ಎಲ್ಗಾರ್ ಪರಿಷತ್ ಪ್ರಕರಣ: ಹನಿ ಬಾಬು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್

Prasthutha|

ಮುಂಬೈ: ಎಲ್ಗಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ UAPA ಕಾಯ್ದೆ ಅಡಿಯಲ್ಲಿ ಬಂಧಿತ ಹನಿ ಬಾಬು ಸಲ್ಲಿಸಿದ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.

- Advertisement -

ನ್ಯಾಯಮೂರ್ತಿಗಳಾದ ಎನ್. ಎಂ. ಜಾಮ್ದಾರ್ ಮತ್ತು ಎನ್.ಆರ್ ಬೋರ್ಕರ್ ಅವರನ್ನೊಳಗೊಂಡ ಪೀಠ ಅಗಸ್ಟ್ ನಿಂದ ಹನಿ ಬಾಬು ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದೆ. ಜೂನ್ ನಲ್ಲಿ ಮುಂಬೈನ NIA ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹನಿ ಬಾಬು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ತನಿಖೆ ನಡೆಸುತ್ತಿರುವ NIA, ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ನಾಯಕರ ಸೂಚನೆಯ ಮೇರೆಗೆ ಮಾವೋವಾದಿ ಚಟುವಟಿಕೆಗಳು ಮತ್ತು ಸಿದ್ದಾಂತವನ್ನು ಪ್ರಚಾರ ಮಾಡುವಲ್ಲಿ ಹನಿ ಬಾಬು ಸಂಚು ರೂಪಿಸಿದ್ದರು ಎಂದು ಆರೋಪಿಸಿದೆ.

- Advertisement -

ಪ್ರಧಾನಿ ಮೋದಿ ಅವರನ್ನು ಕೊಲ್ಲುವ ಸಂಚಿನ ಕುರಿತು NIA ಪ್ರಮುಖ ಸಾಕ್ಷಿಯಾಗಿ ಉಲ್ಲೇಖಿಸಿದ್ದರೂ, ಆಪಾದಿತ ಪತ್ರ ಈ ಆರೋಪವನ್ನು ಸಾಬೀತುಪಡಿಸಿಲ್ಲ ಎಂದು ತನ್ನ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ NIA ಹನಿ ಬಾಬುಗೆ ಜಾಮೀನು ನೀಡುವುದನ್ನು ವಿರೋಧಿಸಿದ್ದು, ಅವರು ನಕ್ಸಲಿಸಂನ್ನು ಪ್ರಚೋದಿಸುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಸರ್ಕಾರವನ್ನು ಉರುಳಿಸಲು ಬಯಸಿದ್ದರು ಎಂದು ನ್ಯಾಯಾಲಯದಲ್ಲಿ ವಾದಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಹನಿ ಬಾಬು ನಕ್ಸಲಿಸಂನ್ನು ಪ್ರಚೋದಿಸಲು ಮತ್ತು ವಿಸ್ತರಿಸಲು ಬಯಸಿದ್ದು, ಚುನಾಯಿತ ಸರ್ಕಾರವನ್ನು ಉರುಳಿಸುವ ಮೂಲಕ ಭಾರತದ ವಿರುದ್ಧ ಯುದ್ಧ ಮಾಡುವ ಪಿತೂರಿಯ ಭಾಗವಾಗಿದ್ದರು ಎಂದು ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್ನಲ್ಲಿ ಈ ಪ್ರಕರಣದ ಸಹ ಆರೋಪಿ ಗೌತಮ್ ನವ್ಲಾಖಾ ಅವರ ಜಾಮೀನು ಅರ್ಜಿಯನ್ನು ವಿಶೇಷ ಎನ್ಐಎ ನ್ಯಾಯಾಲಯ ನಿರಾಕರಿಸಿತ್ತು.

Join Whatsapp