ಬಿಎಂಟಿಸಿ ಬೆನ್ನಲ್ಲೇ ವಿದ್ಯುತ್ ಬಸ್’ಗಳಿಗೆ ಕೆಎಸ್’ಆರ್’ಟಿಸಿಯಿಂದ ಚಾಲನೆ: 5 ಜಿಲ್ಲೆಗಳಿಗೆ ಸಂಚಾರ ಪ್ರಾರಂಭ

Prasthutha|

ಬೆಂಗಳೂರು: ಬಿಎಂಟಿಸಿ ಎಲೆಕ್ಟ್ರಿಕ್ ಬಸ್’ಗಳಿಗೆ ಚಾಲನೆ ನೀಡಿದ ಬೆನ್ನಲ್ಲೇ, ಇದೀಗ ಕೆಎಸ್’ಆರ್’ಟಿಸಿ ಕೂಡ ರಾಜ್ಯದ ಐದು ಜಿಲ್ಲೆಗಳಿಗೆ ಇದೇ ರೀತಿಯ ಬಸ್’ಗಳನ್ನು ಪ್ರಾರಂಭಿಸಲು ಯೋಜನೆ ಹಾಕಿದೆ. ಅಲ್ಲದೆ ಡಿಸೆಂಬರ್ ತಿಂಗಳ ಅಂತ್ಯಕ್ಕೆ ರಾಜ್ಯದೆಲ್ಲೆಡೆ ಕೆಎಸ್ಆರ್‍‌ಟಿಸಿ ಎಲೆಕ್ಟ್ರಿಕ್ ಬಸ್’ಗಳು ಸಂಚಾರ ಆರಂಭಿಸಲಿದೆ.

- Advertisement -

ಈ ಯೋಜನೆಯನ್ನು ಆರಂಭಿಸುವ ಭಾಗವಾಗಿ ಮೊದಲಿಗೆ 25 ಬಸ್’ಗಳು ಸಂಚಾರ ಆರಂಭಿಸಲಿದ್ದು, ಬೆಂಗಳೂರಿನಿಂದ ಮಡಿಕೇರಿ, ದಾವಣಗೆರೆ, ಮೈಸೂರು, ಚಿಕ್ಕಮಗಳೂರು, ವಿರಾಜಪೇಟೆ, ಶಿವಮೊಗ್ಗದಲ್ಲಿ ಎಲೆಕ್ಟ್ರಿಕ್ ಬಸ್’ಗಳು ಸಂಚಾರ ನಡೆಸಲಿದೆ.

ಈ ಮಧ್ಯೆ ಹೈದರಾಬಾದ್’ನ ಖಾಸಗಿ ಸಂಸ್ಥೆಯೊಂದಿಗೆ ಕೆಎಸ್’ಆರ್’ಟಿಸಿ ಪ್ರಾಧಿಕಾರ 50 ಎಲೆಕ್ಟ್ರಿಕ್ ಬಸ್’ಗಳಿಗೆ ಒಪ್ಪಂದ ಮಾಡಿಕೊಂಡಿದ್ದು, ಡಿಸೆಂಬರ್ 4ಕ್ಕೆ ರಾಜ್ಯದಲ್ಲಿ ಈ ಬಸ್’ಗಳ ಪ್ರಾಯೋಗಿಕ ಸಂಚಾರ ನಡೆಯಲಿದೆ. ಅಲ್ಲದೆ ಡಿಸೆಂಬರ್ ಕೊನೆಯಲ್ಲಿ 25 ಹೊಸ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಲಿದೆ. ಉಳಿದ 25 ಬಸ್’ಗಳು ಫೆಬ್ರವರಿಯಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

- Advertisement -

ಕೆಎಸ್’ಆರ್’ಟಿಸಿ ಎಲೆಕ್ಟ್ರಿಕ್ ಬಸ್’ನಲ್ಲಿ ಎಸಿಯ ವ್ಯವಸ್ಥೆ ಇದ್ದು, ಒಟ್ಟು 43 ಸೀಟ್’ಗಳಿರುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ 250 ರಿಂದ 270 ಕಿ.ಮೀ ವರೆಗೂ ಸಂಚರಿಸಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕೆಎಸ್’ಆರ್’ಟಿಸಿ ಬಸ್‌ಗಳಿಗೆ ಚಾರ್ಜ್ ಮಾಡಲು ಮೆಜೆಸ್ಟಿಕ್ ಬಸ್ ನಿಲ್ದಾಣ, ಮೈಸೂರು, ವಿರಾಜಪೇಟೆ, ಮಡಿಕೇರಿ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಚಾರ್ಜಿಂಗ್ ಸ್ಟೇಷನ್’ಗಳನ್ನು ಅಳವಡಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp