ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ: ಸಚಿವ ಬಿ.ಸಿ ನಾಗೇಶ್ ರನ್ನು ಬಂಧಿಸಿ – ಕ್ಯಾಂಪಸ್ ಫ್ರಂಟ್

Prasthutha|

ನವದೆಹಲಿ: ಕರ್ನಾಟಕ ಸರ್ಕಾರದ 40% ಕಮಿಷನ್ ದಂಧೆ ಎಗ್ಗಿಲ್ಲದೆ ನಡೆಯುವ ಬಗ್ಗೆ ಎಲ್ಲಾ ಕಡೆಗಳಲ್ಲಿಯೂ ವ್ಯಾಪಕ ಆಕ್ರೋಶಕ್ಕೆ ಗುರಿಯಾಗುತ್ತಿರುವಾಗಲೇ ಶಿಕ್ಷಣ ಸಚಿವರ ಸಮಕ್ಷಮದಲ್ಲಿಯೇ ಶಿಕ್ಷಣ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ 13 ಸಾವಿರ ಶಿಕ್ಷಣ ಸಂಸ್ಥೆಗಳು ಆರೋಪ ಮಾಡಿವೆ. ಈ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರು ಮತ್ತು ಲೋಕಾಯುಕ್ತ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥ ಸಚಿವರನ್ನು ಮತ್ತು ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಗ್ರಹಿಸಿದೆ.

- Advertisement -

ರಾಜ್ಯದ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳು ನಡೆಯಲು ಸಚಿವರಿಗೆ 40% ಕಮಿಷನ್ ನೀಡಲೇಬೇಕು ಎಂದು ಎಲ್ಲಾ ಕಡೆಗಳಿಂದಲೂ ಆರೋಪ ಬರುತ್ತಿದ್ದರೂ ತನಿಖಾ ಸಂಸ್ಥೆಗಳು ಇದನ್ನು ಗಂಭೀರವಾಗಿ ಪರಿಗಣಿಸದೇ ಸರ್ಕಾರದ ವಿರುದ್ಧ ಮೌನ ನಿಲುವನ್ನು ತಾಳಿರುವುದು ಖಂಡನೀಯ. ಇಂತಹ ಗಂಭಿರವಾದ ಆರೋಪಗಳನ್ನು ಮರೆಮಾಚುವ ಸಲುವಾಗಿ ಧರ್ಮ ದಂಗಲ್, ಹಿಜಾಬ್, ಮದ್ರಸ ಶಿಕ್ಷಣದಲ್ಲಿ ಹಸ್ತಕ್ಷೇಪ, ಭಗವಧ್ಗೀತೆ ಇತ್ಯಾದಿ ವಿಚಾರಗಳನ್ನು ನಿರಂತರವಾಗಿ ಚರ್ಚೆಗೆ ತಂದಿಡುತ್ತಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಟೀಕಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೇರಿದ ಅಂದಿನಿಂದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನಿರಂತರವಾಗಿ ಬಯಲಿಗೆ ಬರುತ್ತಿದ್ದು, ಪಿಎಸ್ ಐ ಹಗರಣ, ಸಮವಸ್ತ್ರ ಹಗರಣ, ವಿವಿಧ ಪರೀಕ್ಷೆಗಳಲ್ಲಿ ಹಗರಣ, 40% ಕಮಿಷನ್ ಇದೀಗ ಶಿಕ್ಷಣ ಇಲಾಖೆಯಲ್ಲೂ ಬಹುದೊಡ್ಡ ಹಗರಣ ಬೆಳಕಿಗೆ ಬಂದಿದ್ದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರ ಬಣ್ಣ ಬಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹೊಸ ಶೈಕ್ಷಣಿಕ ವರ್ಷ ಆರಂಭಗೊಂಡರೂ ಸರಕಾರ ನಿಗದಿಪಡಿಸಿದ ಪಠ್ಯಪುಸ್ತಕಗಳು ಇನ್ನೂ ಶಾಲೆಗಳಿಗೆ ತಲುಪಿಲ್ಲ. ಖಾಸಗಿ ಶಾಲೆಗಳಿಗೆ ಪದೇ ಪದೇ ಅಧಿಕಾರಿಗಳು ತೊಂದರೆ ಕೊಡುತ್ತಿದ್ದು ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆ.

- Advertisement -

ಇನ್ನೊಂದೆಡೆ ಸರ್ಕಾರಿ ಶಾಲೆಗಳನ್ನು ಮಾರಾಟಕ್ಕೆ ಮುಂದಾಗಿದ್ದಾರೆ.

ಒಟ್ಟಾರೆಯಾಗಿ ರಾಜ್ಯ ಕಂಡ ಅತೀ ಭ್ರಷ್ಟ ಮತ್ತು ಕೋಮುವಾದಿ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ರವರು ತಕ್ಷಣ ರಾಜೀನಾಮೆ ನೀಡಬೇಕು.

ನ್ಯಾಯಾಲಯ ಮಧ್ಯಪ್ರವೇಶಿಸಿ ಲೋಕಾಯುಕ್ತ ಇಲಾಖೆ ಸೂಕ್ತ ತನಿಖೆ ನಡೆಸಿ ಹಗರಣದ ಹಿಂದಿರುವ ಕೈಗಳನ್ನು ಶೀಘ್ರ ಬಂಧಿಸಬೇಕೆಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp