ಮಂಗಳೂರು: ಪಿ.ಎ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘವಾಗಿರುವ “ಪೇಸ್ ನೆಕ್ಸ್ಟ್” (PaceNext) ಹಾಗೂ ಕೊಣಾಜೆ ಪೊಲೀಸ್ ಠಾಣೆ ಇವರ ಸಹಯೋಗದೊಂದಿಗೆ ಸೈಬರ್ ವಂಚನಾ ಜಾಗೃತಿ ಕಾರ್ಯಕ್ರಮವನ್ನು ಗುರುವಾರ ಬೆಳಿಗ್ಗೆ 9:30ಕ್ಕೆ ದೇರಳಕಟ್ಟೆ ಬಿಸಿಸಿ ಹಾಲ್ ಎದುರು ನಡೆಯಲಿದೆ.
ಕಾರ್ಯಕ್ರಮದಲ್ಲಿ ಮಂಗಳೂರಿನ ಪೊಲೀಸ್ ಅಯುಕ್ತರಾದ ಶ್ರೀ ಅನುಪಮ್ ಅಗರ್ವಾಲ್ ಆಗಮಿಸಲಿದ್ದಾರೆ. ಸೈಬರ್ ಕ್ರೈಮ್ ಗಳ ಮಾಹಿತಿ ನೀಡಲು ಕೊಣಾಜೆ ಪೊಲೀಸ್ ಠಾಣೆ ಇದರ ಸಹ ವೃತ್ತ ನಿರೀಕ್ಷಕರಾದ ಶ್ರೀ ಪುನೀತ್ ಗೋವನ್ ಕರ್ ಹಾಗೂ ಪಿ ಎ ಕಾಲೇಜಿನ ಸಿಎಸ್ಇ ವಿಭಾಗದ ಪ್ರಾಧ್ಯಾಪಕರಾದ ಮುಹಮ್ಮದ್ ಸೈಫುದ್ದೀನ್ ರವರು ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ ಎ ಕಾಲೇಜಿನ ಪ್ರಾಂಶುಪಾಲರಾದ ಡಾ| ರಮೀಝ್ ಎಮ್ ಕೆ ಯವರು ವಹಿಸಲಿದ್ದಾರೆ.
ಆನ್ ಲೈನ್ ವ್ಯಾಪಾರ, ಡಿಜಿಟಲ್ ಪಾವತಿಗಳು, ಹೆಚ್ಚುತ್ತಿರುವ ಸೈಬರ್ ಕೊಡು-ಕೊಳ್ಳುವಿಕೆಗಳ ನಡುವೆ, ಸಜೀವ ಜಗತ್ತಿನಲ್ಲಿರುವಂತೆ ವರ್ಚುವಲ್ ಜಗತ್ತಿನಲ್ಲೂ ಕಳ್ಳರು, ವಂಚಕರು, ದಗಾಕೋರರು ಕಾಣಿಸಿಕೊಳ್ಳತೊಡಗಿದ್ದಾರೆ. ಸಜೀವ ಜಗತ್ತಿನಲ್ಲಿ ಇರುವಷ್ಟು ಭಯವೂ ಅಲ್ಲಿ ಸದ್ಯಕ್ಕೆ ಇಲ್ಲದಿರುವುದರಿಂದಾಗಿ, ಅವರು ಆಡಿದ್ದೇ ಆಟವಾಗಿದೆ. ತಂತ್ರಜ್ಞಾನದ ವೇಗಕ್ಕೆ ವ್ಯವಸ್ಥೆಯ ವೇಗ ಎಲ್ಲೂ ಸರಿಸಾಟಿಯಾಗಿ ನಿಲ್ಲದಿರುವುದರ ಪರಿಣಾಮವಾಗಿ ಡಿಜಿಟಲ್ ಮೋಸ ಬಹಳ ಅಪಾಯಕಾರಿಯಾಗಿ ಮಾರ್ಪಾಡಿದೆ.
ಬಹಳ ಅಗ್ಗ ದರದಲ್ಲಿ ಸಿಗುವ ಮೊಬೈಲ್ ಡೇಟಾದ ಕಾರಣದಿಂದಾಗಿ, ತಮ್ಮ ಬಲಿಪಾಶುಗಳಿಗೆ ಗಾಳ ಹಾಕುವವರು ಮತ್ತು ಪಿಗ್ಗಿ ಬೀಳುವವರ ಪ್ರಮಾಣವು ಹೆಚ್ಚಾಗುತ್ತಿದೆ. 2019ರಲ್ಲಿ ಭಾರತದಲ್ಲಿ ದಾಖಲಾದ ಸೈಬರ್ ಕ್ರೈಂಗಳ ಪ್ರಮಾಣ ಕೇವಲ 26,049. ಆದರೆ 2023ರಲ್ಲಿ ಈ ಪ್ರಮಾಣ 15.5 ಲಕ್ಷಕ್ಕೆ ಏರಿದೆ. ಅಂದರೆ, ಈಗ ಪ್ರತಿದಿನ ದೇಶದಲ್ಲಿ ಸುಮಾರು 5,000 ಸೈಬರ್ ಅಪರಾಧದ ದೂರುಗಳು ಸರಕಾರವನ್ನು ತಲುಪುತ್ತಿವೆ. ಕಳೆದ 5 ವರ್ಷಗಳಲ್ಲಿ ದೇಶದಲ್ಲಿ 31 ಲಕ್ಷ ಸೈಬರ್ ಅಪರಾಧಗಳು ಸರಕಾರಕ್ಕೆ ವರದಿ ಆಗಿದ್ದು, ಅವುಗಳಲ್ಲಿ 66 ಸಾವಿರ ಅಪರಾಧಗಳ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. 2021-22ರ ನಡುವೆ ಈ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿರುವವರು ಕೇವಲ 1,143 ಮಂದಿ ಎಂದು ಎನ್‌ಸಿಆರ್‌ಬಿ ದಾಖಲೆಗಳು ಹೇಳುತ್ತಿವೆ.
ಬ್ಲೇಡ್ ಕಂಪೆನಿಗಳ ಹೂಡಿಕೆ ಆಮಿಷ, ಸಾಲದ ಆ್ಯಪ್‌ಗಳು, ಫೇಕ್ ಕಸ್ಟಮರ್‌ಕೇರ್ ಕರೆಗಳು, ಸೆಕ್ಸ್‌ಟಾರ್ಶನ್, ಆಧಾರ್; ಯುಪಿಐ; ಇ-ವಾಲೆಟ್; ಡೆಬಿಟ್-ಕ್ರೆಡಿಟ್ ಕಾರ್ಡ್ ಮೋಸಗಳು; ಪಾರ್ಟ್ ಟೈಂ ಉದ್ಯೋಗದ ಹೆಸರಿನ ಟೋಪಿ… ಹೀಗೆ ನೂರಾರು ಬಗೆಯಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಈ ವಂಚನೆಗಳಲ್ಲಿ ಶೇ. 50-60ರಷ್ಟು ದೇಶದೊಳಗಿನ ವಂಚಕರಿಂದಲೇ ಸಂಭವಿಸುತ್ತಿದೆ. ಇಂತಹ ಸಂದಭದಲ್ಲಿ ಜನಸಾಮಾನ್ಯರಿಗೆ ಇದರ ಬಗ್ಗೆ ಜನಜಾಗೃತಿಗೊಳಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.