ಫಿಫಾ ವಿಶ್ವಕಪ್ | 27 ತಂಡಗಳಿಗೆ ಅಂತಿಮ ಪಂದ್ಯ ನಿರ್ಣಾಯಕ !

Prasthutha|

ದೋಹಾ: ಕತಾರ್’ನಲ್ಲಿ ನಡೆಯುತ್ತಿರುವ 22ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದಲ್ಲಿ ಎಲ್ಲಾ ತಂಡಗಳು ತಲಾ ಎರಡು ಪಂದ್ಯಗಳನ್ನು ಮುಗಿಸಿವೆ. ಅದಾಗಿಯೂ ಹಾಲಿ ಚಾಂಪಿಯನ್ ಫ್ರಾನ್ಸ್, ಬ್ರೆಜಿಲ್ ಹಾಗೂ ಪೋರ್ಚುಗಲ್ ಸೇರಿದಂತೆ ಕೇವಲ 3 ತಂಡಗಳಷ್ಟೇ ಇದುವರೆಗೆ 16 ಘಟ್ಟಕ್ಕೆ ಅರ್ಹತೆ ಪಡೆದಿವೆ. ಆತಿಥೇಯ ಕತಾರ್ ಮತ್ತು ಕೆನಡಾ ತಂಡಗಳು ಅಧಿಕೃತವಾಗಿ ವಿಶ್ವಕಪ್ ಟೂರ್ನಿಯಿಂದ ಹೊರನಡೆದಿದೆ.

- Advertisement -

ಅರ್ಜೆಂಟೀನಾ, ಜರ್ಮನಿ, ಇಂಗ್ಲೆಂಡ್ ಸೇರಿದಂತೆ 27 ತಂಡಗಳಿಗೆ ಗ್ರೂಪ್ ಹಂತದ ಅಂತಿಮ ಪಂದ್ಯದ ಫಲಿತಾಂಶ, ಟೂರ್ನಿಯಲ್ಲಿ ಅಳಿವು-ಉಳಿವನ್ನು ನಿರ್ಧರಿಸಲಿದೆ.

ಕತಾರ್ ಫಿಫಾ ವಿಶ್ವಕಪ್ 9ನೇ ದಿನ, ಟೂರ್ನಿಯಲ್ಲಿ ಇದುವರೆಗಿನ ಅತಿಹೆಚ್ಚು ಗೋಲುಗಳು ದಾಖಲಾಗಿದೆ. ಸೋಮವಾರ ನಡೆದ 4 ಪಂದ್ಯಗಳಲ್ಲಿ ಒಟ್ಟು 14 ಗೋಲುಗಳು ದಾಖಲಾಗಿದೆ. ಡ್ರಾದಲ್ಲಿ ಕೊನೆಗೊಂಡಿದ್ದ ಕ್ಯಾಮರೂನ್ ಮತ್ತು ಸರ್ಬಿಯಾ ನಡುವಿನ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ತಲಾ 3 ಗೋಲು ಸೇರಿದಂತೆ ಒಟ್ಟು 6 ಗೋಲುಗಳು ದಾಖಲಾಗಿತ್ತು. ಆ ಬಳಿಕ ಗ್ರೂಪ್ ಎಚ್’ನಲ್ಲಿ ನಡೆದ ಪಂದ್ಯದಲ್ಲಿ ಘಾನ ತಂಡ 3-2 ಗೋಲುಗಳ ಅಂತರದಲ್ಲಿ ರೋಚಕವಾಗಿ ದಕ್ಷಿಣ ಕೊರಿಯಾವನ್ನು ಮಣಿಸಿತ್ತು. ಈ ಪಂದ್ಯದಲ್ಲಿ 5 ಗೋಲುಗಳು ದಾಖಲಾಗಿತ್ತು. ರಾತ್ರಿ 9.30ಕ್ಕೆ ನಡೆದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ತಂಡ ಬ್ರೆಜಿಲ್, ಸ್ವಿಝರ್’ಲ್ಯಾಂಡ್ ತಂಡವನ್ನು ಏಕೈಕ ಗೋಲಿನಿಂದ ಮಣಿಸಿತ್ತು. ಮಧ್ಯರಾತ್ರಿ ಉರುಗ್ವೆ ತಂಡವನು 2-0 ಅಂತರದಲ್ಲಿ ಮಣಿಸಿದ ಪೋರ್ಚುಗಲ್ ಸತತ ಎರಡನೇ ಜಯ ದಾಖಲಿಸಿತ್ತು.

- Advertisement -

ಗ್ರೂಪ್ ಜಿ ಮತ್ತು ಎಚ್’ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಮೂಲಕ ಬ್ರೆಜಿಲ್ ಮತ್ತು ಪೋರ್ಚುಗಲ್ ತಂಡಗಳು ಅಂತಿಮ 16ರ ಘಟ್ಟ ಪ್ರವೇಶಿಸಿದೆ.

Join Whatsapp