ಬಂಟ್ವಾಳ: ಕೋಮು ಸೂಕ್ಷ್ಮ ಪ್ರದೇಶವಾದ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಹಾಗೂ ಕುಲಶೇಖರ ಎಂಬಲ್ಲಿ ದೇಶವಿರೋಧಿಯಾದ “ಹಿಂದೂ ರಾಷ್ಟ್ರ” ಎಂಬ ಫ್ಲೆಕ್ಸ್ ಹಾಕಲಾಗಿದ್ದು, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಇದುವರೆಗೆ ಅದನ್ನು ತೆರವುಗೊಳಿಸಲು ಮುಂದಾಗಿಲ್ಲ.
ಕಲ್ಲಡ್ಕ ಮತ್ತು ಕುಲಶೇಖರ ಎಂಬಲ್ಲಿ ಹಾಕಲಾಗಿರುವ ಫ್ಲೆಕ್ಸ್ ನಲ್ಲಿ ಗಣೇಶೋತ್ಸವಕ್ಕೆ ಶುಭಾಶಯಗಳು ಎಂದು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ನಾಥ್ ತಿಲಕ್ ಅವರ ಚಿತ್ರ ಹಾಕಲಾಗಿದೆ.
ಅದರ ಪಕ್ಕದಲ್ಲಿ ಮತ್ತೊಂದು ಬ್ಯಾನರ್ ನಲ್ಲಿ ಬ್ರಿಟಿಷರೊಂದಿಗೆ ಕ್ಷಮೆ ಕೇಳಿ ಸ್ವಾತಂತ್ರ್ಯ ಹೋರಾಟದಿಂದ ಹಿಂದೆ ಸರಿದ ವಿ.ಡಿ.ಸಾವರ್ಕರ್ ಅವರ ಫೋಟೋ ಹಾಕಲಾಗಿದ್ದು, ಅದರ ಮೇಲೆ ದೇಶವಿರೋಧಿ ಹೇಳಿಕೆಯಾದ “ಹಿಂದೂ ರಾಷ್ಟ್ರ” ಎಂದು ಬರೆಯಲಾಗಿದೆ. ಅದರ ಕೆಳಗೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಎಂದು ಬರೆಯಲಾಗಿದೆ.
“ಭಾರತ ಜಾತ್ಯತೀತ ರಾಷ್ಟ್ರ. ಹಿಂದೂ ರಾಷ್ಟ್ರ ಎಂದು ಹೇಳುವುದು ದೇಶದ್ರೋಹ ಅಲ್ಲವೇ?” ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಅಧಿಕಾರಿಗಳ ಸಭೆ ನಡೆಸಿ, ವಿವಾದಾತ್ಮಕ ಮತ್ತು ಪ್ರಚೋದನಕಾರಿ ಫ್ಲೆಕ್ಸ್ ಹಾಕಿದರೆ ತಕ್ಷಣ ಅವುಗಳನ್ನು ತೆರವು ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.