ಉರ್ವ ಠಾಣೆಯಲ್ಲಿ ದೂರುದಾರರ ಪುಂಡಾಟ | ಪ್ರಶ್ನಿಸಿದ ಪೊಲೀಸರ ಜೊತೆ ತಳ್ಳಾಟ!

Prasthutha|

ಮಂಗಳೂರು: ನಗರದ ಉರ್ವ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

- Advertisement -

ದುಷ್ಕರ್ಮಿಗಳು ಪೊಲೀಸರಿಗೆ ಹಲ್ಲೆ ನಡೆಸಿರುವುದು ಮಾತ್ರವಲ್ಲದೆ ದುರ್ನಡತೆಯಿಂದ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಂಧಿತರನ್ನು ನೊವೆಲ್ ಸಿಕ್ವೇರಾ, ಜಾನ್ ಸಿಕ್ವೇರಾ ಎಂದು ಗುರುತಿಸಲಾಗಿದೆ.

- Advertisement -

ಹಲ್ಲೆಗೊಳಗಾಗಿ ಗಾಯಗೊಂಡ ಹೆಡ್‌ಕಾನ್‌ಸ್ಟೇಬಲ್ ನಾರಾಯಣ, ಕಾನ್‌ಸ್ಟೇಬಲ್ ಪೂಜಾ ಹಿರೇಮಠ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

“ಮೇ ತಿಂಗಳ ಕೊನೆಯಲ್ಲಿ ಉರ್ವ ಠಾಣಾ ವ್ಯಾಪ್ತಿ ಎರಡು ಪ್ರಕರಣಗಳು ದಾಖಲಾಗಿದ್ದವು. ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವವರು ನಿರ್ವಹಣಾ ಶುಲ್ಕ ಹಾಗೂ ನೀರು ಸಂಪರ್ಕ ಕೊಡುವುದರ ಕುರಿತು ಗಲಾಟೆ ನಡೆದಿತ್ತು. ಈ ಬಗ್ಗೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿತ್ತು. 17 ವರ್ಷದ ಬಾಲಕಿಗೆ ಹಲ್ಲೆ ನಡೆಸಿರುವುದು ಹಾಗೂ ಪೊಕ್ಸೊ ಕೇಸು ದಾಖಲಾಗಿತ್ತು. ಮತ್ತೊಂದು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು” ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಎರಡೂ ಪ್ರಕರಣದಲ್ಲಿ ಅಪಾರ್ಟ್‌ಮೆಂಟ್‌ನ ಅಸೋಸಿಯೇಶನ್‌ನವರು ಮಾತನಾಡಿಕೊಂಡು ಡಿಸಿಪಿ ಕಚೇರಿಗೆ ಆಗಮಿಸಿದ್ದಾರೆ. ಪ್ರಕರಣವನ್ನು ಹಿಂಪಡೆಯಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾರೆ. ತನಿಖಾಧಿಕಾರಿಯಲ್ಲಿ ಹೇಳಿಕೆ ಕೊಡಲು ಡಿಸಿಪಿ ತಿಳಿಸಿ ಕಳುಹಿಸಿದ್ದಾರೆ. ನಂತರ ಅಪಾರ್ಟ್‌ಮೆಂಟ್ ಅಸೋಸಿಯೇಶನ್‌ನವರು ಠಾಣೆಗೆ ಆಗಮಿಸಿದ್ದಾರೆ. ಇನ್‌ಸ್ಪೆಕ್ಟರ್ ಕೊಠಡಿಯಲ್ಲಿ ಈ ಸಂಬಂಧ ಮಾತುಕತೆ ನಡೆಸುತ್ತಿದ್ದಾಗ ಆರೋಪಿಗಳು ಮೊಬೈಲ್‌ನಲ್ಲಿ ಶೂಟಿಂಗ್ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಅನುಚಿತವಾಗಿ ನಡೆದುಕೊಂಡಿದ್ದಾರೆ. ಮೊಬೈಲ್ ಎಳೆದು ಕೊಳ್ಳುವಾಗ ತಳ್ಳಾಟವಾಗಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ವಿವರಿಸಿದರು.

ಈ ಸಂದರ್ಭ ಮಹಿಳಾ ಪೇದೆಗೆ ಕಾಲಿಗೆ ಗಾಯವಾಗಿದೆ. ಗಲಾಟೆ ಬಿಡಿಸಲು ಹೋದ ಹೆಡ್‌ಕಾನ್‌ಸ್ಟೇಬಲ್ ಅವರ ಬಟ್ಟೆ ಹರಿದು ಹಾಕಿರುವ ಘಟನೆಯೂ ನಡೆದಿದೆ. ಪೊಲೀಸರೊಂದಿಗೆ ಅನುಚಿತವಾಗಿ ನಡೆದುಕೊಂಡವರ ವಿರುದ್ಧ ಐಪಿಸಿ ಸೆಕ್ಷನ್ 354 (ಹಲ್ಲೆ), 353 (ಸರಕಾರಿ ಕರ್ತವ್ಯಕ್ಕೆ ಅಡ್ಡಿ) ಅಡಿಯಲ್ಲಿ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರೊಂದಿಗೆ ದುರ್ವರ್ತನೆ ತೋರಿರುವ ಬಗ್ಗೆ ವೀಡಿಯೊ ದಾಖಲೆ ಇದೆ. ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದರು.

ಸಾರ್ವಜನಿಕರು ಠಾಣೆಗೆ ಬಂದ ಸಂದರ್ಭದಲ್ಲಿ ಪೊಲೀಸರೊಂದಿಗೆ ದುರ್ನಡತೆಯಿಂದ ವರ್ತಿಸದೆ ಶಾಂತ
ರೀತಿಯಲ್ಲಿ ವ್ಯವಹರಿಸಬೇಕು. ಠಾಣೆಯಲ್ಲಿ ಸ್ಪಂದನೆ ಸಿಗದಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕೇ ವಿನಃ ಅನುಚಿತ ವರ್ತನೆ ತೋರಬಾರದು ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

Join Whatsapp