February 23, 2021
ಯತ್ನಾಳ್ ಹಿಂದೂತ್ವವಾದಿ ಎಂಬ ಖುಷಿಯಿದೆ: ಸಚಿವ ಈಶ್ವರಪ್ಪ

ಶಿವಮೊಗ್ಗ: ಪದೇ ಪದೇ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹರಿಹಾಯುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಹೈಕಮಾಂಡ್ ನಿಂದ ನೋಟೀಸ್ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಕೆ.ಎಸ್.ಈಶ್ವರಪ್ಪ, ಯತ್ನಾಳ್ ಓರ್ವ ಹಿಂದೂತ್ವವಾದಿ ಎಂಬ ಖುಷಿಯಿದೆ ಎಂದು ಹೇಳಿದ್ದಾರೆ.
ಯತ್ನಾಳ್ ಸಿಎಂ ಬಗ್ಗೆ ನೀಡುವ ಹೇಳಿಕೆಗಳನ್ನು ನಾನು ಒಪ್ಪುವುದಿಲ್ಲ. ಆದರೆ ಅವರೊಬ್ಬ ಹಿಂದೂತ್ವವಾದಿ ಎಂಬುದಕ್ಕೆ ನಾನು ಖುಷಿ ಪಡುತ್ತೇನೆ. ಯತ್ನಾಳ್ ಗೆ ಕೇಂದ್ರದ ನಾಯಕರು ನೋಟೀಸ್ ಕಳುಹಿಸಿದ್ದಾರೆ. ಅದಕ್ಕೆ ಅವರು ಉತ್ತರವನ್ನೂ ಕೊಟ್ಟಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಕೇಂದ್ರ ನಾಯಕರೇ ನಿರ್ಧರಿಸುತ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದೇ ವೇಳೆ ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಹಲವು ಸಮುದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಆದರೆ ಅರ್ಹತೆ ಇರುವ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.