ದಲಿತನಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ | ದಲಿತೇತರರಿಂದ ಸಾಮೂಹಿಕ ರಾಜೀನಾಮೆ

Prasthutha|

ಚೆನ್ನೈ : ಜಾತಿ ಎಲ್ಲಿದೆ, ಈಗೆಲ್ಲಾ ಸರಿ ಹೋಗಿದೆ, ಹಿಂದಿನಂತೆ ಜಾತಿ ತಾರತಮ್ಯ ಯಾರೊಬ್ಬರೂ ಮಾಡುವುದಿಲ್ಲ ಎಂದು ಬಹುತೇಕ ಬಿಜೆಪಿ ಬೆಂಬಲಿಗರು ಸಾಮಾನ್ಯವಾಗಿ ಮಾತನಾಡುತ್ತಿರುತ್ತಾರೆ. ಅದು ಜಾತಿವಾದದ ವಿರುದ್ಧ ಯಾರಾದರೂ ಮಾತನಾಡಿದಾಗಲಂತೂ ಈ ಮಾತು ಸಹಜವಾಗಿ ಅವರಿಂದ ಹೊರಬರುತ್ತದೆ. ಆದರೆ, ತಮ್ಮದೇ ಪಕ್ಷವು ಓರ್ವ ದಲಿತನನ್ನು ಜಿಲ್ಲಾಧ್ಯಕ್ಷನನ್ನಾಗಿ ನೇಮಕ ಮಾಡಿದಾಗ, ಆ ಜಿಲ್ಲೆಯ ಪಕ್ಷದ ಜಿಲ್ಲಾ ಮಟ್ಟದ ಮುಖಂಡರೇ ಸಾಮೂಹಿಕ ರಾಜೀನಾಮೆ ನೀಡಿದ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.

ತಿರುನಲ್ವೇಲಿ ಜಿಲ್ಲಾಧ್ಯಕ್ಷರನ್ನಾಗಿ ಎ. ಮಹಾರಾಜನ್ ಎಂಬವರನ್ನು ನೇಮಕ ಮಾಡಲಾಗಿತ್ತು. ಆದರೆ, ಇದನ್ನು ವಿರೋಧಿಸಿ ಪಕ್ಷದ ಮುಖಂಡರು, ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

- Advertisement -

20ಕ್ಕೂ ಅಧಿಕ ನಾಡಾರ್ ಮತ್ತು ಥೇವರ್ ಸಮುದಾಯದ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಪಕ್ಷದ ಉಪಾಧ್ಯಕ್ಷ ನಾಯ್ನಾರ್ ನಾಗೇಂದ್ರನ್ ಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಮಹಾರಾಜನ್ ಅವರನ್ನು ಪಕ್ಷದ ಹುದ್ದೆಯಿಂದ ಕೈಬಿಡುವಂತೆ ಅವರು ಒತ್ತಾಯಿಸಿದ್ದಾರೆ.

2015ರಲ್ಲಿ ಬಿಜೆಪಿ ಸೇರಿದ ಮಹಾರಾಜನ್ ಪಕ್ಷದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೇರಿ ಹಲವು ಹುದ್ದೆಗಳನ್ನು ಪಡೆದಿದ್ದಾರೆ. 2016ರ ಚುನಾವಣೆಯಲ್ಲಿ ತಿರುನಲ್ವೇಲಿ ವಿಧಾನಸಭಾ ಕ್ಷೇತ್ರದಿಂದ ಅವರು ಚುನಾವಣೆಗೂ ಸ್ಪರ್ಧಿಸಿದ್ದರು.

ತಿರುನಲ್ವೇಲಿಯಲ್ಲಿ ಪಕ್ಷಕ್ಕೆ ಜಾತಿ ಅಸಹಿಷ್ಣುತೆಯೇ ದೊಡ್ಡ ಸಮಸ್ಯೆ ಎಂದು ರಾಜ್ಯಮಟ್ಟದ ನಾಯಕರೊಬ್ಬರು ಹೇಳಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ರಾಜೀನಾಮೆ ನೀಡಿರುವವರು ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದಾರೆ.

ಸಮಸ್ಯೆ ನಿವಾರಿಸಲು ಅತೃಪ್ತರಲ್ಲಿ ಮಾತನಾಡುತ್ತೇವೆ ಎಂದು ನಾಗೇಂದ್ರನ್ ಹೇಳಿದ್ದಾರೆ. ಆದರೆ, ಪಕ್ಷದೊಳಗಿನ ಭಿನ್ನಮತ ಮತ್ತು ಮಹಾರಾಜನ್ ಅವರ ವರ್ತನೆಯೂ ರಾಜೀನಾಮೆಗೆ ಕಾರಣವೆಂದೂ ಹೇಳಲಾಗಿದೆ.

- Advertisement -