರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.

 ಸರ್ಕಾರದ ಸುತ್ತೋಲೆಯಲ್ಲಿನ ಅಂಶಗಳ ಆಧಾರದ ಮೇಲೆ ನಾಯಕ ಬುಡಕಟ್ಟುಗೆ ಪರ್ಯಾಯ ಹೆಸರುಗಳಿಂದ ಗುರುತಿಸುವ ತಳವಾರ ಮತ್ತು ಪರಿವಾರ ಜನಾಂಗದವರಿಗೆ ಮಾತ್ರ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಆದರೆ ಕೋಳಿ, ಅಂಬಿಗ, ಕಬ್ಬಲಿಗ, ಗಂಗಾಮತ ಮುಂತಾದ ಜಾತಿಗಳು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಲ್ಲ. ತಳವಾರ ಜಾತಿಯಲ್ಲ. ಅದು ಕೇವಲ ಕಸಬು. ಆದರೂ ಮುಖ್ಯಮಂತ್ರಿ ಅವರು ಅಕ್ಟೋಬರ್ 30 ರಂದು ಕಲಬುರಗಿಯಲ್ಲಿ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಕೋಳಿ ಸಮಾಜದ ತಳವಾರ ಮತ್ತು ಪರಿವಾರ ಎಸ್.ಟಿ. ಪಟ್ಟಿಗೆ ಸೇರಿಸಲಾಗಿದೆ ಎಂಬ ಹೇಳಿಕೆ ನೀಡಿದ್ದು, ಈ ಬಗ್ಗೆ ಸ್ಪಷ್ಟಿಕರಣ ನೀಡಬೇಕು ಎಂದು ಹೇಳಿದ್ದಾರೆ.

- Advertisement -

 ಸಮಾಜ ಕಲ್ಯಾಣ ಸಚಿವರು ವಿಧಾನ ಪರಿಷತ್’ನಲ್ಲಿ ಉತ್ತರಿಸುವಾಗ ಹಿಂದು ತಳವಾರ, ಪರಿವಾರ ಸಮುದಾಯವನ್ನು ಪ್ರವರ್ಗ-1 ರಿಂದ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿರುವುದರಿಂದ ಈ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಚಿವರು ಯಾವ ತಳವಾರ ಮತ್ತು ಪರಿವಾರ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

 ವಿಶೇಷವಾಗಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಈ ಪಿಡುಗು ಜಾಸ್ತಿಯಿದೆ. ರಾಜ್ಯ ಸರ್ಕಾರ 2004 ರ ಫೆಬ್ರವರಿಯಲ್ಲಿ ಕುಲಶಾಸ್ತ್ರೀಯ ಅಧ್ಯಯನದೊಂದಿಗೆ ಸಲ್ಲಿಸಿದ ಪ್ರಸ್ತಾವನೆ ಮೇರೆಗೆ ಕೇಂದ್ರ ಸರ್ಕಾರ 2020 ರ ಮಾರ್ಚ್ ನಲ್ಲಿ ತನ್ನ ಅಧಿಸೂಚನೆ ಹೊರಡಿಸಿದೆ. ಸುತ್ತೋಲೆಯಲ್ಲಿನ ಅಂಶಗಳ ಆಧಾರದ ಮೇಲೆ ನಾಯಕ ಬುಡಕಟ್ಟುವಿಗೆ ಪರ್ಯಾಯ ಹೆಸರುಗಳಿಂದ ಗುರುತಿಸುವ ತಳವಾರ ಮತ್ತು ಪರಿವಾರವರಿಗೆ ಮಾತ್ರ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಪ್ರಾಧಿಕಾರ(ತಹಶೀಲ್ದಾರ್)ಗಳಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇಲ್ಲಿಯವರೆಗೆ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುವವರ ಮೇಲೆ ಮತ್ತು ಸರಿಯಾಗಿ ಪರಿಶೀಲನೆ ಮಾಡದೆ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡಿರುವ ಮತ್ತು ನೀಡುತ್ತಿರುವ ಅಧಿಕಾರಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಅಧ್ಯಕ್ಷ ಜಿ.ಟಿ. ಚಂದ್ರಶೇಖರಪ್ಪ ತಿಳಿಸಿದ್ದಾರೆ.

Join Whatsapp