ದ.ಕ. ಜಿಲ್ಲೆಗೆ ಆಗಮಿಸುವ ಕೇರಳಿಗರಿಗೆ 7 ದಿನಕ್ಕೊಮ್ಮೆ ಕೋವಿಡ್ ಟೆಸ್ಟ್ ಕಡ್ಡಾಯ: ಸಿಎಂ ಬೊಮ್ಮಾಯಿ

Prasthutha|

ಬೆಂಗಳೂರು: ನೆರೆಯ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಗಡಿ ಜಿಲ್ಲೆಗಳ ಅಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಚರ್ಚಿಸಿದರು. ಈ ವೇಳೆ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದ ಕೋವಿಡ್ ಏರಿಕೆ ಬಗ್ಗೆ ಚರ್ಚಿಸಿದ ಸಿಎಂ, ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.

- Advertisement -

ಎಂಟು ಜಿಲ್ಲೆಗಳ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಬೊಮ್ಮಾಯಿ, ಕೇರಳ ಹಾಗೂ ಮಹಾರಾಷ್ಟ್ರದಿಂದ ಆಗಮಿಸುವವರಿಗೆ ಎರಡು ಡೋಸ್ ಲಸಿಕೆ ಹಾಗೂ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದ್ದಾಗಿ ತಿಳಿಸಿದ್ದಾರೆ. ದಿನನಿತ್ಯ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವವರು ಇನ್ಮುಂದೆ ಏಳು ದಿನಕ್ಕೊಮ್ಮೆ ತಮ್ಮ ಆರ್ಟಿಪಿಸಿರ್ ನೆಗೆಟಿವ್ ರಿಪೋರ್ಟ್ ಅನ್ನ ತೋರಿಸಬೇಕಾಗುತ್ತದೆ. ಅಲ್ಲದೇ ಗಡಿ ಭಾಗಗಳಲ್ಲಿ ಕೋವಿಡ್ ಪರೀಕ್ಷೆಗಳನ್ನ ಹೆಚ್ಚು ಮಾಡುವಂತೆ ಹಾಗೂ ಅದಕ್ಕೆ ಬೇಕಾದ ಚೆಕ್ ಪೋಸ್ಟ್ ಗಳನ್ನ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರ ಗಡಿಯ ಜನರಿಗೂ ಇದೇ ನಿಯಮಗಳು ಅನ್ವಯಿಸುತ್ತದೆ ಎಂದರು

ಸದ್ಯದ ಮಟ್ಟಿಗೆ ನೈಟ್ ಕರ್ಫ್ಯೂ ಹಾಗೂ ಪ್ರಸ್ತುತವಿರುವ ಕೋವಿಡ್ ನಿಯಮಾವಳಿಗಳು ಮುಂದಿನ 15 ದಿವಸಗಳ ಕಾಲ ಮುಂದುವರೆಯಲಿದೆ. ಈಗಾಗಲೇ ಸರಕಾರಿ ಶಾಲೆಯ ಶೇಕಡಾ 75ರಷ್ಟು ಶಿಕ್ಷಕರಿಗೆ ಲಸಿಕೆ ನೀಡಲಾಗಿದೆ, ಮುಂದಿನ ಕೆಲವೇ ದಿನಗಳಲ್ಲಿ ಅದು ಶೇ.100 ತಲುಪುವುದಾಗಿ ತಿಳಿಸಿದರು. ಲಸಿಕೆ ವಿಚಾರವಾಗಿ ಕೇಂದ್ರ ಸರಕಾರದ ಜೊತೆಗೂ ಚರ್ಚಿಸಿದ್ದಾಗಿ ಬೊಮ್ಮಾಯಿ ಹೇಳಿದರು.

- Advertisement -

ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಬೆಳಗಾವಿ, ಬಿಜಾಪುರ ಸೇರಿದಂತೆ ಒಟ್ಟು 8 ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಸಹಿತ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Join Whatsapp