ಫೇಸ್ ಬುಕ್ ನಿಂದ ನಿಷೇಧಿತರಾಗಿರುವ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಎಷ್ಟು ಪ್ರಕರಣಗಳಿವೆ ಗೊತ್ತಾ?

Prasthutha|

►► ಇಲ್ಲಿದೆ ಅವರ ಪ್ರಮುಖ ದ್ವೇಷ ಭಾಷಣದ ವಿವರ !

- Advertisement -

ಹೈದರಾಬಾದ್ : ತೆಲಂಗಾಣದ ಏಕೈಕ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಗೆ ಫೇಸ್ ಬುಕ್ ತನ್ನ ಎಲ್ಲಾ ಸಾಮಾಜಿಕ ಜಾಲತಾಣ ವೇದಿಕೆಗಳಿಂದ ನಿಷೇಧ ಹೇರಿದೆ. ದ್ವೇಷ ಭಾಷಣ ಮತ್ತು ಹಿಂಸೆಯ ವಿಚಾರಗಳನ್ನು ಪ್ರಚಾರ ಮಾಡುವ ಕಾರಣಕ್ಕಾಗಿ ಅವರಿಗೆ ಈ ನಿಷೇಧ ಹೇರಲಾಗಿದೆ. ಫೇಸ್ ಬುಕ್ ಮತ್ತು ದೇಶದ ಆಡಳಿತಾರೂಢ ಬಿಜೆಪಿಯೊಂದಿಗಿನ ಅನೈತಿಕ ನಂಟು ಮತ್ತು ರಾಜಾ ಸಿಂಗ್ ರ ದ್ವೇಷ ಭಾಷಣದ ಪೋಸ್ಟ್ ಗಳನ್ನು ರದ್ದುಗೊಳಿಸದ ಫೇಸ್ ಬುಕ್ ಕುರಿತು ಸರಣಿ ವರದಿಗಳು ಇತ್ತೀಚೆಗೆ ಪ್ರಕಟವಾದ ಬಳಿಕ ಎಚ್ಚೆತ್ತ ಫೇಸ್ ಬುಕ್ ಈ ಕ್ರಮ ಕೈಗೊಂಡಿದೆ.

ರಾಜಾ ಸಿಂಗ್ ಬಗ್ಗೆ ದಕ್ಷಿಣ ಭಾರತದಲ್ಲಿ ಗೊತ್ತಿಲ್ಲದವರಿಲ್ಲ. ತನ್ನ ದ್ವೇಷ ಭಾಷಣದಿಂದಲೇ ರಾಷ್ಟ್ರೀಯ ಸುದ್ದಿಯಾಗಿರುವ ಇವರ ಮೇಲೆ ಉದ್ರಿಕ್ತಕಾರಿ ಭಾಷಣಕ್ಕಾಗಿ ಮತ್ತಿತರ ಅಪರಾಧಗಳ ಆರೋಪದ 60 ಪ್ರಕರಣಗಳಿವೆ. ಸಿಂಗ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾತನಾಡಿದ ಮತ್ತು ಅದು ರಾಷ್ಟ್ರೀಯ ಸುದ್ದಿಯಾದ ಪ್ರಮುಖ ಸುದ್ದಿಗಳನ್ನು ಇಲ್ಲಿ ನೀಡಲಾಗಿದೆ.

- Advertisement -

“ಹಳೆ ಹೈದರಾಬಾದ್ ಮಿನಿ ಪಾಕಿಸ್ತಾನ” :
2017ರ ಮೇನಲ್ಲಿ ಹಳೆ ಹೈದರಾಬಾದ್ ನಲ್ಲಿ ಹುಡುಕಾಟ ಕಾರ್ಯಾಚರಣೆ ಮಾಡುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದ ಸಿಂಗ್, ನಗರವನ್ನು ‘ಮಿನಿ ಪಾಕಿಸ್ತಾನ’ ಎಂದು ಕರೆದಿದ್ದರು. ಅಲ್ಲಿನ ಸಾಕಷ್ಟು ಮನೆಗಳಿಂದ ಬಾಂಬ್ ಮತ್ತು ಸ್ಫೋಟಕಗಳನ್ನು ಪತ್ತೆ ಹಚ್ಚಬಹುದು ಎಂದೂ ಹೇಳಿದ್ದರು. ಪೊಲೀಸರು ಅವರ ವಿರುದ್ಧ ಆಗ ಪ್ರಕರಣ ದಾಖಲಿಸಿದ್ದರು.

