ಈಶಾನ್ಯ ದೆಹಲಿ ಗಲಭೆ ಪ್ರಕರಣ: ದೆಹಲಿ ಪೊಲೀಸರಿಗೆ 25 ಸಾವಿರ ರೂ. ದಂಡ ವಿಧಿಸಿದ ಕೋರ್ಟ್

Prasthutha|

ನವದೆಹಲಿ: ಕಳೆದ ವರ್ಷ ನಡೆದ ಈಶಾನ್ಯ ದೆಹಲಿ ಗಲಭೆ ವೇಳೆ ಗಾಯಗೊಂಡ ವ್ಯಕ್ತಿ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿ ಪ್ರತ್ಯೇಕ ಎಫ್ ಐಆರ್ ದಾಖಲಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ ದೆಹಲಿ ಪೊಲೀಸರಿಗೆ ನ್ಯಾಯಾಲಯವೊಂದು 25 ಸಾವಿರ ರೂ. ದಂಡ ವಿಧಿಸಿದೆ.

- Advertisement -

ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಗಲಭೆಯ ಸಂದರ್ಭದಲ್ಲಿ ಈಶಾನ್ಯ ದೆಹಲಿ ನಿವಾಸಿ ಮುಹಮ್ಮದ್ ನಾಸಿರ್ ಕಣ್ಣು ಕಳೆದುಕೊಂಡು ಗಂಭೀರವಾಗಿ ಗಾಯಗೊಂಡಿದ್ದರು. ಅವರ ದೂರಿನ ಆಧಾರದ ಮೇಲೆ ಪ್ರತ್ಯೇಕ ಎಫ್ಐಆರ್ ದಾಖಲಿಸುವಂತೆ ನಿರ್ದೇಶಿಸಿದ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ದಂಡ ವಿಧಿಸಲಾಗಿದೆ.


ದೆಹಲಿ ಪೊಲೀಸರ ಏಕಮುಖ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಯಾದವ್, ಭಜನ್ಪುರ ಎಸ್ಎಚ್ಒ ಮತ್ತು ಇತರ ಮೇಲ್ವಿಚಾರಣಾ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- Advertisement -


ನ್ಯಾಯಾಲಯದ ಆದೇಶ ಪರಿಷ್ಕರಣೆಗೆ ಅರ್ಜಿ ಸಲ್ಲಿಸಿದ ಭಜನ್ಪುರ ಪೊಲೀಸ್ ಠಾಣೆ ಹೌಸ್ ಆಫೀಸರ್ ಮತ್ತು ಸಹ ಮೇಲ್ವಿಚಾರಣಾ ಅಧಿಕಾರಿಗೆ ದಂಡ ವಿಧಿಸಲಾಯಿತು. ಇದು ಜಾರಿಯಾದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಪೀಠ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಎಸ್ಎಚ್ ಒ ಭಜನ್ಪುರ ಅವರು ಕ್ರಿಮಿನಲ್ ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸಿದ್ದರು.

Join Whatsapp