“ಪಶ್ಚಿಮ ಬಂಗಾಳದ ಹಿಂದೂಗಳು 2002ರ ಗುಜರಾತ್ ಗಲಭೆಯಂತೆ ಪ್ರತಿಕ್ರಿಯಿಸಬೇಕು” :
2017ರ ಜುಲೈನಲ್ಲಿ ಪಶ್ಚಿಮ ಬಂಗಾಳದ ಬದೂರಿಯಾ ಮತ್ತು ಬಸೀರ್ಹತ್ ಜಿಲ್ಲೆಗಳಲ್ಲಿ ಉದ್ರಿಕ್ತ ಪರಿಸ್ಥಿತಿಯಿದ್ದಾಗ, 2002ರಲ್ಲಿ ಗುಜರಾತ್ ನಲ್ಲಿ ಹಿಂದೂಗಳು ಪ್ರತಿಕ್ರಿಯಿಸಿದ್ದಂತೆ ಇಲ್ಲಿನ ಹಿಂದೂಗಳೂ ಪ್ರತಿಕ್ರಿಯಿಸಬೇಕು ಎಂದು ಸಿಂಗ್ ಕರೆ ನೀಡಿದ್ದರು. “ಇಂದು ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ಸುರಕ್ಷಿತರಾಗಿಲ್ಲ. ಬಂಗಾಳದ ಹಿಂದೂಗಳು ಗುಜರಾತ್ ನಲ್ಲಿ ನಡೆದ ಕೋಮು ಗಲಭೆಯಲ್ಲಿ ಹಿಂದೂಗಳು ಭಾಗವಹಿಸಿದಂತೆ ಪ್ರತಿಕ್ರಿಯಿಸಬೇಕು. ಇಲ್ಲವಾದರೆ. ಬಂಗಾಳ ಶೀಘ್ರವೇ ಬಾಂಗ್ಲಾದೇಶ್ ಆಗಲಿದೆ’’ ಎಂದು ಅವರು ಹೇಳಿದ್ದರು.

ಥಿಯೇಟರುಗಳನ್ನು ಸುಡುವ ಬೆದರಿಕೆ :
‘ಪದ್ಮಾವತ್’ ಸಿನೆಮಾ ಪ್ರದರ್ಶಿಸಿದರೆ, ಹೈದರಾಬಾದ್ ನ ಸಿನೆಮಾ ಥಿಯೇಟರ್ ಗಳಿಗೆ ಬೆಂಕಿ ಹಚ್ಚುವುದಾಗಿ ಸಿಂಗ್ ಬೆದರಿಕೆಯೊಡ್ಡಿದ್ದರು. ಸಿನೆಮಾಕ್ಕೆ ಬಹಿಷ್ಕಾರ ಹಾಕುವಂತೆ ಕರೆ ನೀಡಿದ್ದ ಅವರು, ಈ ವಿವಾದಿತ ಹೇಳಿಕೆಯ ಮೂಲಕ ರಾಷ್ಟ್ರೀಯ ಸುದ್ದಿಯಾಗಿದ್ದರು.

“ರಾಮ ಮಂದಿರಕ್ಕಾಗಿ ಜೀವ ತೆಗೆಯಲೂ ಸಿದ್ಧ, ಜೀವ ನೀಡಲೂ ಸಿದ್ಧ” :
ಬಾಬರಿ ಮಸೀದಿ ಧ್ವಂಸದ ಬಗ್ಗೆ ಹೇಳಿಕೆ ನೀಡಿದ್ದ ಸಿಂಗ್, ರಾಮ ಮಂದಿರಕ್ಕಾಗಿ ತಾನು ಜೀವ ತೆಗೆಯಲೂ ಸಿದ್ಧ, ಜೀವ ನೀಡಲೂ ಸಿದ್ಧ ಎಂಬ ವಿವಾದಿತ ಹೇಳಿಕೆ 2017ರ ಏಪ್ರಿಲ್ ನಲ್ಲಿ ನೀಡಿದ್ದರು.

“ಪಿಣರಾಯಿ ವಿಜಯನ್ ಹಿಂದೂಗಳ ಕೊಲೆಗಾರ” :
ಸಿಪಿಐಎಂ ಹೈದರಾಬಾದ್ ನಲ್ಲಿ 2017ರಲ್ಲಿ ಆಯೋಜಿಸಿದ್ದ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಲಿದ್ದ ಕಾರ್ಯಕ್ರಮ ರದ್ದುಗೊಳಿಸುವಂತೆ ಸಿಂಗ್ ಬೆದರಿಕೆಯೊಡ್ಡಿದ್ದರು. ಕೇರಳದಲ್ಲಿ ಹಿಂದೂಗಳು ಸುರಕ್ಷಿತರಾಗಿಲ್ಲ ಎಂದು ಹೇಳಿದ್ದ ಸಿಂಗ್, ಪಿಣರಾಯಿ “ಹಿಂದೂಗಳ ಕೊಲೆಗಾರ’’ ಎಂದು ಕರೆದಿದ್ದರು.

ಫೋಟೊ ಕೃಪೆ : ಸಿಯಾಸತ್ ಡಾಟ್ ಕಾಮ್

Join Whatsapp